Advertisement

ಬರಪೀಡಿತನಾಡಲ್ಲಿ ರಾಜಕೀಯ ಏರಿಳಿತ ; ಚಿಕ್ಕಬಳ್ಳಾಪುರ 5 ಕ್ಷೇತ್ರಗಳು

12:25 AM Feb 13, 2023 | Team Udayavani |

ಚಿಕ್ಕಬಳ್ಳಾಪುರ: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರೇಷ್ಮೆ, ಹೈನುಗಾರಿಕೆ, ಹೂ ಹಣ್ಣು, ತರಕಾರಿ ಉತ್ಪಾದನೆ ಜತೆಗೆ ದೇಶಕ್ಕೆ ಎರಡು ಭಾರತ ರತ್ನಗಳನ್ನು ನೀಡಿರುವ ಜಿಲ್ಲೆ ಚಿಕ್ಕಬಳ್ಳಾಪುರ. ಪ್ರಸಿದ್ಧ ನಂದಿ ಗಿರಿಧಾಮ ಈ ಜಿಲ್ಲೆಗೆ ಸೇರಿದ್ದು. ಸಹಕಾರ ಚಳವಳಿಗೆ ನಾಂದಿ ಹಾಡಿದ ಮಳ್ಳೂರಿನ ಪಾಪಣ್ಣ ಶಾಸಕರಾಗಿ ಇಲ್ಲಿ ಸೇವೆ ಸಲ್ಲಿಸಿರುವುದು ಇತಿಹಾಸ. ಜಿಲ್ಲೆಯೂ ಕಾಂಗ್ರೆಸ್‌ ಪಕ್ಷಕ್ಕೆ ಭದ್ರ ಕೋಟೆಯಾಗಿದ್ದು ಆದರೆ ಇತ್ತೀಚಿನ ವರ್ಷಗಳಲ್ಲಿ ಜೆಡಿಎಸ್‌ ಮತ್ತು ಬಿಜೆಪಿಗೆ ಆಶ್ರಯ ನೀಡಿದೆ.

Advertisement

ರಾಜ್ಯ ರಾಜಧಾನಿಗೆ ಸಮೀಪವಿರುವ ಜಿಲ್ಲೆಗೆ ನೀರಿನ ಸೌಲಭ್ಯದಿಂದ ವಂಚಿತಗೊಂಡು ಬೆಂಗಳೂರಿನ ತ್ಯಾಜ್ಯ ನೀರು ಶುದ್ಧೀಕರಿಸಿ ಎಚ್‌ಎನ್‌ ವ್ಯಾಲಿ ಯೋಜನೆ ಮೂಲಕ ಪಡೆದುಕೊಂಡಿದೆ. ಶಾಶ್ವತ ನೀರಾವರಿ ವಿಷಯ ಓಟ್‌ಬ್ಯಾಂಕ್‌ ರಾಜಕಾರಣದ ಪ್ರಸ್ತುತ ಮೂಲವಸ್ತು. ಬರಪೀಡಿತ ಪ್ರದೇಶವಾಗಿದ್ದ ಜಿಲ್ಲೆ ಕಳೆದ ವರ್ಷದ ಮಳೆಯಿಂದ ಮಲೆನಾಡು ಪ್ರದೇಶವಾಗಿ ಮಾರ್ಪಟ್ಟಿದೆ. ಇದು ರೈತರು, ಹೈನುಗಾರರಿಗೆ ಅನುಕೂಲವಾಗಿದೆ.

ಕೋಲಾರದಿಂದ ವಿಭಜನೆಯಾಗಿ ಪ್ರತ್ಯೇಕ ಚಿಕ್ಕಬಳ್ಳಾಪುರ ಜಿಲ್ಲೆ ಉದಯವಾಗಿ 15 ವರ್ಷಗಳಾ­ಗಿವೆ. 8 ತಾಲೂಕುಗಳು ಮತ್ತು ಐದು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಜಿಲ್ಲೆಯ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಿಡಿತವಿದ್ದು, ಒಂದು ಕ್ಷೇತ್ರದಲ್ಲಿ ಬಿಜೆಪಿ, ಮತ್ತೂಂದರಲ್ಲಿ ಜೆಡಿಎಸ್‌ ಪ್ರಾಬಲ್ಯವಿದೆ.

