ಬಂಗಾರಪೇಟೆ: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಕಾಲದಲ್ಲಿ ಖಾಸಗಿ ಶಾಲೆಗಳನ್ನು ನಾಚಿಸುವಂತೆ ಶಾಲೆಯ ಗೋಡೆಗಳ ಮೇಲೆ ರೈಲಿನ ಚಿತ್ರ ಬಿಡಿಸಿ ರೈಲು ಶಾಲೆಯಂತೆ ಶಾಲೆಗೆ ಹೊಸ ರೂಪ ನೀಡಿ ಮಕ್ಕಳನ್ನು ಆಕರ್ಷಿಸುವಂತೆ ಗ್ರಾಪಂ ಅಧ್ಯಕ್ಷರೊಬ್ಬರು ಆಸಕ್ತಿ ವಹಿಸಿ ಶಾಲೆಗೆ ಹೊಸ ಸ್ಪರ್ಶ ನೀಡಿರುವುದು ಗ್ರಾಮಸ್ಥರ ಮೆಚ್ಚಿಗೆಗೆ ಪಾತ್ರವಾಗಿದೆ.
ತಾಲೂಕಿನ ಚಿಕ್ಕಅಂಕಂಡಹಳ್ಳಿ ಗ್ರಾಪಂ ಚಿಕ್ಕಅಂಕಂಡಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಹಳೆಯದಾಗಿ ಶಿಥಿಲವಾಗಿತ್ತು. ಸುಣ್ಣಬಣ್ಣ ಕಂಡು ದಶಕಗಳೇ ಕಳೆದಿದ್ದವು. ಶಾಲೆಯನ್ನು ನೋಡಿದರೆ ಇಲ್ಲಿ ಮಕ್ಕಳು ಹೇಗೆ ಪಾಠ ಕೇಳುತ್ತಾರೆ ಎಂಬ ಅನುಮಾನ ಬರುವಷ್ಟು ವಾತಾವರಣ ಅದೆಗೆಟ್ಟಿತ್ತು. ಇದರಿಂದ ಪೋಷಕರು ಈ ಶಾಲೆಗೆ ತಮ್ಮ ಮಕ್ಕಳನ್ನು ದಾಖಲಿಸಲು ಮೀನಮೇಷ ಎಣಿಸುತ್ತಿದ್ದರು. ಚಿಕ್ಕಅಂಕಂಡಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಸಿ.ಎಂ. ಹರೀಶ್‌ಕುಮಾರ್ ಆಯ್ಕೆಯಾದ ಬಳಿಕ ಗ್ರಾಮಗಳಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸುವತ್ತ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ.
ಅದರ ಪರಿಣಾಮವೇ ಗ್ರಾಮದ ಸರ್ಕಾರಿ ಕಿರಿಯ ಪ್ರಾಥುಕ ಶಾಲೆಗೆ ಕಾಯಕಲ್ಪ ದೊರಕಿದೆ. ಗ್ರಾಪಂ ಅಧ್ಯಕ್ಷ ಹರೀಶ್ ಕುಮಾರ್ ಇದೇ ಶಾಲೆಯಲ್ಲಿ ಓದಿದ್ದರಿಂದ ತಾನು ಓದಿದ ಶಾಲೆಗೆ ಹೊಸ ರೂಪ ನೀಡಿ ಮಕ್ಕಳನ್ನು ಆರ್ಕಸಬೇಕೆಂದು ಆಲೋಚಿಸಿ ಗ್ರಾಪಂ ಅನುದಾನದಿಂದ ಕಟ್ಟಡವನ್ನು ದುರಸ್ತಿ ಮಾಡಿದ್ದಾರೆ. ಹೊರಭಾಗದಲ್ಲಿ ಶಾಲೆಯನ್ನು ನೋಡಿದರೆ ರೈಲನ್ನು ಹೋಲುವಂತೆ ಚಿತ್ರ ಬಿಡಿಸಲಾಗಿದೆ. ರೈಲಿನೊಳಗೆ ಮಕ್ಕಳು ಓದುವಂತೆ ಪರಿಕಲ್ಪನೆ ಅಧ್ಯಕ್ಷರಿಗೆ ಮೂಡಿದ ತಕ್ಷಣ ಅದೇ ರೀತಿ ಶಾಲೆಯ ಗೋಡೆಗಳಿಗೆ ರೈಲಿನ ಎಂಜಿನ್ ಮಾದರಿ ಚಿತ್ರಿಸಲಾಗಿದೆ.
