ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಈ ವರ್ಷ ಬರ ಆವರಿಸಿದೆ. ಸಾವಿರಾರು ಹೆಕ್ಟೇರ್ ಬೆಳೆ ಕಳೆದುಕೊಂಡ ರೈತರು ಬರ ಪರಿಹಾರಕ್ಕಾಗಿ ಚಾತಕಪಕ್ಷಿಗಳಂತೆ ಎದುರು ನೋಡುತ್ತಿದ್ದಾರೆ. ಅಲ್ಲಲ್ಲಿ ಕುಡಿಯುವ ನೀರಿಗಾಗಿ ಪ್ರತಿಭಟನೆಗಳು, ಶುರುವಾಗಿವೆ. ಆದರೆ ಬರದ ಸಂಕಷ್ಟದಲ್ಲಿ ಜಿಲ್ಲೆಯ ಜನರ ಸಂಕಷ್ಟ ಆಲಿಸಬೇಕಾದ ಜಿಲ್ಲೆಯ ಜನ ನಾಯಕರು ಮಾತ್ರ ತೆಲಂಗಾಣದಲ್ಲಿ ಠಿಕಾಣಿ ಹೂಡಿದ್ದಾರೆ.
ಹೌದು, ಪಂಚ ರಾಜ್ಯಗಳ ಚೆ ಹಿನ್ನಲೆಯಲ್ಲಿ ಇದೇ ತಿಂಗಳ 30ಕ್ಕೆ ನೆರೆಯ ತೆಲಂಗಾಣದ ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದು, ಜಿಲ್ಲೆಯ ಉಸ್ತುವಾರಿ ಸಚಿವರಿಂದ ಹಿಡಿದು ಶಾಸಕರು, ಮಾಜಿ ಶಾಸಕರು, ಕಾಂಗ್ರೆಸ್ ನಾಯಕರ ದಂಡೇ ತಲೆಂಗಾಣದಲ್ಲಿ ಬೀಡು ಬಿಟ್ಟು ಚುನಾವಣಾ ಪ್ರಚಾರದಲ್ಲಿ ಮುಳಗಿರುವುದು ಚರ್ಚೆಗೆ ಗ್ರಾಸವಾಗಿದೆ.
ಜನರ ಕಷ್ಟ -ಸುಖ ಕೇಳ್ಳೋವರ್ಯಾರು : ಕ್ಷೇತ್ರದ ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕಿದ್ದ ಜನ ನಾಯಕರು ತಮ್ಮ ಪಕ್ಷರ ವರಿಷ್ಟರ ಸೂಚನೆಯಂತೆ ತೆಲಂಗಾಣದಲ್ಲಿ ಬೀಡು ಬಿಟ್ಟು ಪಕ್ಷದ ಗೆಲುವುಗಾಗಿ ಶ್ರಮಿಸುತ್ತಿದ್ದಾರೆ. ಇತ್ತ ಜನರು ಮಾತ್ರ ಬರದಿಂದ ಕಂಗೆಟ್ಟು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಜನಪ್ರತಿನಿಧಿಗಳಿಗಾಗಿ ಹುಡುಕಾಟ ನಡೆಸಬೇಕಿದೆ. ತೆಲುಗು ಪ್ರಾಬಲ್ಯ ಇರುವ ಜಿಲ್ಲೆಯ ನಾಯಕರು ತೆಲಂಗಾಣದಲ್ಲಿ ಅಬ್ಬರದ ಪ್ರಚಾರದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ಬರದ ಸಂಕಷ್ಟ ಕೇಳ್ಳೋವರ್ಯಾರು ಎಂಬುದರ ಬಗ್ಗೆ ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಈಗಾಗಲೇ ವಿಪಕ್ಷಗಳು ಜಿಲ್ಲೆಯಲ್ಲಿ ಆಡಳಿತ ಪಕ್ಷದ ಶಾಸಕರು, ಉಸ್ತುವಾರಿ ಸಚಿವರು ಬರ ಅಧ್ಯಯನ ನಡೆಸಿಲ್ಲ. ರೈತರ ಕಷ್ಟ ಸುಖ ಕೇಳಲು ಹೋಗಿಲ್ಲ ಎಂಬ ಆರೋಪ ಮಾಡುತ್ತಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ಬರದ ಅರ್ತನಾದದ ನಡುವೆಯು ಜಿಲ್ಲೆಯ ಜನ ನಾಯಕರು ರೈತಾಪಿ ಜನರ ಸಂಕಷ್ಟಕ್ಕೆ ಸ್ಪಂದಿಸುವುದರ ಬದಲು ತೆಲಂಗಾಣ ವಿಧಾನಸಭಾ ಚುನಾವಣಾ ಕಾರ್ಯದಲ್ಲಿ ಮುಳಗಿರು ವುದು ಎದ್ದು ಕಾಣುತ್ತಿದ್ದು, ಜಿಲ್ಲೆಯಲ್ಲಿ ಬರದ ನಿರ್ವಹಣೆ ವಿಚಾರದಲ್ಲಿ ಅಧಿಕಾರಿಗಳ ಪಾಲಿಗೆ ಆಡಿದ್ದೇ ಆಟ ಎನ್ನುವಂತಾಗಿ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.