ಕಾಂಗ್ರೆಸ್‌ ತೊರೆದು ಕಮಲ ಕೈ ಹಿಡಿದ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕೇಸರಿ ಪತಾಕೆಯನ್ನು ಹಾರಿಸಿದ್ದು ಡಾ| ಕೆ.ಸುಧಾಕರ್‌ ಶಿಡ್ಲಘಟ್ಟ ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕ ವಿ.ಮುನಿ­ಯಪ್ಪ 6 ಬಾರಿ ಶಾಸಕರಾಗಿದ್ದಾರೆ, ಗೌರಿಬಿದನೂರು ಕ್ಷೇತ್ರದಿಂದ ಎನ್‌.ಎಚ್‌ ಶಿವಶಂಕರ್‌ ರೆಡ್ಡಿ ಸತತ ಐದು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಚಿಂತಾಮಣಿ ಕ್ಷೇತ್ರದಲ್ಲಿ ಜೆ.ಕೆ.ಕೃಷ್ಣಾ ರೆಡ್ಡಿ, ಬಾಗೇಪಲ್ಲಿ ಕ್ಷೇತ್ರದಲ್ಲಿ ಸುಬ್ಟಾರೆಡ್ಡಿ ಶಾಸಕರಾಗಿದ್ದು ಈಗಲೂ ಸಿಪಿಎಂ ಭದ್ರಕೋಟೆಯಾಗಿದೆ.

ಚಿಕ್ಕಬಳ್ಳಾಪುರ
ಕೋಲಾರದಿಂದ ಬೇರ್ಪಟ್ಟ ಮೇಲೆ 15 ವಸಂತಗಳನ್ನು ಕಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆ 1978ರ ವರೆಗೆ ಈ ಕ್ಷೇತ್ರವು ಸಾಮಾನ್ಯ ಕ್ಷೇತ್ರವಾಗಿತ್ತು. 1978 ರಿಂದ 2008ರ ವರೆಗೆ 30 ವರ್ಷಗಳ ಕಾಲ ಅದನ್ನು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವನ್ನಾಗಿ ಮಾಡಲಾಗಿತ್ತು. 2008ರ ಬಳಿಕ ಸಾಮಾನ್ಯ ವಿಧಾನಸಭಾ ಕ್ಷೇತ್ರವಾಗಿ ಮಾರ್ಪಟ್ಟಿದೆ. ಒಂದು ಉಪ ಚುನಾವಣೆ ಸಹಿತ 15 ವಿಧಾನಸಭಾ ಚುನಾವಣೆಗಳನ್ನು ಕಂಡಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು 9 ಬಾರಿ ಜಯಗಳಿಸಿದ್ದು ಕಾಂಗ್ರೆಸ್‌ ಭದ್ರಕೋಟೆ ಎಂದೇ ಹೆಸರಾಗಿದೆ. ನಾಲ್ಕು ಬಾರಿ ಸ್ವತಂತ್ರ ಅಭ್ಯರ್ಥಿಗಳು ಇಲ್ಲಿ ಜಯ ಕಂಡರೆ ಒಮ್ಮೆ ಜೆಡಿಎಸ್‌ ಅಧಿಕಾರ ಪಡೆದಿದೆ. ಪûಾಂತರದಿಂದ 2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಆರೋಗ್ಯ ಸಚಿವ ಡಾ| ಕೆ. ಸುಧಾಕರ್‌ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

