Advertisement

Chikkaballapur: ಡಾ.ಕೆ.ಸುಧಾಕರ್‌ಗೆ ಜೈ ಎಂದ ಎಂಟಿಬಿ!

03:28 PM Mar 27, 2024 | Team Udayavani |

ಚಿಕ್ಕಬಳ್ಳಾಪುರ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲುವುದರ ಜತೆಗೆ ತಾವು ಇಬ್ಬರು ಸೋತ ಬಳಿಕ ನಾನೊಂದು ತೀರ ನೀನೊಂದು ತೀರ ಎನ್ನುವಂಹತೆ ಇದ್ದ ಮಾಜಿ ಸಚಿವರಾದ ಎಂಟಿಬಿ ನಾಗರಾಜ್‌ ಹಾಗೂ ಡಾ.ಕೆ.ಸುಧಾಕರ್‌ ಸಂಬಂಧ ಇದೀಗ ಮತ್ತೆ ಚಿಗುರೊಡೆದಿದೆ.

Advertisement

ಹೌದು, ಲೋಕಸಭಾ ಚುನಾವಣೆಗೆ ಡಾ.ಕೆ.ಸುಧಾಕರ್‌ ಪಕ್ಷದೊಳಗಿನ ಪ್ರಬಲ ವಿರೋಧದ ನಡುವೆಯು ಬಿಜೆಪಿ ಟಿಕೆಟ್‌ ದಕ್ಕಿಸಿಕೊಳ್ಳುತ್ತಿದ್ದಂತೆ ಹೊಸಕೋಟೆ ಮಾಜಿ ಸಚಿವರಾದ ಹಾಲಿ ವಿಧಾನ ಪರಿಷತ್ತು ಸದಸ್ಯ ಎಂಟಿಬಿ ನಾಗರಾಜ್‌ ಡಾ.ಕೆ.ಸುಧಾಕರ್‌ಗೆ ಜೈ ಎನ್ನುವ ಮೂಲಕ ಸುಧಾಕರ್‌ ಪರ ಬ್ಯಾಟಿಂಗ್‌ ಬೀಸುತ್ತಿದ್ದಾರೆ.

ಕಳೆದ ವಿಧಾನಸಭೆಯಲ್ಲಿ ಇಬ್ಬರು ಬಿಜೆಪಿಯಿಂದ ಸ್ಪರ್ಧೆ ಮಾಡಿ ಸೋತಿದ್ದರು. ಇದಾದ ಬಳಿಕ ಡಾ.ಕೆ.ಸುಧಾಕರ್‌ ಹಾಗೂ ಎಂಟಿಬಿ ನಾಗರಾಜ್‌ ನಡುವೆ ರಾಜಕೀಯವಾಗಿ ವೈಮನಸ್ಸು ಉಂಟಾಗಿ ಪರಸ್ಪರ ದೂರ ಉಳಿದಿದ್ದರು. ಎಂಟಿಬಿ ನಾಗರಾಜ್‌ ಕೆಲ ಸಭೆ, ಸಮಾರಂಭಗಳಲ್ಲಿ ಬಹಿರಂಗವಾಗಿ ಸುಧಾಕರ್‌ ವಿರುದ್ಧ ಕಿಡಿಕಾರಿದ್ದರು. ಚುನಾವಣೆ ಬಳಿಕ ಇಬ್ಬರೂ ಎಲ್ಲೂ ಬಹಿರಂಗವಾಗಿ ಒಂದು ಕಡೆ ಕಾಣಿಸಿಕೊಂಡಿರಲಿಲ್ಲ.

