ಚಿಕ್ಕಬಳ್ಳಾಪುರ: ಇಂದು ಮಕ್ಕಳ ದಿನಾಚರಣೆ, ಇಡೀ ದೇಶವೇ ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲು ಸಜ್ಜಾಗಿದೆ. ಆದರೆ ವಿಪರ್ಯಾಸ ಜಿಲ್ಲೆಯಲ್ಲಿ ಮಕ್ಕಳಲ್ಲಿ ಸೃಜನಾತ್ಮಕ ಚಟುವಟಿಕೆಗಳನ್ನು ನಡೆಸಲು ಅವಶ್ಯಕವಾದ ಬಾಲ ಭವನ ನಿರ್ಮಾಣಕ್ಕೆ ದಶಕಗಳಿಂದ ಗ್ರಹಣ ಬಡಿದಿದೆ.
ಹೌದು, ಜಿಲ್ಲೆಯಲ್ಲಿ ಬಾಲ ಭವನ ನಿರ್ಮಾಣಕ್ಕೆ ಜಿಲ್ಲಾಡಳಿತ ಸೂಕ್ತ ಜಾಗ ಕಲ್ಪಿಸದ ಪರಿಣಾಮ ಹಲವು ವರ್ಷಗಳಿಂದ ಜಿಲ್ಲೆಯ ಪಾಲಿಗೆ ಬಾಲ ಭವನ ಬರೀ ಕನಸಾಗಿಯೇ ಉಳಿದುಕೊಂಡಿದ್ದು, ಮಕ್ಕಳ ಆಟೋಟ ಗಳಿಗೆ ಅಗತ್ಯವಾದ ಬಾಲ ಭವನ ನಿರ್ಮಾಣ ಯಾವಾಗ ಎಂಬುದು ಉತ್ತರ ಸಿಗದ ಪ್ರಶ್ನೆಯಾಗಿದೆ. ಜಿಲ್ಲೆಯಲ್ಲಿ 0-18 ವರ್ಷದೊಳಗಿನ ಮಕ್ಕಳು ಲಕ್ಷಾಂತರ ಸಂಖ್ಯೆಯಲ್ಲಿದ್ದಾರೆ. ಆದರೆ ಮಕ್ಕಳಲ್ಲಿ ಕಲೆ, ಸಂಸ್ಕೃತಿ, ಪಂರಪರೆ ಜೊತೆಗೆ ಮಕ್ಕಳಲ್ಲಿ ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಪೂರಕವಾಗಿ ಅವಶ್ಯಕವಾದ ಕೌಶಲ್ಯಗಳನ್ನು ಬೆಳೆಸಲು ಹಾಗೂ ಮಕ್ಕಳಲ್ಲಿನ ಸೃಜನಶೀಲತೆಯನ್ನು ಗುರುತಿಸುವುದು ಸೇರಿದಂತೆ ಮಕ್ಕಳ ಮಾನಸಿಕ ಹಾಗೂ ದೈಹಿಕವಾದ ಬೌದ್ಧಿಕ ಬೆಳವಣಿಗೆಗೆ ಪೂರಕ ವಾದ ಚುಟುವಟಿಕೆಗಳನ್ನು ನಡೆಸಲು ಪ್ರತಿ ಜಿಲ್ಲೆಯಲ್ಲೂ ಬಾಲ ಭವನ ಇದ್ದರೂ ಚಿಕ್ಕಬಳ್ಳಾಪುರ ಜಿಲ್ಲೆಯ ಪಾಲಿಗೆ ಮಾತ್ರ ಅದು ಇನ್ನೂ ಮರೀಚಿಕೆಯಾಗಿಯೆ ಉಳಿದಿದೆ.
ಚಿಕ್ಕಬಳ್ಳಾಪುರ ಸ್ವತಂತ್ರ ಜಿಲ್ಲೆಯಾಗಿ 16 ವರ್ಷಗಳು ಸಂದಿವೆ. ಆದರೆ ಇಲ್ಲಿವರೆಗೂ ಸರ್ಕಾರಿ ಇಲಾಖೆ ಗಳಿಗೆ ಸಂಬಂಧಿಸಿದ ಅನೇಕ ಕಟ್ಟಡಗಳು ತಲೆ ಎತ್ತಿವೆ. ಆದರೆ ಜಿಲ್ಲೆಯ ಮಕ್ಕಳಿಗೆ ಅವಶ್ಯಕವಾದ ಬಾಲ ಭವನ ಮಾತ್ರ ನನೆಗುದಿಗೆ ಬಿದ್ದಿ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.