Advertisement

ಚಿಕ್ಕಬಳ್ಳಾಪುರ ಜಿಲ್ಲಾ ಉತ್ಸವ ನಡೆಸುವ ಮೂಲಕ 2023ರ ಚುನಾವಣೆಯಲ್ಲಿ ವಿಜೇತರಾಗಲು ಭದ್ರಬುನಾದಿ ಹಾಕಿಕೊಂಡಿದ್ದಾರೆ ಎಂಬ ಮಾತುಗಳು ಜನಜನಿತವಾಗಿವೆ. ಕ್ಷೇತ್ರದಲ್ಲಿ 1957ರಲ್ಲಿ ಎಸ್‌. ಮುನಿರಾಜು, 1962ರಲ್ಲಿ
ಸಿ. ವಿ. ವೆಂಕಟರಾಯಪ್ಪ, 1967ರಲ್ಲಿ ಕೆ.ಎಂ. ಪುಟ್ಟಸ್ವಾಮಿ, 1972ರಲ್ಲಿ ಸಿ.ವಿ. ವೆಂಕಟರಾಯಪ್ಪ, 1978ರಲ್ಲಿ ರೇಣುಕಾ ರಾಜೇಂದ್ರನ್‌, 1983ರಲ್ಲಿ ಎ.ಮುನಿಯಪ್ಪ, 1985ರಲ್ಲಿ ಕೆ.ಎಂ. ಮುನಿಯಪ್ಪ, 1989ರಲ್ಲಿ ರೇಣುಕಾ ರಾಜೇಂದ್ರನ್‌, 1994ರಲ್ಲಿ ಎಂ. ಶಿವಾನಂದ, 1999ರಲ್ಲಿ ಕೆ.ವಿ. ಅನಸೂಯಮ್ಮ, 2004ರಲ್ಲಿ ಎಸ್‌.ಎಂ. ಮುನಿಯಪ್ಪ, 2008ರಲ್ಲಿ ಕೆ.ಪಿ. ಬಚ್ಚೇಗೌಡ, 2013- 2018 ಮತ್ತು 2019ರ ಉಪಚುನಾವಣೆಯಲ್ಲೂ ಡಾ| ಕೆ.ಸುಧಾಕರ್‌ ಅಧಿಕಾರ ಪಡೆದಿದ್ದಾರೆ.

ಚಿಂತಾಮಣಿ
ಈ ಕ್ಷೇತ್ರದ ರಾಜಕಾರಣದಲ್ಲಿ ಕುಟುಂಬ- ಕುಟುಂಬಗಳ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆದಿರುವುದು ಇತಿಹಾಸ. 1951, 1962ರಲ್ಲಿ ಎಂ.ಸಿ ಆಂಜನೇಯರೆಡ್ಡಿ ಮತ್ತು 1957, 1967ರ ಅವಧಿಯಲ್ಲಿ ಟಿ.ಕೆ. ಗಂಗಾರೆಡ್ಡಿ ಕುಟುಂಬಗಳ ನಡುವೆ ಚುನಾವಣೆ ನಡೆದು ಅಧಿಕಾರ ಪಡೆದಿದ್ದಾರೆ. ಬಳಿಕ 1972, 1978, 1983, 1989, 1999ರ ಅವಧಿಯಲ್ಲಿ ಚೌಡರೆಡ್ಡಿ, 1985, 1994ರಲ್ಲಿ ಕೆ.ಎಂ. ಕೃಷ್ಣಾರೆಡ್ಡಿ ನಡುವೆ ಜಿದ್ದಾಜಿದ್ದಿ ನಡೆದು ಅಧಿಕಾರ ಪಡೆದು ಚೌಡರೆಡ್ಡಿ ಗೃಹ ಸಚಿವರಾಗಿ ಮತ್ತು ಕೆ.ಎಂ.ಕೃಷ್ಣಾರೆಡ್ಡಿ ಸಮಾಜ ಕಲ್ಯಾಣ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 2004 ಮತ್ತು 2008ರಲ್ಲಿ ಡಾ| ಎಂ.ಸಿ. ಸುಧಾಕರ್‌ ರೆಡ್ಡಿ, 2013 ಮತ್ತು 2018 ರವರೆಗೆ ಜೆ.ಕೆ. ಕೃಷ್ಣಾರೆಡ್ಡಿ ಗೆಲುವು ಸಾಧಿಸಿದ್ದಾರೆ. ಇವರ ನಡುವೆ ಕಳೆದ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಶಾಸಕ ಡಾ| ಎಂ.ಸಿ. ಸುಧಾಕರ್‌ ಕಣದಲ್ಲಿದ್ದು ಕ್ಷೇತ್ರದಲ್ಲಿ ಬಿರುಸಿನ ವಾತಾವರಣ ಸೃಷ್ಟಿಯಾಗಿದೆ.

