ಚಿಕ್ಕಬಳ್ಳಾಪುರ : ಚಳಿ ತಾಳಲಾರದೆ ಆತ್ಮರಕ್ಷಣೆಗಾಗಿ ಹಾಕಿಕೊಂಡಿದ್ದ ಕಲ್ಲಿದ್ದಲು ಹೊಗೆಯಿಂದ ಒಂದೇ ಕುಟುಂಬದ ಮೂವರು ಅಸ್ವಸ್ಥಗೊಂಡು ಒಬ್ಬಳು ಉಸಿರಾಟದ ತೊಂದರೆಯಿಂದ ಮೃತಪಟ್ಟಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.
ತುಮಕೂರು ಜಿಲ್ಲೆಯ ಕೊರಟಗೆರೆಯ ಮಾರುತಿ ನಗರದ ಅರ್ಚನಾ(15) ಮೃತಪಟ್ಟ ನತದೃಷ್ಠೆ ಘಟನೆಯಲ್ಲಿ ವೀರಾಂಜಿನೇಯ, ಆತನ ಪತ್ನಿ ಶಾಂತಮ್ಮ ಹಾಗೂ ಮತ್ತೊರ್ವ ಪುತ್ರಿ ಅಂಕಿತಾ ಉಸಿರಾಟದ ತೊಂದರೆಯಿಂದ ಅಸ್ವಸ್ಥಗೊಂಡಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಗೌರಿಬಿದನೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಮೂರು ಆರೋಗ್ಯ ಸ್ಥಿರವಾಗಿದೆ ಎಂದು ಮಂಚೇನಹಳ್ಳಿ ಪೋಲಿಸ್‍ಠಾಣೆಯ ಪಿಎಸ್‍ಐ ತಿಳಿಸಿದ್ದಾರೆ.
ತೊಂಡೆಬಾವಿ ಹೋಬಳಿಯ ಅಲೀಪುರ ಮೀರ್ ಅಲೀ ಅಬ್ಬಾಸ್ ಎಂಬುವರ ಇಟ್ಟಿಗೆ ಕಾರ್ಖಾನೆಯಲ್ಲಿ ತುಮಕೂರು ಜಿಲ್ಲೆಯ ಕೊರಟಗೆರೆಯ ಮಾರುತಿ ನಗರದ ವೀರಾಂಜಿನೇಯ ಕೂಲಿ ಕೆಲಸ ಮಾಡಿಕೊಂಡಿದ್ದು ನಿನ್ನೆ ರಾತ್ರಿ ಚಳಿ ತಾಳಲಾರದೆ ಬಿಸಿಗಾಗಿ ಕಲ್ಲಿದ್ದಲಿಂದ ಅಗ್ನಿಕುಂಡ ಮಾಡಿಕೊಂಡು ಮನೆಯ ಕಿಟಕಿ ಮತ್ತು ಬಾಗಿಲು ಮುಚ್ಚಿಕೊಂಡಿದ್ದರಿಂದ ಹೊಗೆ ಹೊರಹೋಗದೆ ಉಸಿರಾಟದ ತೊಂದರೆಯಿಂದ ನಾಲ್ವರು ಅಸ್ವಸ್ಥಗೊಂಡು ಅದರಲ್ಲಿ ವೀರಾಂಜಿನೇಯ ಎಂಬುವರ ಪುತ್ರಿ ಅರ್ಚನಾ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾಳೆ.
ಇದನ್ನೂ ಓದಿ: ಆಟವಾಡುತ್ತಿದ್ದ 5 ಮಕ್ಕಳು ನಾಪತ್ತೆ: ಘಟನೆ ನಡೆದ ಒಂದೇ ಗಂಟೆಯಲ್ಲಿ ಪತ್ತೆಹಚ್ಚಿದ ಪೊಲೀಸರು
ಘಟನಾ ಸ್ಥಳಕ್ಕೆ ಗೌರಿಬಿದನೂರು ತಾಲೂಕಿನ ಸಿಪಿಐ ರವಿ, ಪಿಎಸ್‍ಐ ಲಕ್ಷ್ಮೀನಾರಾಯಣ ಭೇಟಿ ನೀಡಿ ಪರಿಶೀಲಿಸಿದ್ದಾರೆ ಈ ಸಂಬಂಧ ಮಂಚೇನಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.