Advertisement

Chikkaballapur: ಬಿಕೋ ಎನ್ನುತ್ತಿದೆ ಜಿಲ್ಲಾಡಳಿತ ಕಚೇರಿ!

04:00 PM Oct 26, 2023 | Team Udayavani |

ಚಿಕ್ಕಬಳ್ಳಾಪುರ: ದಸರಾ ಪ್ರಯುಕ್ತ ಸಿಕ್ಕ ಸಾಲು ಸಾಲು ರಜೆಗಳು ಮುಗಿದರೂ ಜಿಲ್ಲಾ ಮಟ್ಟದ ಬಹುತೇಕ ಅಧಿಕಾರಿಗಳು ಸೇವೆಗೆ ಹಾಜರಾಗದ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲೆಯ ಆಡಳಿತದ ಶಕ್ತಿ ಕೇಂದ್ರ ಜಿಲ್ಲಾಡಳಿತ ಭವನ ಮಾತ್ರ ಬಿಕೋ ಎನ್ನುತ್ತಿತ್ತು. ಜಿಲ್ಲಾದ್ಯಂತ ಈ ವರ್ಷ ವಾಡಿಕೆ ಮಳೆ ಸಕಾಲದಲ್ಲಿ ಕೈ ಕೊಟ್ಟ ಪರಿಣಾಮ ಇಡೀ ಜಿಲ್ಲೆಯು ಸಂಪೂರ್ಣ ಬರಗಾಲಕ್ಕೆ ತುತ್ತಾಗಿದೆ.

Advertisement

ಆದರೆ ದಸರಾ ರಜೆಗಳು ಮುಗಿದರೂ ಅಧಿಕಾರಿಗಳು, ಸಿಬ್ಬಂದಿ ಇನ್ನೂ ರಜೆ ಗುಂಗಿನಲ್ಲಿ ಮುಳಗಿರುವ ಪರಿಣಾಮ ಸದಾ ಜನರಿಂದ ಜಿಗಿಗುಡುತ್ತಿದ್ದ ಶಕ್ತಿ ಕೇಂದ್ರ ಜಿಲ್ಲಾಡಳಿತದಲ್ಲಿನ ಸರ್ಕಾರಿ ಕಚೇರಿಗಳು ಅಧಿಕಾರಿ, ಸಿಬ್ಬಂದಿ ಇಲ್ಲದೇ ಬಣಗುಡುತ್ತಿದ್ದವು. ಸಾಮಾನ್ಯವಾಗಿ ದಸರಾ ಪ್ರಯುಕ್ತ ಸರ್ಕಾರಿ ಶಾಲಾ, ಕಾಲೇಜುಗಳಿಗೆ ವಾರದ ರಜೆ ಸಿಗುತ್ತದೆ. ಸರ್ಕಾರಿ ನೌಕರರಿಗೆ ಅಧಿಕೃತವಾಗಿ ಆಯುಧ ಪೂಜೆ ಹಾಗೂ ವಿಜಯ ದಶಮಿಗೆ ರಜೆ ಸಿಗುತ್ತದೆ. ಈ ಬಾರಿ ಶನಿವಾರ ಭಾನುವಾರ ರಜೆ ಜತೆಗೆ ದಸರಾ ಪ್ರಯುಕ್ತ ಸೋಮವಾರ, ಮಂಗಳವಾರ ಕೂಡ ಸರ್ಕಾರಿ ರಜೆ ಸಿಕ್ಕಿತ್ತು.

ಹೀಗಾಗಿ ಸರ್ಕಾರಿ ಸೇವೆಯಲ್ಲಿ ಅಧಿಕಾರಿಗಳು, ನೌಕರರು ಕುಟುಂಬ ಸಮೇತ ಮೈಸೂರು ಸೇರಿದಂತೆ ರಾಜ್ಯದ ವಿವಿಧ ಪ್ರವಾಸಿ ತಾಣಗಳಿಗೆ, ಧಾರ್ಮಿಕ ಸ್ಥಳಗಳಿಗೆ ತೆರಳಿದ್ದಾರೆ. ಹೀಗಾಗಿ ರಜೆಗಳು ಕಳೆದರೂ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಾತ್ರ ಇನ್ನೂ ಸಾರ್ವಜನಿಕರ ಸೇವೆಗೆ ಬಾರದ ಕಾರಣ ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಆವರಣ ಸೇರಿದಂತೆ ಜಿಪಂ ಹಾಗೂ ಸರ್ಕಾರಿ ಕಚೇರಿಗಳು ಅಧಿಕಾರಿಗಳು ಇಲ್ಲದೇ ಖಾಲಿ ಕುರ್ಚಿಗಳ ದರ್ಶನವಾಯಿತು.