ಶಿಡ್ಲಘಟ್ಟ
1951ರಲ್ಲಿ ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ಜಂಟಿ ವಿಧಾನಸಭಾ ಕ್ಷೇತ್ರದಲ್ಲಿ ಮಳ್ಳೂರು ಪಾಪಣ್ಣ ಮತ್ತು ಎ. ಮುನಿಯಪ್ಪ ಅವರು ಗೆಲುವು ಸಾಧಿಸಿದರು. 1957 ಮತ್ತು 1972ರಲ್ಲಿ ಶಾಸಕರಾಗಿದ್ದ ಜೆ.ವೆಂಕಟಪ್ಪ ಅವರು ಒಮ್ಮೆ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಹಾಲಿ ಶಾಸಕ ವಿ.ಮುನಿಯಪ್ಪ ಮತ್ತು ಜನತಾದಳದ ಮಾಜಿ ಶಾಸಕ ದಿ| ಎಸ್‌.ಮುನಿಶಾಮಪ್ಪ ಅವರ ನಡುವೆ ಜಿದ್ದಾಜಿದ್ದಿನ ರಾಜಕೀಯ ನಡೆಯುತ್ತಿದ್ದು, 1962 ರಲ್ಲಿ ಸಾದಲಿ ಆವುಲರೆಡ್ಡಿ, 1967 ರಲ್ಲಿ ಭಕ್ತರಹಳ್ಳಿ ವೆಂಕಟರಾಯಪ್ಪ, 1978, 1985, 2004ರಲ್ಲಿ ಎಸ್‌. ಮುನಿಶಾಮಪ್ಪ, 1983 1989, 1994, 1999, 2008, 2018ರಲ್ಲಿ ವಿ.ಮುನಿಯಪ್ಪ, 2013 ರಲ್ಲಿ ಎಂ. ರಾಜಣ್ಣ ಕ್ಷೇತ್ರದಲ್ಲಿ ಗೆಲವು ಸಾಧಿಸಿದ್ದಾರೆ.

ಬಾಗೇಪಲ್ಲಿ
ಕರ್ನಾಟದ ಗಡಿ ಪ್ರದೇಶವಾಗಿರುವ ಬಾಗೇಪಲ್ಲಿ ಕ್ಷೇತ್ರ ಗುಡಿಬಂಡೆ ತಾಲೂಕು ಮತ್ತು ಚೇಳೂರು ತಾಲೂಕನ್ನು ಒಳಗೊಂಡಿದೆ. ಈ ಕ್ಷೇತ್ರ ಕಾಂಗ್ರೆಸ್‌ ಮತ್ತು ಸಿಪಿಎಂ ನಡುವೆ ನೇರಾನೇರ ಸ್ಪರ್ಧೆ ಕಾಣುತ್ತಿದೆ. ಈ ಕ್ಷೇತ್ರ ರಚನೆಯಾಗಿದ್ದೇ 1962ರಲ್ಲಿ. ಆಗಿನಿಂದ ಸತತ ನಾಲ್ಕು ಬಾರಿ ಕಾಂಗ್ರೆಸ್‌ ಅಭ್ಯರ್ಥಿಗಳೇ ಗೆದ್ದಿದ್ದರು. ಅಂದರೆ 1962ರಲ್ಲಿ ಬಿ. ಸುಬ್ಬರಾಯಪ್ಪ, 1967ರಲ್ಲಿ ಎ.ಮುನಿಯಪ್ಪ, 1972ರಲ್ಲಿ ರೇಣುಕಾ ರಾಜೇಂದ್ರನ್‌, 1978ರಲ್ಲಿ ಎಸ್‌.ಮುನಿರಾಜು ಗೆದ್ದಿದ್ದರು. ಇವರಿಗೆ 1983ರ ಚುನಾವಣೆಯಲ್ಲಿ ಪೆಟ್ಟು ನೀಡಿದ್ದ ಸಿಪಿಎಂ ಅಭ್ಯರ್ಥಿ ಎ.ವಿ.ಅಪ್ಪಸ್ವಾಮಿ ರೆಡ್ಡಿ ಇದಾದ ಮೇಲೆ ಮತ್ತೆ ಎರಡು ಬಾರಿ ಕಾಂಗ್ರೆಸ್‌ನವರೇ ಗೆದ್ದರು. ಅಂದರೆ 1985ರಲ್ಲಿ ಬಿ.ನಾರಾಯಣಸ್ವಾಮಿ, 1989ರಲ್ಲಿ ಸಿ.ವಿ.ವೆಂಕಟರಾಯಪ್ಪ ಗೆದ್ದಿದ್ದರು. 1994ರಲ್ಲಿ ಸಿಪಿಎಂನ ಜಿ.ವಿ.ಶ್ರೀರಾಮರೆಡ್ಡಿ ಗೆಲುವು ಸಾಧಿಸಿದ್ದರು. 1999ರಲ್ಲಿ ಪಕ್ಷೇತರ ಎನ್‌. ಸಂಪಂಗಿ ಗೆದ್ದಿದ್ದರು. 2004ರಲ್ಲಿ ಮತ್ತೆ ಸಿಪಿಎಂನ ಜಿ.ವಿ.ಶ್ರೀರಾಮರೆಡ್ಡಿ ಜಯಗಳಿಸಿದ್ದರು. 2008ರಲ್ಲಿ ಕಾಂಗ್ರೆಸ್‌ನ ಎನ್‌.ಸಂಪಂಗಿ, 2013ರಲ್ಲಿ ಪಕ್ಷೇತರ ಎಸ್‌.ಎನ್‌.ಸುಬ್ಟಾರೆಡ್ಡಿ, 2018ರಲ್ಲಿಯೂ ಕಾಂಗ್ರೆಸ್‌ನ ಎಸ್‌.ಎನ್‌.ಸುಬ್ಟಾರೆಡ್ಡಿಯವರೇ ಗೆದ್ದಿದ್ದಾರೆ.

