ಮಲ್ಪೆ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ಯಲ್ಲೂ ಕರಾವಳಿಯ ಸುತ್ತಮುತ್ತ ಪ್ರದೇಶ ದಲ್ಲಿ ಸಂಜೆಯಾಗುತ್ತಲೆ ಚಿಕ್ಕಮೇಳದ ಗೆಜ್ಜೆ ನಿನಾದಗಳು ಕೇಳಿಬರುತ್ತಿದೆ.
ಕಿರು ಪ್ರಸಂಗ ಪ್ರದರ್ಶನ:
ಇತ್ತೀಚಿನ ಕೆಲವು ವರ್ಷಗಳಿಂದ ಅಷ್ಟಮಿ, ಗಣೇಶ ಚತುರ್ಥಿ, ನವರಾತ್ರಿ ಸಂದರ್ಭದಲ್ಲಿ ಚಿಕ್ಕಮೇಳಗಳು ಮನೆ ಮನೆಗೆ ಭೇಟಿ ನೀಡಿ ಯಕ್ಷಗಾನದ ಕಿರು ಪ್ರಸಂಗವನ್ನು ಆಡಿ ತೋರಿಸುತ್ತಿರುವುದು ಸಾಮಾನ್ಯವಾಗಿದೆ.
ಚಿಕ್ಕಮೇಳ ಎಂದರೆ ಯಕ್ಷಗಾನದ ಕಿರು ರೂಪ. ಇದರಲ್ಲಿ ಭಾಗವತರು, ಚಂಡೆ ವಾದಕರು, ಮದ್ದಲೆ ವಾದಕರು ಇಬ್ಬರು ವೇಷಧಾರಿಗಳಷ್ಟೆ ಯಕ್ಷಗಾನವನ್ನು ನಡೆಸಿಕೊಡುತ್ತಾರೆ. ಮನೆಯ ಚಾವಡಿಯೇ ರಂಗಸ್ಥಳ, ಮನೆ ಮಂದಿಯೇ ಪ್ರೇಕ್ಷಕರು. ಯಾವುದಾದರೊಂದು ಪೌರಾಣಿಕ ಪ್ರಸಂಗದ ಆಯ್ದ ಭಾಗವನ್ನು ಕಲಾವಿದರು ನಿರೂಪಿಸುತ್ತಾರೆ. ಮನೆಯ ಯಜಮಾನ ಕೊಟ್ಟ ಕಿರು ಕಾಣಿಕೆಯನ್ನು ಪಡೆದು ಮುಂದಿನ ಮನೆಗೆ ಸಾಗುತ್ತಾರೆ.
ಇಂದಿನ ಟಿವಿ ವಾಹಿನಿಯಲ್ಲಿ ಮೂಡಿ ಬರುವ ರಿಯಾಲಿಟಿ ಶೋ, ಧಾರಾವಾಹಿ ವೀಕ್ಷಣೆಯಲ್ಲಿ ಕಾಲ ಕಳೆಯುವ ಈ ಕಾಲಘಟ್ಟದಲ್ಲಿ ಯುವ ಜನತೆಯು ಇ ಂತಹ ಪ್ರಯತ್ನಗಳಿಗೂ ಹೆಚ್ಚು ಪ್ರೋತ್ಸಾಹವನ್ನು ನೀಡುವಂತಾಗಬೇಕಾಗಿದೆ.
ಮನೆಯಲ್ಲಿ ಗೆಜ್ಜೆ ಸೇವೆ ಮಾಡಿದಾಗ ಗೆಜ್ಜೆಯ ಶಬ್ದ, ಚೆಂಡೆ- ಮದ್ದಲೆಗಳ ನಾದಕ್ಕೆ ಮನೆಯೊಳಗಿದ್ದ ದುಷ್ಟ ಶಕ್ತಿಗಳು ದೂರವಾಗುತ್ತದೆ ಎಂಬ ಪ್ರತೀತಿ ಇದೆ. ಮಾತ್ರವಲ್ಲದೆ ಮನೆ ಮನೆಗೆ ತೆರಳುವುದರಿಂದ ಯಕ್ಷಗಾನ ಕಲೆಯ ಬಗ್ಗೆ ಜನರಲ್ಲಿ ಆಸಕ್ತಿ ಬೆಳೆಯಲು ಸಾಧ್ಯವಾಗುತ್ತದೆ ಮತ್ತುಯುವ ಕಲಾವಿದರಿಗೂ ಒಂದು ವೇದಿಕೆಯನ್ನು ನೀಡಿದಂತಾಗುತ್ತದೆ.
– ರಾಘವೇಂದ್ರ ಪೂಜಾರಿ, ಕೋಟ, ಸಂಚಾಲಕರು, ಕೋಟ ಶ್ರೀ ದುರ್ಗಾ ಪರಮೇಶ್ವರೀ ಚಿಕ್ಕಮೇಳ