ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ವಿವಿಧೆಡೆ ಬುಧವಾರ ಬೆಳಗಿನ ಜಾವ ಸುಮಾರು 3 ಗಂಟೆ ವೇಳೆಯಲ್ಲಿ ಮತ್ತೊಮ್ಮೆ ಲಘು ಭೂಕಂಪದ ಅನುಭವವಾಗಿದೆ.
ಅಡ್ಗಲ್ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಕಂಪನದ ಅನುಭವವಾಗಿದೆ. 3 ಗಂಟೆಯಿಂದ 2-3 ಬಾರಿ ಭೂಮಿ ಕಂಪಿಸಿದ ಅನುಭವವಾಗಿದೆ. ಗ್ರಾಮದ ಕೆಲ ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಳ್ಳುವಷ್ಟು ಭೂಮಿ ಕಂಪಿಸಿದೆ. ಇದರಿಂದ ಭಯಭೀತರಾದ ಗ್ರಾಮಸ್ಥರು ಮನೆಯಿಂದ ಹೊರ ಬಂದಿದ್ದಾರೆ.
ಭೂಕಂಪವು 2.6 ತೀವ್ರತೆ ಯಿಂದ ಕೂಡಿದ್ದು ಲಘು ಭೂಕಂಪವಾಗಿದೆ. ಅಡ್ಡಗಲ್ಲು ಗ್ರಾಮಪಂಚಾಯಿತಿ ವ್ಯಾಪ್ತಿಯ ಭೂಮಿಯ ಆಳದಲ್ಲಿ 12 ಕಿಮೀ ಆಳದಲ್ಲಿ ಭೂಕಂಪದ ಕೇಂದ್ರವು ಕೇಂದ್ರೀಕೃತವಾಗಿತ್ತೆಂದು ಕರ್ನಾಟಕ ರಾಜ್ಯ ಸ್ವಾಭಾವಿಕ ವಿಪತ್ತು ನಿರ್ವಹಣಾ ಸಂಸ್ಥೆ ದೃಢಪಡಿಸಿದೆ ಇದು ಲಘು ಭೂಕಂಪವಾಗಿದ್ದು ಯಾರಿಗೂ ಯಾವುದೇ ಅಪಾಯವಿಲ್ಲ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲವೆಂದು ಜಿಲ್ಲಾಧಿಕಾರಿ ಆರ್. ಲತಾ ತಿಳಿಸಿದ್ದಾರೆ.
ಕಳೆದ ಸಾಲಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ, ಶಿಡ್ಲಘಟ್ಟ ಚಿಕ್ಕಬಳ್ಳಾಪುರ ತಾಲೂಕುಗಳಲ್ಲಿ ಆರಂಭಗೊಂಡಿರುವ ಲಘು ಭೂಕಂಪಗಳು ಜನರನ್ನು ಆತಂಕಕ್ಕೀಡು ಮಾಡಿದ್ದರೆ ಭೂ ವಿಜ್ಞಾನಿಗಳಿಗೆ ಇದರ ಕಾರಣ ಪತ್ತೆ ಹಚ್ಚುವುದು ಸವಾಲಾಗಿ ಪರಿಣಮಿಸಿದೆ. 20 ವರ್ಷಗಳ ನಂತರ ಬಂದ ದಾಖಲೆ ಪ್ರಮಾಣದ ಮಳೆಯು ಭೂಮಿಯ ಪದರಗಳಲ್ಲಿ ಇಂಗುವ ಸಂದರ್ಭದ ಪ್ರಕ್ರಿಯೆ ಇದಾಗಿದೆ ಎಂದು ಭೂ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.
ಕೆಪಿಸಿಸಿ ಸದಸ್ಯ ವಿನಯ ಎಂ ಶ್ಯಾಮ ಅವರು ಇತ್ತೀಚೆಗೆ ಭೂಕಂಪ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ತುಂಬಿದರಲ್ಲದೆ ಆಹಾರ ಸಾಮಗ್ರಿಗಳನ್ನು ವಿತರಿಸಿದ್ದಾರೆ.