ಬರೀಗೈಯಲ್ಲಿ ಜನ ವಾಪಸ್‌: ಕೆಲ ಕಚೇರಿಗಳಲ್ಲಿ ಮಾತ್ರ ಅಧಿಕಾರಿಗಳು ಸಿಬ್ಬಂದಿ ಕಂಡು ಬಂದರೂ ಬಹುಪಾಲು ಕಚೇರಿಗಳಲ್ಲಿ ಅಧಿಕಾರಿಗಳ ಕೂರುವ ಕುರ್ಚಿಗಳು ಖಾಲಿ ಇದ್ದು ಕಚೇರಿ ಸಿಬ್ಬಂದಿ ಹಾಗು ಸಹಾಯಕರು ಮಾತ್ರ ಕಂಡು ಬಂದರು. ದಸರಾಗೆ ಸಿಕ್ಕಿ ನಾಲ್ಕೈದು ದಿನಗಳ ರಜೆ ಜೊತೆಗೆ ಕೆಲವರು ಸಿಎಲ್‌ ಹಾಕಿಕೊಂಡು ಕುಟುಂಬಸ್ಥರೊಂದಿಗೆ ದೂರದ ಪ್ರವಾಸಿ ತಾಣಗಳಿಗೆ ತೆರಳಿರುವ ಪರಿಣಾಮ ಬುಧವಾರ ಕಚೇರಿಗಳಿಗೆ ಆಗಮಿಸಲಿರಲಿಲ್ಲ.

ಹೀಗಾಗಿ ಅಧಿಕಾರಿಗಳು ಸಿಗಬಹುದೆಂಬ ನಿರೀಕ್ಷೆಯೊಂದಿಗೆ ತಮ್ಮ ಕೆಲಸ ಕಾರ್ಯಗಳಿಗೆಂದು ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ್ದ ಸಾರ್ವಜನಿಕರು ಕಚೇರಿಗಳಲ್ಲಿ ಅಧಿಕಾರಿಗಳ ದರ್ಶನ ಆಗದೇ ಬರೀಗೈಯಲ್ಲಿ ವಾಪಸ್‌ ತೆರಳಿದ ದೃಶ್ಯಗಳು ಕಂಡು ಬಂದವು. ಜಿಲ್ಲಾಡಳಿತ ಭವನದಲ್ಲಿ ಕಾರ್ಮಿಕ, ಸಹಕಾರ, ಅಬಕಾರಿ, ಆರೋಗ್ಯ, ಆಯುಷ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪಿಂಚಿಣಿ, ನಗರಾಭಿವೃದ್ದಿ, ಆಹಾರ, ಭೂ ಮಾಪನ ಸೇರಿದಂತೆ ಸಾಕಷ್ಟು ಸರ್ಕಾರಿ ಕಚೇರಿಗಳಿದ್ದರೂ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೆರಣಿಕೆಯಷ್ಟು ಮಾತ್ರ ಕಂಡು ಬಂದರು.

Advertisement

ರಜೆ ಮುಗಿದರೂ ಸೇವೆಗೆ ಹಾಜರಾಗದ ಸಿಬ್ಬಂದಿ: ಇಡೀ ಜಿಲ್ಲೆ ಈ ವರ್ಷ ಬರಗಾಲಕ್ಕೆ ತುತ್ತಾಗಿದೆ. ಅನ್ನದಾತರು ಮಳೆ ಬೆಳೆ ಇಲ್ಲದೆ ಕಂಗಾಲಾಗಿದ್ದಾರೆ. ಜಿಲ್ಲೆಯ ಸುಮಾರು 30 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಆದರೆ ದಸರಾ ನೆಪದಲ್ಲಿ ಸಿಕ್ಕ ರಜೆಗಳನ್ನು ಬಳಸಿಕೊಂಡು ಅಧಿಕಾರಶಾಹಿ ಪ್ರವಾಸದ ನೆಪದಲ್ಲಿ ಮೋಜು, ಮಸ್ತಿಗೆ ತೆರಳಿದೆ. ಸಾರ್ವತ್ರಿಕ ರಜೆಗಳು ಮುಗಿದರೂ ಸಾರ್ವಜನಿಕರ ಸೇವೆಗೆ ಅಧಿಕಾರಿಗಳು ಮರಳದೇ ಇರುವುದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ. ಕೆಲವೊಂದು ಇಲಾಖೆಗಳ ಅಧಿಕಾರಿಗಳು ಕಾಟಾಚಾರಕ್ಕೆ ಬೆಳಗ್ಗೆ ಬಂದು ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿ ಮನೆಗೆ ತೆರಳಿವೆಯೆಂಬ ಆರೋಪ ಕೇಳಿ ಬಂದಿದೆ.

– ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next