ಮಕ್ಕಳ ಆಟೋಟಗಳಿಗೆ ಪೂರಕ ಬಾಲ ಭವನ: ಪ್ರತಿ ವರ್ಷ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ಮಕ್ಕಳಿಗಾಗಿಯೆ ಬೇಸಿಗೆ ಶಿಬಿರ, ಮಕ್ಕಳ ಹಬ್ಬ, ಕಲೆ, ಸಂಸ್ಕೃತಿಗೆ ಸಂಬಂಧಿಸಿ ಹಾಗೂ ಮಕ್ಕಳಲ್ಲಿನ ಸೃಜನಶೀಲತೆಯನ್ನು ಪತ್ತೆ ಹಚ್ಚಲು ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ದೌರ್ಜನ್ಯ ತಡೆಯ ಸಂಬಂಧ ವಿವಿಧ ಕಾರ್ಯಕ್ರಮಗಳನ್ನು ಕಾಲಕಾಲಕ್ಕೆ ಇಲಾಖೆಯಿಂದ ಆಯೋಜಿಸಲಾಗುತ್ತದೆ. ಆದರೆ ಇಂದಿಗೂ ಜಿಲ್ಲಾ ಕೇಂದ್ರದಲ್ಲಿ ಬಾಲ ಭವನದ ಕೊರತೆಯ ಪರಿಣಾಮ ಮಕ್ಕಳ ಸಮಗ್ರ ಅಭಿವೃದ್ಧಿಗೆ ಪೂರಕವಾದ ಚಟುವಟಿಕೆಗಳನ್ನು ನಡೆಸಲು ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಜಿಲ್ಲಾಡಳಿತ ಕೂಡ ಇದರ ಬಗ್ಗೆ ಗಂಭೀರ ಪ್ರಯತ್ನ ನಡೆಸದ ಪರಿಣಾಮ ಜಿಲ್ಲೆಯಲ್ಲಿ ಬಾಲ ಭವನಕ್ಕೆ ಗ್ರಹಣ ಬಿಡದೇ ಮುಂದುವರೆದಿದ್ದು, ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸಿ ಬಾಲ ಭವನ ನಿರ್ಮಾಣಕ್ಕೆ ಬೇಕಾದ ಜಮೀನು ಗುರುತಿಸುವ ಕಾರ್ಯ ಬದ್ಧತೆ ಹಾಗೂ ಪ್ರಾಮಾಣಿಕತೆಯಿಂದ ಮಾಡಬೇಕಿದೆ.
ಜಾಗ ಸಿಗದೇ ಅನುದಾನ ವಾಪಸ್: ಬಾಲ ಭವನ ನಿರ್ಮಾಣಕ್ಕೆ ನಗರದ ರಂಗಸ್ಥಳದ ಬಳಿ ಜಾಗ ಗುರುತಿಸಲಾಗಿತ್ತು. ಅದು ಸೂಕ್ತವಲ್ಲದ ಕಾರಣ 2016-17ರಲ್ಲಿ ಜಿಲ್ಲೆಗೆ ಬಿಡುಗಡೆ ಆಗಿದ್ದ ಒಟ್ಟು 14 ಲಕ್ಷ ರೂ. ಅನುದಾನ ವಾಪಸ್ ಹೋಗಿದೆ ಎಂದು ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಅಶ್ವತ್ಥಮ್ಮ ತಿಳಿಸಿದರು. ಸೂಕ್ತ ಜಾಗ ಸಿಕ್ಕರೆ ಬಾಲ ಭವನ ನಿರ್ಮಾಣಕ್ಕೆ ಮತ್ತೆ ಯೋಜನೆ ರೂಪಿಸಲಾಗುವುದು.