Advertisement

Chikkaballapur Municipality: ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಹುದ್ದೆ ಖಾಲಿ!

02:51 PM Sep 20, 2023 | Team Udayavani |

ಚಿಕ್ಕಬಳ್ಳಾಪುರ: ಮೊದಲೇ ಅಕ್ರಮಗಳಿಗೆ ಕುಖ್ಯಾತಿ ಪಡೆದಿರುವ ಜಿಲ್ಲಾ ಕೇಂದ್ರದ ನಗರಸಭೆಯಲ್ಲಿ ಮಂಜೂರಾದ ಒಟ್ಟು ಹುದ್ದೆಗಳ ಪೈಕಿ ನೂರಾರು ಹುದ್ದೆಗಳು ಖಾಲಿ ಇದ್ದರೂ, ಹಲವು ವರ್ಷಗಳಿಂದ ಭರ್ತಿ ಆಗದೇ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ತೀವ್ರ ಆಡಚಣೆ ಆಗುತ್ತಿದ್ದರೂ ಹೇಳ್ಳೋರು ಕೇಳ್ಳೋವರು ಇಲ್ಲವಾಗಿದೆ.

Advertisement

ಒಟ್ಟು ಚಿಕ್ಕಬಳ್ಳಾಪುರ ನಗರಸಭೆಗೆ ಒಟ್ಟು 237 ಹುದ್ದೆಗಳು ಮಂಜೂರಾದ ಇಲ್ಲಿವರೆಗೂ ಭರ್ತಿ ಆಗಿರುವುದು ಕೇವಲ 79 ಹುದ್ದೆಗಳು ಮಾತ್ರ. ಇನ್ನೂ ವಿವಿಧ 160 ಹುದ್ದೆಗಳು ಭರ್ತಿ ಆಗದೇ ಖಾಲಿ ಇದ್ದರೂ ಬೇಕಾದ ಅಗತ್ಯ ಅಧಿಕಾರಿ, ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ನಗರಸಭೆಗೆ ಸಾಧ್ಯವಾಗಿಲ್ಲ. ಜಿಲ್ಲಾ ಕೇಂದ್ರವಾಗಿರುವ ಚಿಕ್ಕಬಳ್ಳಾಪುರ ನಗರಸಭೆ 16ವರ್ಷ ಪೂರೈಸಿದೆ. ಜಿಲ್ಲಾ ಕೇಂದ್ರ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ. ನಗರದ ಜನಸಂಖ್ಯೆ 1 ಲಕ್ಷಕ್ಕೆ ಸಮೀಪಿಸುತ್ತಿದೆ. ಸ್ವತ್ಛತೆ, ನೈರ್ಮಲ್ಯ, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ವಿದ್ಯುತ್‌ ದೀಪಗಳು, ಕಸ ವಿಲೇವಾರಿ ಮತ್ತಿತರ ಮೂಲ ಸೌಕರ್ಯಕ್ಕೆ ನಗರಸಭೆಗೆ ಮಾನವ ಸಂಪನ್ಮೂಲ ಬೇಕೆ ಬೇಕು. ಆದರೆ, ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಒಟ್ಟು ಮಂಜೂರಾದ ಹುದ್ದೆಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಹುದ್ದೆಗಳು ಭರ್ತಿ ಆಗದೇ ಉಳಿದಿದ್ದು, ನಗರಸಭೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲು ದಿನ ನಿತ್ಯದ ಕೆಲಸ ಕಾರ್ಯಗಳಿಗೆ ಅಗತ್ಯವಾದ ಸಿಬ್ಬಂದಿ ಕೊರತೆಯಿಂದ ನಗರಸಭೆ ಸೊರಗುತ್ತಿವೆ.

