ಮಳೆಗಾಲದಲ್ಲಿ ತಿರುಗಾಟ ನಡೆಸುವ ಯಕ್ಷಗಾನ ಚಿಕ್ಕಮೇಳ ಎಂಬ ಕಲಾ ಪ್ರಭೇದ ವೃತ್ತಿ ಮೇಳಗಳ ವಿಶ್ರಾಂತಿಯಿಂದ ಉಂಟಾಗುವ ಶೂನ್ಯವನ್ನು ತುಂಬುವ ಕೆಲಸವನ್ನು ಸಮರ್ಥವಾಗಿ ಮಾಡುತ್ತಿವೆ. ಮುಮ್ಮೇಳ ಮತ್ತು ಹಿಮ್ಮೇಳದ ಕಲಾವಿದರು ಚಿಕ್ಕ ತಂಡವನ್ನು ಕಟ್ಟಿಕೊಂಡು ಪೌರಾಣಿಕ ಪ್ರಸಂಗಗಳ ತುಣುಕುಗಳನ್ನು ಮನೆ ಮನೆಗಳಲ್ಲಿ ಪ್ರದರ್ಶಿಸುತ್ತ ಕಲೆಗೊಂದು ಮರುಚೈತನ್ಯ ನೀಡುತ್ತಿದ್ದಾರೆ.
ತಿರುಗಾಟದಲ್ಲಿ ಬದುಕು ಸಾಗಿಸುತ್ತಿದ್ದ ಕಲಾವಿದರುಗಳಿಗೆ ಮಳೆಗಾಲದಲ್ಲಿ ವಿಶ್ರಾಂತಿ ದೊರೆಯುತ್ತದೆ. ಪ್ರಸಿದ್ಧ ಕಲಾವಿದರು ತಂಡ ಕಟ್ಟಿಕೊಂಡು ಮಳೆಗಾಲದ ತಿರುಗಾಟವಾಗಿ ಮುಂಬಯಿ, ಬೆಂಗಳೂರು, ಹುಬ್ಬಳ್ಳಿ, ಹೈದರಾಬಾದ್ ಮೊದಲಾದ ನಗರಗಳಿಗೆ ಹೋಗುತ್ತಾರೆ. ಇತ್ತ ಉದಯೋನ್ಮುಖ ಕಲಾವಿದರು ಚಿಕ್ಕಮೇಳವನ್ನು ಕಟ್ಟಿಕೊಂಡು ಊರಿನಲ್ಲಿ ತಿರುಗಾಟ ಮಾಡುತ್ತ ಕಲಾಸಕ್ತರ ಮನೆಯ ಅಂಗಳ, ಚಾವಡಿಯಲ್ಲಿ ಆಟ ಆಡುತ್ತಾರೆ. ಭಾಗವತರು, ಚಂಡೆ ವಾದಕರು, ಮದ್ದಳೆ ವಾದಕರು, ಸ್ತ್ರೀ ಮತ್ತು ಪುರುಷ ಪಾತ್ರಧಾರಿ ಹಾಗೂ ಪ್ರಚಾರಕರು ಚಿಕ್ಕಮೇಳದಲ್ಲಿ ಇರುತ್ತಾರೆ.
