ಸಿರಿಗೆರೆ: ಅಮೇರಿಕಾದ ಚಿಕಾಗೋದಲ್ಲಿ ಜು. 5, 6 ಮತ್ತು 7 ರಂದು ವೀರಶೈವ ಸಮಾಜ ಆಫ್ ನಾರ್ತ್ ಅಮೇರಿಕ (ವಿ.ಎಸ್.ಎನ್.ಎ) ಸಂಘಟನೆಯ 42ನೇ ವಾರ್ಷಿಕ ಸಮ್ಮೇಳನ ನಡೆಯಲಿದೆ. ಈ ಸಮ್ಮೇಳನದಲ್ಲಿ ತರಳಬಾಳು ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಪಾಲ್ಗೊಳ್ಳಲಿದ್ದಾರೆ.
ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಮಂಗಳವಾರ ಸಂಜೆ 4 ಗಂಟೆಗೆ ಶ್ರೀಗಳು ಶ್ರೀಮಠದಿಂದ ತೆರಳಿದರು. ಇದಕ್ಕೂ ಮುನ್ನ ಬೃಹನ್ಮಠದ ಐಕ್ಯಮಂಟಪದಲ್ಲಿರುವ ಹಿರಿಯ ಗುರುಗಳ ಗದ್ದುಗೆಗೆ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ, ವಿದ್ಯಾರ್ಥಿ ದೆಸೆಯಲ್ಲಿ 1976ರಲ್ಲಿ ಅಮೇರಿಕದ ಭಕ್ತರ ಮನೆಗಳಿಗೆ ಭೇಟಿ ನೀಡಿದ್ದೆವು. ಅಮೇರಿಕ ಮತ್ತು ಕೆನಡಾದ ವೀರಶೈವರು ಮತ್ತು ಬಸವ ತತ್ವಾಭಿಮಾನಿಗಳನ್ನು ಒಂದೇ ವೇದಿಕೆಗೆ ತರಲು ಇಂತಹ ಸಂಘಟನೆಯ ಅಗತ್ಯದ ಬಗೆಗೆ ಸಮಾಲೋಚನೆ ನಡೆಸಲಾಗಿತ್ತು. ಅಮೇರಿಕ, ಕೆನಡಾ ಹಾಗೂ ಬೇರೆ ದೇಶಗಳ ಬಸವ ತತ್ವಾಭಿಮಾನಿಗಳು ಒಂದೆಡೆ ಸೇರುವ ಈ ಸಮ್ಮೇಳನದಲ್ಲಿ ಮುಂದಿನ ಪೀಳಿಗೆಗೆ ಬಸವಣ್ಣನವರ ಬೋಧನೆಗಳನ್ನು ತಲುಪಿಸುವ ಬಗ್ಗೆ ಗಂಭೀರ ಚಿಂತನೆ ನಡೆಯಲಿದೆ ಎಂದು ಹೇಳಿದರು.
1978ರಲ್ಲಿ ಆರಂಭಗೊಂಡ ವಿ.ಎಸ್.ಎನ್.ಎ ಸಂಘಟನೆ ಈಗ ಅಮೇರಿಕ ಮತ್ತು ಕೆನಡಾಗಳಲ್ಲಿ 21 ರಾಜ್ಯ ಘಟಕಗಳನ್ನು ಹೊಂದಿದೆ. 2500 ನೋಂದಾಯಿತ ಸದಸ್ಯರಿದ್ದಾರೆ. ಪ್ರತಿ ವರ್ಷ ಬೇರೆ ಬೇರೆ ನಗರಗಳಲ್ಲಿ ವಾರ್ಷಿಕ ಸಮ್ಮೇಳನಗಳನ್ನು ನಡೆಸಲಾಗುತ್ತಿದೆ. ಬಸವ ತತ್ವಗಳ ಆಧಾರಿತ ಆಧ್ಯಾತ್ಮಿಕ ಸಂವಾದಗಳು ಮತ್ತು ಧಾರ್ಮಿಕ ಕಾರ್ಯಗಳನ್ನು ಈ ಸಂಘಟನೆ ನಡೆಸುತ್ತಿದೆ ಎಂದರು.
ಸಮ್ಮೇಳನದ ನಂತರ ಶ್ರೀಗಳು ಅಮೇರಿಕದ ಭಕ್ತರ ಮನೆಗಳಲ್ಲಿ ಅನೌಪಚಾರಿಕವಾಗಿ ಧಾರ್ಮಿಕ ಸಂವಾದ ನಡೆಸಲಿದ್ದಾರೆ. ಸಮಕಾಲೀನ ಸಂದರ್ಭದ ಜಾಗತಿಕ ಸವಾಲುಗಳಿಗೆ ಬಸವಣ್ಣನವರ ಬೋಧನೆಗಳು ಹೇಗೆ ಪ್ರಸ್ತುತವಾಗಿವೆ ಎಂಬ ಬಗ್ಗೆ ತಿಳಿಸಿಕೊಡಲಿದ್ದಾರೆ. ಜು. 20 ರಂದು ಶ್ರೀಗಳು ಸ್ವದೇಶಕ್ಕೆ ಆಗಮಿಸಲಿದ್ದಾರೆ. ಇದೇ ವೇಳೆ ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ, ಶಾಂತಿವನದ ಬಳಿ ನಿರ್ಮಾಣಗೊಳ್ಳುತ್ತಿರುವ ಗೋಶಾಲೆಗೆ ತಂತಿ ಬೇಲಿ ಹಾಕಲು 10 ಲಕ್ಷ ರೂ. ಅನುದಾನ ನೀಡಿದರು.