ಗೌರಿಬಿದನೂರು
ಆಂಧ್ರಪ್ರದೇಶದ ಗಡಿ ಭಾಗದಲ್ಲಿರುವ ಈ ತಾಲೂಕು ರಾಜಕೀಯವಾಗಿ ಒಂದೇ ಕುಟುಂಬದವರು ಹಲವು ಬಾರಿ ಹಿಡಿತ ಸಾಧಿಸಿಕೊಂಡು ಬಂದಿದ್ದಾರೆ. ಈ ಕ್ಷೇತ್ರದಲ್ಲಿ 1999ರ ಅನಂತರ ಹಾಲಿ ಶಾಸಕ ಹಾಗೂ ಮಾಜಿ ಸಚಿವ ಎನ್‌.ಎಚ್‌.ಶಿವಶಂಕರ್‌ ರೆಡ್ಡಿ ಐದು ಬಾರಿಗೆ ಗೆಲುವು ಸಾಧಿಸಿ ಒಂದು ಬಾರಿಗೆ ಸಚಿವರಾಗಿ ಸೇವೆ ಸಲ್ಲಿಸಿದ್ದು, ಆರನೇ ಬಾರಿಗೆ ಗೆಲುವು ಸಾಧಿಸಲು ಸಂಕಲ್ಪ ಮಾಡಿದ್ದಾರೆ. 2023ರ ಚುನಾವಣೆಯಲ್ಲಿ ಸಹ ಕಾಂಗ್ರೆಸ್‌ ಅಭ್ಯರ್ಥಿ ಆಗುವುದು ಬಹುತೇಕ ಖಚಿತ. ಇವರಿಗೆ ಈ ಬಾರಿ ಕ್ಷೇತ್ರದಲ್ಲಿ ಪಾದಾರ್ಪಣೆ ಮಾಡಿರುವ ಸಮಾಜ ಸೇವಕರಿಂದ ಪ್ರಬಲ ಪೈಪೋಟಿ ಎದುರಾಗಿದೆ. ಸ್ವಾತಂತ್ರ್ಯ ಅನಂತರ 1951,1957ರಲ್ಲಿ ಕೆ.ಎಚ್‌.ವೆಂಕಟರೆಡ್ಡಿ, 1962,1967 ಮತ್ತು 1983ರಲ್ಲಿ ಆರ್‌.ಎಲ್‌. ಲಕ್ಷ್ಮೀಪತಿ, 1972 ವಿ. ಕೃಷ್ಣರಾವ್‌, 1978 ರಲ್ಲಿ ಬಿ.ಎನ್‌.ಕೆ. ಪಾಪಯ್ಯ, 1985ರಲ್ಲಿ ಚಂದ್ರಶೇಖರ್‌, 1989 ರಲ್ಲಿ ಅಶ್ವತ್ಥನಾರಾಯಣ ರೆಡ್ಡಿ, 1994 ರಲ್ಲಿ ಜ್ಯೋತಿರೆಡ್ಡಿ ಗೌರಿಬಿದನೂರಿನಲ್ಲಿ ಅಧಿಕಾರ ನಡೆಸಿದ್ದು, 1999ರಿಂದ ನಿರಂತರವಾಗಿ ಶಿವಶಂಕರ ರೆಡ್ಡಿ ಅಧಿಕಾರ ನಡೆಸಿದ್ದಾರೆ.

-ಎಂ.ಎ.ತಮೀಮ್‌ ಪಾಷ

Advertisement

Udayavani is now on Telegram. Click here to join our channel and stay updated with the latest news.

Next