ಒಂದು ಮನೆಯಲ್ಲಿ ಚಿಕ್ಕಮೇಳದ ತಂಡ ಮನೆ ಮಂದಿ ಬೇಡಿಕೆಯಂತೆ 10 ರಿಂದ 15 ನಿಮಿಷಗಳ ಸಮಯ ಪ್ರದರ್ಶನ ನೀಡುತ್ತವೆ. ಸಂಜೆ 6 ಗಂಟೆಗೆ ಕಲಾಯಾಣ ಆರಂಭಗೊಂಡು ರಾತ್ರಿ ಹತ್ತು ಗಂಟೆ ಸುಮಾರಿಗೆ ದಿನದ ತಿರುಗಾಟವನ್ನು ಸಮಾಪನಗೊಳಿಸುತ್ತಾರೆ. ನಂತರ ಚಿಕ್ಕಮೇಳದ ಕಲಾವಿದರು ಊರಿನ ದೇವಸ್ಥಾನದಲ್ಲಿ ತಂಗುತ್ತಾರೆ. ಮರುದಿನ ಮತ್ತೂಂದು ಊರಿಗೆ ಚಿಕ್ಕಮೇಳದ ಪಯಣ ಸಾಗುತ್ತದೆ. ಸಂಜೆಯ ತಿರುಗಾಟಕ್ಕೆ ಹೊರಡುವ ಮೊದಲು ತಂಡದ ಸದಸ್ಯರು ಊರಿನ ಮನೆ ಮನೆಗಳಿಗೆ ಭೇಟಿ ನೀಡುತ್ತಾರೆ. ಅಲ್ಲಿ ಚಿಕ್ಕಮೇಳ ಪ್ರದರ್ಶನದ ಸಂಪ್ರದಾಯ ಮತ್ತು ನಿಯಮಾವಳಿಗಳ ಕರಪತ್ರಗಳನ್ನು ಹಂಚುತ್ತಾರೆ. ಮೇಳ ಬರುವ ನಿಗದಿತ ಸಮಯ ಹೇಳಿ ಬರುತ್ತಾರೆ. ಮನೆ ಮಂದಿ ಚಿಕ್ಕಮೇಳದ ಗಣಪತಿ ದೇವರಿಗೆ ಅಕ್ಕಿ, ತೆಂಗಿನ ಕಾಯಿಯನ್ನು ಸಮರ್ಪಿಸಿ ಇಡುತ್ತಾರೆ.ಯಕ್ಷಗಾನವು ಬೆಳಕಿನ ಸೇವೆ ಎಂಬ ಗೌರವ ಇದ್ದ ಕಾರಣದಿಂದ ದೀಪ ಹಚ್ಚಿ ಇಡುತ್ತಾರೆ. ಮನೆಯ ಚಾವಡಿಯೇ ರಂಗಸ್ಥಳವಾಗಿ, ಮನೆ ಮಂದಿಯೇ ಪ್ರೇಕ್ಷಕರಾಗಿ ಯಕ್ಷಗಾನದ ಪ್ರಸಂಗದ ತುಣುಕನ್ನು ಸವಿಯುತ್ತಾರೆ. ಆಟ ಮುಗಿದ ಬಳಿಕ ಮನೆ ಯಜಮಾನ ನೀಡಿದ ಕಾಣಿಕೆಯನ್ನು ಪಡೆದು ಕಲಾವಿದರು ಮುಂದಿನ ಮನೆಗೆ ಸಾಗುತ್ತಾರೆ.
ವೇಷಭೂಷಣದ ಬಾಡಿಗೆ, ತಿರುಗಾಡಲು ಬಳಸಿಕೊಂಡಿರುವ ವಾಹನದ ಬಾಡಿಗೆ ಎÇÉಾ ಕಳೆದು ಸ್ವಲ್ಪ ಹಣ ಕಲಾವಿದರುಗಳಿಗೆ ಉಳಿಯುತ್ತದೆ. ಚಿಕ್ಕಮೇಳದ ಮಳೆಗಾಲದ ತಿರುಗಾಟದಿಂದ ಕಲೆಯ ಪ್ರಚಾರವು ಆಗುವುದಲ್ಲದೆ, ಜನರಲ್ಲಿ ಕಲಾಸಕ್ತಿ ಮೂಡುಸುತ್ತಿದೆ. ವೃತ್ತಿ ವಿರಾಮದಲ್ಲಿ ಇರುವ ಕಲಾವಿದರ ಬದುಕೂ ಸಾಗುತ್ತದೆ. ಅಲ್ಲದೆ ಹೊಸ ಕಲಾವಿದರಿಗೆ ಕಲಾಭ್ಯಾಸವು ಆಗಲು ಚಿಕ್ಕಮೇಳ ರಂಗ ತಾಲೀಮು ಆಗಿದೆ.
ತಾರಾನಾಥ್ ಮೇಸ್ತ ಶಿರೂರು