ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇದುವರೆಗೂ ಕೋವಿಡ್ 19 ಸೋಂಕು ಕಾಣಿಸಿಕೊಂಡಿದ್ದ 152 ಮಂದಿ ಪೈಕಿ 150 ಮಂದಿ ಕೋವಿಡ್ -19ನಿಂದ ಸಂಪೂರ್ಣ ಗುಣಮುಖರಾಗಿ ಹಸಿರು ವಲಯದತ್ತ ಹೆಜ್ಜೆ ಹಾಕಿದ್ದ ಜಿಲ್ಲೆಗೆ ಮತ್ತೆ ಕೋವಿಡ್ 19 ಸೋಂಕು ಅಪ್ಪಳಿಸಿದ್ದು, ಇನ್ನಷ್ಟು ಸೋಂಕಿತರ ಸಂಖ್ಯೆ ಹೆಚ್ಚಾಗುವ ಆತಂಕ ಮೂಡಿಸಿದೆ.
ಒಂದೇ ದಿನ ಜಿಲ್ಲೆಯ ಗೌರಿಬಿದನೂರು, ಶಿಡ್ಲಘಟ್ಟ ಹಾಗೂ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ತಲಾ ಒಂದೊಂದು ಕೋವಿಡ್ 19 ಪ್ರಕರಣಗಳು ಕಂಡು ಬಂದಿದ್ದು, ಇದುವರೆಗೂ ಸೋಂಕು ಕಾಣಿಸಿಕೊಳ್ಳದೇ ಹಸಿರು ವಲಯವಾಗಿದ್ದ ಶಿಡ್ಲಘಟ್ಟ ತಾಲೂಕಿನಲ್ಲಿ ಕೋವಿಡ್-19 ಕಾಣಿಸಿ ಕೊಳ್ಳುವ ಮೂಲಕ ಆ ತಾಲೂಕಿನ ಜನರಲ್ಲಿ ತಲ್ಲಣ ಮೂಡಿಸಿದ್ದು, ಗುಡಿಬಂಡೆ ತಾಲೂಕು ಹೊರತುಪಡಿಸಿ ಈಗ ಜಿಲ್ಲೆಯ ಎಲ್ಲಾ ತಾಲೂಕು ಗಳಿಗೂ ಕೋವಿಡ್ 19 ಪ್ರವೇಶ ಮಾಡಿದೆ.
ಸೋಂಕಿತರು 155 ಏರಿಕೆ : ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 152ಕ್ಕೆ ಸೀಮಿತವಾಗಿದ್ದ ಕೋವಿಡ್-19 ಸೋಂಕಿತರು ಸಂಖ್ಯೆ ಇದೀಗ 155 ದಾಟಿದೆ. ಮುಂಬೈನಿಂದ ಆಗಮಿಸಿರುವ ಮೂವರಿಗೆ ಪಾಸಿಟಿವ್ ಬಂದಿರುವುದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಾಗಿದೆ. ಸೋಂಕಿತರ ಪೈಕಿ ಇಬ್ಬರು 56 ವರ್ಷದ ಹಾಗೂ 25 ವರ್ಷದ ಮಹಿಳೆ, 20 ವರ್ಷದ ಯುವಕನಲ್ಲಿ ಕೋವಿಡ್ 19 ಕಾಣಿಸಿ ಕೊಂಡಿದೆ. ಮೂವರನ್ನು ನಗರದ ಹಳೆ ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪಿಸಿರುವ ಕೋವಿಡ್ -19 ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.
ಮಹಾರಾಷ್ಟ್ರದಿಂದ ಜಿಲ್ಲೆಗೆ ಇದುವರೆಗೂ 385 ಮಂದಿ ನಾಗರಿಕರು ಆಗಮಿಸಿದ್ದು, ಆ ಪೈಕಿ 383 ಮಂದಿಯನ್ನು ಗಂಟಲು ದ್ರವದ ಪರೀಕ್ಷೆಗೆ ಒಳಪಡಿಸಿದ್ದು ಅವರಲ್ಲಿ 120 ಮಂದಿಗೆ ಪಾಸಿಟೀವ್ ಬಂದಿದ್ದರೆ, 249 ಮಂದಿಗೆ ನೆಗೆಟಿವ್ ಬಂದಿದೆ. ಉಳಿದ 14 ಜನರ ಪರೀಕ್ಷೆಯ ಫಲಿತಾಂಶ ಬರಬೇಕಿದೆ. ಜಿಲ್ಲೆಯಲ್ಲಿ ಒಟ್ಟಾರೆ ಇದುವರೆಗೂ 12,3 87 ಮಂದಿಗೆ ಗಂಟಲು ದ್ರವದ ಮಾದರಿ ಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, 12,024 ಮಂದಿಗೆ ನೆಗೆಟಿವ್ ಬಂದಿದೆ. 155 ಪಾಸಿಟಿವ್ ಬಂದಿದ್ದು, ಇಬ್ಬರು ಸೋಂಕಿ ನಿಂದ ಮೃತಪಟ್ಟರೆ ಮತ್ತೂಬ್ಬರು ಕೋವಿಡ್ ಅಲ್ಲದ ಅನ್ಯ ಕಾರಣದಿಂದ ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಬುಧವಾರ ಹೊಸದಾಗಿ ಗೌರಿಬಿದನೂರು, ಚಿಕ್ಕಬಳ್ಳಾಪುರ ಹಾಗೂ ಶಿಡ್ಲಘಟ್ಟ ತಾಲೂಕಿನಲ್ಲಿ ತಲಾ ಒಂದೊಂದು ಪ್ರಕರಣ ಕಂಡು ಬಂದಿದ್ದು, ಸೋಂಕಿ ತರ ಸಂಪರ್ಕಕ್ಕೆ ಬಂದಿದ್ದ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಮಾಡುವ ಕಾರ್ಯ ನಡೆದಿದೆ. ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 155 ಕೋವಿಡ್ 19 ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ.
-ಡಾ.ಯೋಗೇಶ್‌ಗೌಡ, ಜಿಲ್ಲಾ ಆರೋಗ್ಯಾಧಿಕಾರಿ