2018 ರಲ್ಲಿ ಎಂಟಿಬಿ, ಡಾ.ಕೆ.ಸುಧಾಕರ್‌ ಇಬ್ಬರು ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದರು. ಎಂಟಿಬಿ ನಾಗರಾಜ್‌ ವಸತಿ ಸಚಿವರು ಆಗಿದ್ದರೆ ಡಾ.ಕೆ.ಸುಧಾಕರ್‌ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಆಗಿದ್ದರು. ಆದರೆ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಸರ್ಕಾರಕ್ಕೆ ಸೆಡ್ಡು ಹೊಡೆದು 2019 ರಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ಇಬ್ಬರು ರಾಜೀನಾಮೆ ನೀಡುವ ಮೂಲಕ ಆಪರೇಷನ್‌ ಕಮಲಕ್ಕೆ ಒಳಗಾಗಿ ಉಪಚುನಾವಣೆ ಎದುರಿಸಿದರು. ಉಪ ಚುನಾವಣೆಯಲ್ಲಿ ಡಾ.ಕೆ.ಸುಧಾಕರ್‌, ಹ್ಯಾಟ್ರಿಕ್‌ ಗೆಲುವು ಸಾಧಿಸಿದರೆ ಎಂಟಿಬಿ ನಾಗರಾಜ್‌ ಹೋಸಕೋಟೆ ಕ್ಷೇತ್ರದಲ್ಲಿ ಶರತ್‌ ಬಚ್ಚೇಗೌಡ ವಿರುದ್ಧ ಸೋತರು. ಆದರೂ ಎಂಟಿಬಿ ನಾಗರಾಜ್‌ ಹಾಗೂ ಡಾ.ಕೆ.ಸುಧಾಕರ್‌ ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದರು. 2023ರಲ್ಲಿ ಇಬ್ಬರು ಸೋತ ಬಳಿಕ ಇಬ್ಬರ ನಡುವೆ ರಾಜಕೀಯ ಸಂಬಂಧ ಹಳಸಿ ಪರಸ್ಪರ ಅಂತರ ಕಾಯ್ದುಕೊಂಡಿದ್ದರು. ಆದರೆ, ಈಗ ಎಂಟಿಬಿ ನಾಗರಾಜ್‌ ಲೋಕಸಭಾ ಚುನಾವಣೆಯಲ್ಲಿ ಡಾ.ಕೆ.ಸುಧಾಕರ್‌ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಅಭ್ಯರ್ಥಿ ಆಗುತ್ತಿದ್ದಂತೆ ಮತ್ತೆ ಸುಧಾಕರ್‌ಗೆ ಜೈ ಎಂದು ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಕ್ಷೇತ್ರದಲ್ಲಿರುವ 1 ಲಕ್ಷದಷ್ಟು ಇರುವ ಕುರುಬ ಸಮುದಾಯದ ಮತ ಸೆಳೆಯಲು ಡಾ.ಕೆ.ಸುಧಾಕರ್‌ಗೆ ಎಂಟಿಬಿ ನೆರವಾಗಲಿದ್ದಾರೆ ಎಂದು ರಾಜಕೀಯ ತಜ್ಞರು ಲೆಕ್ಕಾಚಾರ ಹಾಕಿದ್ದಾರೆ.

ಗಡ್ಡ ಬೋಳಿಸಿದ ಡಾ.ಕೆ. ಸುಧಾಕರ್‌!:

Advertisement

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸೋತ ಬಳಿಕ ಗಡ್ಡ ಬಿಟ್ಟು ಗಮನ ಸೆಳೆದಿದ್ದ ಡಾ.ಕೆ.ಸುಧಾಕರ್‌, ಲೋಕಸಭಾ ಚುನಾವಣೆಯಲ್ಲಿ ತಮಗೆ ಬಿಜೆಪಿ ಟಿಕೆಟ್‌ ಖಾತ್ರಿ ಆಗಿ ಪಟ್ಟಿ ಪ್ರಕಟಗೊಳ್ಳುತ್ತಿದ್ದಂತೆ ಗಡ್ಡ ಬೋಳಿಸಿಕೊಂಡು ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಮೊದಲ ಹಂತದಲ್ಲಿ ಬಿಜೆಪಿ, ಜೆಡಿಎಸ್‌ ಹಿರಿಯ ನಾಯಕರನ್ನು ಭೇಟಿ ಮಾಡಿ ಟಿಕೆಟ್‌ ಸಿಕ್ಕಿದ್ದಕ್ಕೆ ಧನ್ಯವಾದ ಅರ್ಪಿಸಿದ ಡಾ.ಕೆ.ಸುಧಾಕರ್‌ ಇದೀಗ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಪ್ರಮುಖ ದೇಗುಲಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುವ ಮೂಲಕ ಗೆಲುವಿಗಾಗಿ ಟೆಂಪಲ್‌ ರನ್‌ ಮಾಡುತ್ತಿದ್ದಾರೆ.

ಪ್ರದೀಪ್‌, ಸುಧಾಕರ್‌ ನಡುವೆ ಮತ್ತೆ ಮಾತಿನ ಯುದ್ಧ! :

ಅತ್ತ ಲೋಕಸಭಾ ಚುನಾವಣೆಗೆ ಬಿಜೆಪಿ ಡಾ.ಕೆ.ಸುಧಾಕರ್‌ಗೆ ಟಿಕೆಟ್‌ ಘೋಷಣೆ ಮಾಡುತ್ತಿದ್ದಂತೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ರಬೆಲ್‌ ಆಗಿದ್ದಾರೆ. ಸುಧಾಕರ್‌ಗೆ ಟಿಕೆಟ್‌ ನೀಡಿರುವ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಸುಧಾಕರ್‌ರನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸುವುದಾಗಿ ಸವಾಲು ಹಾಕಿದ್ದಾರೆ. ಆದರೆ ಶಾಸಕ ಪ್ರದೀಪ್‌ ಈಶ್ವರ್‌ ಮಾರಿಗೆ ಸೊಪ್ಪು ಹಾಕದ ಡಾ.ಕೆ.ಸುಧಾಕರ್‌ ಎಂದಿನಂತೆ ಅವನೊಬ್ಬ ಆಯೋಗ್ಯ ಎಂದು ಮಾರ್ಮಿಕವಾಗಿ ಡೈಲಾಗ್‌ ಶಾಸಕನಿಗೆ ತಿರುಗೇಟು ನೀಡಿದ್ದಾರೆ.

– ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next