ಚಿಕ್ಕಬಳ್ಳಾಪುರ: ತಾಲೂಕಿನ ಗುಮ್ಮಲಾಪುರ ಗ್ರಾಮದ ಬಳಿ ಶನಿವಾರ ಸಂಜೆ ಗಣಿಗಾರಿಕೆಯ ಖಾಲಿ ಟಿಪ್ಪರ್ ಲಾರಿಯ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ವಿಚಾರ ಈಗ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದ್ದು, ಅಪಘಾತ ಆಕಸ್ಮಿಕವಲ್ಲ, ಪೂರ್ವನಿಯೋಜಿತ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.
ಏನಿದು ಪ್ರಕರಣ?: ಜೂ.17ರಂದು ಲಾರಿ ಅಪಘಾತದಲ್ಲಿ ರಾಘವೇಂದ್ರ ಬಿನ್ ಬೈಯಣ್ಣ (30) ಎಂಬುವರು ಗಾಯಗೊಂಡು ಚಿಕಿತ್ಸೆ ಫಲಾಕಾರಿ ಯಾಗಿದೇ ಸೋಮವಾರ ರಾತ್ರಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಬಗ್ಗೆ ಅಪಘಾತ ಎಂದು ತಂದೆಯ ದೂರಿನ ಮೇರೆಗೆ ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಈಗ ಅದು ಆಕಸ್ಮಿಕವಾಗಿ ನಡೆದ ಅಪಘಾತವಲ್ಲ. ದುರುದ್ದೇಶದಿಂದ ಟಿಪ್ಪರ್ ಲಾರಿ ಚಾಲಕ ಪೂರ್ವನಿಯೋಜಿತವಾಗಿ ಅಪಘಾತ ಮಾಡಿದ್ದಾನೆ ಎಂಬ ಆರೋಪ ಬಲವಾಗಿ ಕೇಳಿ ಬರುತ್ತಿದೆ.
ಗುಮ್ಮಲಾಪುರ ಗ್ರಾಮದ ಸರ್ವೆ ನಂ 15/4 ರಲ್ಲಿ 2.ಎಕರೆ 20 ಗುಂಟೆ ಜಮೀನು ಇದ್ದು ಹೊಲದ ಬಳಿ ಕೆಲಸದ ನಿಮಿತ್ತ ಎ.ಬಿ.ರಾಘವೇಂದ್ರ ಬಿನ್ ಬೈಯಣ್ಣ ಹೋಗಿ ಕೆಲಸ ಮುಗಿಸಿಕೊಂಡು ರಾತ್ರಿ ಸುಮಾರು 7 ಗಂಟೆ ಸಮಯದಲ್ಲಿ ತನ್ನ ಮಗ ತಮ್ಮ ಜಮೀನಿನ ಪಕ್ಕದಲ್ಲಿ ಗುಮ್ಮಲಾಪುರ ಬೆಟ್ಟಕ್ಕೆ ಹೋಗುವ ಮಣ್ಣಿನ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದನು. ಆಗ ಕೆ.ಎ-50-5189 ನೋಂದಣಿ ಸಂಖ್ಯೆಯ ಮಹೇಂದ್ರ ಕಂಪನಿಯ ಓಪನ್ ಬಾಡಿ ಲಾರಿ ಚಾಲಕ ಗುಮ್ಮಲಾಪುರ ಬೆಟ್ಟಕ್ಕೆ ಹತ್ತುತ್ತಿರುವಾಗ ತನ್ನ ವಾಹನವನ್ನು ಅಜಾಗರೂಕತೆಯಿಂದ ಮತ್ತು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿ ಅಪಘಾತ ನಡೆಸಿದ ಪರಿಣಾಮ ಮಗನಿಗೆ ಬಲಪಾದದ ಬಳಿ ರಕ್ತದ ಗಾಯವಾಗಿದ್ದು, ತೊಡೆಯು ಕಟ್ ಆಗಿರುತ್ತೆ. ಬಲ ಪಕ್ಕೆಲುಬು ಬಳಿ ರಕ್ತದ ಗಾಯವಾಗಿದ್ದು, ಬಳಿಕ ಮೃತಪಟ್ಟಿದ್ದಾನೆಂದು ಅವರ ತಂದೆ ಬೈಯಣ್ಣ ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಈಗ ದಾರಿ ವಿಚಾರದಲ್ಲಿ ರಾಘವೇಂದ್ರ ಮೇಲೆ ಟಿಪ್ಪರ್ ಲಾರಿ ಹರಿಸಿ ಕೊಲೆ ಮಾಡಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.
ತನಿಖೆಗೆ ನಡೆಸಲು ಎಸ್ಪಿಗೆ ಉಸ್ತುವಾರಿ ಸಚಿವರ ಸೂಚನೆ: ಕೊಲೆ ಶಂಕೆ, ಆರೋಪ ಕೇಳಿ ಬಂದ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಈ ಬಗ್ಗೆ ಆಳವಾಗಿ ತನಿಖೆ ನಡೆಸುವಂತೆ ಎಸ್ಪಿಗೆ ಸೂಚಿಸಿದ್ದಾರೆ. ಘಟನೆ ಕುರಿತು ಚಿಕ್ಕಬಳ್ಳಾಪುರ ಉಪ ವಿಭಾಗದ ಆರಕ್ಷಕ ಉಪಾಧೀಕ್ಷಕ ವಿ.ಕೆ.ವಾಸುದೇವ್ ಮಾತನಾಡಿ, ತಂದೆ ಅಪಘಾತ ನಡೆದಿದೆಯೆಂದು ದೂರು ನೀಡಿದ್ದಾರೆ.
ಸದ್ಯಕ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಲ್ಲಾ ಆಯಾಮಗಳಲ್ಲಿ ನಾವು ತನಿಖೆ ನಡೆಸುತ್ತಿದ್ದೇವೆ. ಈಗಾಗಲೇ ತಲೆ ಮರೆಸಿಕೊಂಡಿರುವ ಲಾರಿ ಚಾಲಕನ ಪತ್ತೆಗೆ ವಿಶೇಷ ತಂಡ ರಚಿಸಿದ್ದೇವೆ ಎಂದರು.