ನಂತರದ ಕೋಣೆಗಳಿಗೆ ಬೋಗಿಗಳಂತೆ ಚಿತ್ರ ಬಿಡಿಸಿರುವುದು ನೋಡುಗರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಶಾಲೆ ಒಳಗೆ ಕಾಲಿಡುತ್ತಿದ್ದಂತೆ ಗೋಡೆಗಳಲ್ಲಿ ರಾಜ್ಯದ ಪರಂಪರೆ ಬಿಂಬಿಸುವ ಚಿತ್ರಗಳು, ನೈಸರ್ಗಿಕ ಹಾಗೂ ಐತಿಹಾಸಿಕ ಚಿತ್ರಗಳು ಹಾಗೂ ಮೈಸೂರು ಅರಮನೆಯನ್ನೂ ಬಿಡಿಸಲಾಗಿದೆ. ಈ ಮಾದರಿ ಚಿತ್ರ ಬಿಡಿಸಲು ಸುಮಾರು ಒಂದು ಲಕ್ಷ ರೂ.ಗಳನ್ನು ಅಧ್ಯಕ್ಷ ಹರೀಶ್ ಕುಮಾರ್ ತಮ್ಮ ಸ್ವಂತ ಹಣದಿಂದ ಖರ್ಚುಮಾಡಿದ್ದಾರೆ. ಶಾಲೆಗೆ ಹೊಸ ರೂಪ ಬರುತ್ತಿದ್ದಂತೆ 18 ಮಕ್ಕಳಿದ್ದ ಶಾಲೆಗೆ ಈಗ ದಾಖಲಾತಿ ಪ್ರಮಾಣ ಹೆಚ್ಚಳವಾಗಿದೆ.
ಸುತ್ತಮುತ್ತಲಿನ ಗ್ರಾಮಗಳ ಮಕ್ಕಳು ಇದೇ ಶಾಲೆಗೆ ದಾಖಲಾಗಲು ಆಸಕ್ತಿ ತೋರುತ್ತಿದ್ದಾರೆ ಎಂದು ಅಧ್ಯಕ್ಷ ಹರೀಶ್ ಕುಮಾರ್ ತಿಳಿಸಿದ್ದಾರೆ. ಪ್ರತಿ ಗ್ರಾಪಂನಲ್ಲಿ ನಿರ್ಲಕ್ಷ್ಯಕ್ಕೆ ತುತ್ತಾಗಿರುವ ಇಂತಹ ಶಾಲೆಗಳನ್ನು ಆಯಾ ಗ್ರಾಪಂ ಅಧ್ಯಕ್ಷರುಗಳು ಕಾಳಜಿ ವಹಿಸಿದರೆ ಅಭಿವೃದ್ಧಿ ಮಾಡಿ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಬಹುದು ಎಂದು ತಿಳಿಸಿದರು.
ಚಿಕ್ಕ ಅಂಕಂಡಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಾಜಿ ಶಾಸಕ ಇ.ನಾರಾಯಣಗೌಡ ಸಹ ಓದಿ, ಶಾಸಕರಾಗಿ ಆಯ್ಕೆಯಾಗಿರುವ ಹೆಗ್ಗಳಿಕೆ ಇದೆ. ನಾನೂ ಇದೇ ಶಾಲೆಯಲ್ಲಿ ಓದಿ ಜ್ಞಾನವನ್ನು ಪಡೆದು ಗ್ರಾಪಂ ಅಧ್ಯಕ್ಷನಾಗಿದ್ದೇನೆ. ಶಾಲೆಯ ಕಟ್ಟಡ ಶಿಥಿಲಾವಸ್ಥೆ ತಲುಪಿದ ಕಾರಣ ಮಕ್ಕಳು ಖಾಸಗಿ ಶಾಲೆಗಳ ಮೊರೆ ಹೋಗಿದ್ದರು. ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಪಡೆದು ಮಕ್ಕಳು ಚೆನ್ನಾಗಿ ಓದಿ ಉನ್ನತ ಮಟ್ಟಕ್ಕೆ ಏರಬೇಕು ಎಂಬ ಉದ್ದೇಶದಿಂದ ಶಾಲೆಯನ್ನು ಅಭಿವೃಧಿ ಪಡಿಸಲಾಗಿದೆ.
-ಸಿ.ಎಂ.ಹರೀಶ್ ಕುಮಾರ್, ಚಿಕ್ಕಅಂಕಂಡಹಳ್ಳಿ ಗ್ರಾಪಂ ಅಧ್ಯಕ್ಷ