ಭರ್ತಿಯಾಗದ ಚಾಲಕರ ಹುದ್ದೆಗಳು: ವಿಶೇಷವಾಗಿ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ರಸ್ತೆ, ಚರಂಡಿ, ಕಟ್ಟಡ ನಿರ್ಮಾಣ ಮತ್ತಿತರ ಸಾರ್ವಜನಿಕ ಕೆಲಸ ಕಾರ್ಯಗಳ ಉಸ್ತುವಾರಿ ವಹಿಸಬೇಕಾದ ಕಾರ್ಯಪಾಲಕ ಅಭಿಯಂತರರ ಹುದ್ದೆ ಹಲವು ವರ್ಷಗಳಿಂದ ಖಾಲಿ ಇದ್ದು, ನಗರಸಭೆಯ ಹಣಕಾಸಿನ ಮೇಲುಸ್ತುವಾರಿ ನೋಡಿಕೊಳ್ಳುವ ಲೆಕ್ಕಧೀಕ್ಷಕರು, ಲೆಕ್ಕಿಗರ ಹುದ್ದೆಗಳ ಕೊರತೆ ಎದ್ದು ಕಾಣುತ್ತಿದೆ. 6 ಮಂದಿ ಪೈಕಿ 3 ಮಂದಿ ಆರೋಗ್ಯ ನಿರೀಕ್ಷಕ ಕೆಲಸ ಮಾಡುತ್ತಿದ್ದು 3 ಹುದ್ದೆ ಖಾಲಿ ಇದೆ. ನೀರು ಸರಬರಾಜು ವಿಭಾಗದಲ್ಲಿ ಎಲ್ಲಾ ಹುದ್ದೆಗಳು ಖಾಲಿ ಇವೆ. ಗಾರ್ಡನ್ಸ್‌ ಹುದ್ದೆಗಳು 4 ಖಾಲಿ ಇವೆ. 52 ಪೌರ ಕಾರ್ಮಿಕರ ಹುದ್ದೆಗಳು ನಗರಸಭೆಯಲ್ಲಿ ಖಾಲಿ ಇವೆ. ಎಇಇ ಹುದ್ದೆ ಖಾಲಿ ಜತೆಗೆ ಇಬ್ಬರು ಜೆಇ ಹುದ್ದೆಗಳು ಖಾಲಿ ಇವೆ. ನೀರು ಸರಬರಾಜುಗೆ ಬೇಕಾದ ಸಹಾಯಕರು 30 ಹುದ್ದೆಗಳ ಪೈಕಿ ಇಬ್ಬರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಉಳಿದ 28 ಹುದ್ದೆಗಳು ಖಾಲಿ ಇವೆ. ನಗರಸಭೆ ವಾಹನಗಳಿಗೆ ಅವಶ್ಯಕವಾಗಿ ಬೇಕಾದ ಚಾಲಕರ ಹುದ್ದೆಗಳು ಭರ್ತಿ ಆಗದೇ ಹಲವು ವರ್ಷಗಳಿಂದ ಉಳಿದುಕೊಂಡಿವೆ.

ನಗರಸಭೆಯಲ್ಲಿ ಸಿಬ್ಬಂದಿ ನೇಮಕಕ್ಕೆ ಒತ್ತಾಯ: ಜಿಲ್ಲಾ ಕೇಂದ್ರ ಹೊಂದಿರುವ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಅಗತ್ಯಕ್ಕೆ ತಕ್ಕಂತೆ ಅಧಿಕಾರಿ, ಸಿಬ್ಬಂದಿ ಹೊಂದದೆ, ನೂರಾರು ಹುದ್ದೆಗಳು ಭರ್ತಿ ಆಗದೇ ಖಾಲಿ ಉಳಿದಿದೆ. ಇದರಿಂದ ಸಾರ್ವಜನಿಕರ ಕೆಲಸ, ಕಾರ್ಯಗಳಿಗೆ ತೀವ್ರ ಆಡಚಣೆ ಆಗುತ್ತದೆ. ಎಇಇ ಯಿಂದ ಹಿಡಿದು ಜೆಇಇಗಳ ಕೊರತೆ ಎದ್ದು ಕಾಣುತ್ತಿದೆ. ಇದರಿಂದ ಕಾಮಗಾರಿಗಳನ್ನು ತಾಂತ್ರಿಕವಾಗಿ ಉಸ್ತುವಾರಿ ನೋಡಿಕೊಳ್ಳಲು ನಗರಸಭೆಗೆ ಯಾರು ದಿಕ್ಕು ಇಲ್ಲದಂತಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಕ್ಷೇತ್ರದ ಶಾಸಕರು ಇತ್ತ ಕಡೆ ಗಮನ ಹರಿಸಿ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಸುಲಭವಾಗಿ ಆಗುವಂತೆ ಕೊರತೆ ಇರುವ ಅಗತ್ಯ ಅಧಿಕಾರಿ, ಸಿಬ್ಬಂದಿಯನ್ನು ನೇಮಿಸಬೇಕೆಂದು ನಗರಸಭಾ ಸದಸ್ಯರು ಆಗಿರುವ ಹಿರಿಯ ವಕೀಲ ಆರ್‌.ಮಟಮಪ್ಪ ಒತ್ತಾಯಿಸಿದ್ದಾರೆ.

ನಗರಸಭೆ ಲೆಕ್ಕ ಪರಿಶೋಧನಾ ವರದಿಯಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ಉಲ್ಲೇಖ!: ಇನ್ನೂ ನಗರಸಭೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಲೆಕ್ಕ ಪರಿಶೋಧನಾ ವರದಿಯಲ್ಲಿಯು ಸಹ ಉಲ್ಲೇಖ ಆಗಿದೆ. 2018-19 ರಿಂದ 2021-22ರ ವರೆಗೂ ನಡೆದಿರುವ ಲೆಕ್ಕ ಪರಿಶೋಧನೆಯಲ್ಲಿ ಸ್ಥಳೀಯ ಚಿಕ್ಕಬಳ್ಳಾಪುರ ನಗರಸಭೆಗೆ 2004 ರಂತೆ ನಗರಸಭೆಗೆ ಒಟ್ಟು 239 ಹುದ್ದೆಗಳನ್ನು ಮಂಜೂರು ಮಾಡಿದ್ದು, ಆದರಲ್ಲಿ 64 ಹುದ್ದೆಗಳು ಮಾತ್ರ ಭರ್ತಿ ಆಗಿವೆ. ಉಳಿದ 175 ಹುದ್ದೆಗಳು ಖಾಲಿ ಇರುವುದು ಕಂಡು ಬಂದಿದೆಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. ಆ ಬಳಿಕ ಒಂದಿಷ್ಟು ಅಧಿಕಾರಿ, ಸಿಬ್ಬಂದಿ ನೇಮಕವಾದರೂ ಪ್ರಸ್ತುತ 160 ಹುದ್ದೆಗಳು ಖಾಲಿ ಇರುವುದು ಕಂಡು ಬಂದಿದೆ. ಹುದ್ದೆಗಳು ಖಾಲಿ ಇರುವುದು ನಿಜ, ಆದರೆ ಎಲ್ಲಾ ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವಂತೆ ನಮ್ಮ ನಗರಸಭೆಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇವೆ. ಆದರೆ ನಾವು ಏನು ಮಾಡಲಿಕ್ಕೆ ಆಗುವುದಿಲ್ಲ. ಇರುವ ಅಧಿಕಾರಿ, ಸಿಬ್ಬಂದಿಯನ್ನು ಬಳಸಿಕೊಂಡು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಎಷ್ಟು ಸಾಧ್ಯವೋ ಅಷ್ಟನ್ನು ಶಕ್ತಿ ಮೀರಿ ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ. -ಮಂಜುನಾಥ, ನಗರಸಭೆ ಆಯುಕ್ತರು, ಚಿಕ್ಕಬಳ್ಳಾಪುರ. – ಕಾಗತಿ ನಾಗರಾಜಪ್ಪ

Advertisement
Advertisement

Udayavani is now on Telegram. Click here to join our channel and stay updated with the latest news.

Next