ಬರಕ್ಕಿಂತ ಚುನಾವಣೆಯೆ ಮುಖ್ಯವಾಯಿತೇ?: ಜಿಲ್ಲೆಯ ಜನ ನಾಯಕರು ಅದರಲ್ಲೂ ಆಡಳಿತ ಪಕ್ಷದ ಶಾಸಕರು, ಸಚಿವರು ಜಿಲ್ಲೆಯ ಬರ ಲೆಕ್ಕಿಸದೇ ತೆಲಂಗಾಣದಲ್ಲಿ ಹಲವು ದಿನಗಳಿಂದ ಠಿಕಾಣಿ ಹೂಡಿ ಪಕ್ಷದ ಪರ ಪ್ರಚಾರ ನಡೆಸುತ್ತಿದ್ದು, ಜನ ನಾಯಕರಿಗೆ ಬರಕ್ಕಿಂತ ಚುನಾವಣೆ ಮುಖ್ಯವಾಯಿತೇ ಎಂಬ ಟೀಕೆ, ಟಿಪ್ಪಣಿ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ಇನ್ನೂ ಬಿಜೆಪಿ ನಾಯಕರು ಕೂಡ ತೆಲಂಗಾಣ ಚುನಾವಣಾ ಪ್ರಚಾರದಲ್ಲಿ ಮುಳಗಿದ್ದಾರೆ. ಮಾಜಿ ಸಚಿವರಾದ ಡಾ.ಕೆ.ಸುಧಾಕರ್ ಕಳೆದ 15, 20 ದಿನಗಳಿಂದಲೂ ಅಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಜೆಡಿಎಸ್ ಹೊರತುಪಡಿಸಿ ಜಿಲ್ಲೆಯ ನೂರಾರು ಮಂದಿ ಕಾಂಗ್ರೆಸ್, ಬಿಜೆಪಿ ನಾಯಕರು ತೆಲಂಗಾಣದಲ್ಲಿ ತಮ್ಮ ಪಕ್ಷಗಳ ಅಭ್ಯರ್ಥಿಗಳ ಗೆಲುವುಗಾಗಿ ಶ್ರಮಿಸುತ್ತಿದ್ದಾರೆ. ಇನ್ನೂ ಸಚಿವ ಸುಧಾಕರ್ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಪ್ರಚಾರ ನಡೆಸಿದಾಗ ಸಿಎಂ ಭಾಷಣವನ್ನು ಕನ್ನಡದಿಂದ ತೆಲುಗಿಗೆ ಭಾಷಾಂತರ ಮಾಡಿದ್ದರು.
ಶಾಸಕ ಪ್ರದೀಪ್ ಈಶ್ವರ್‌ಗೆ ತರಾಟೆ ತೆಗೆದುಕೊಂಡಿದ್ದರು!: ಇತ್ತೀಚೆಗೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜೆಡಿಎಸ್ ಯುವ ಮುಖಂಡರೊಬ್ಬರು ಇಲ್ಲಿಯೆ ನೂರಾರು ಸಮಸ್ಯೆಗಳು ಇಲ್ಲಿವೆ ಅಲ್ಲಿ ಹೋಗಿ ಏನು ಮಾಡುತ್ತೀರಿ, ಕ್ಷೇತ್ರಕ್ಕೆ ಬಂದು ಜನರ ಸಮಸ್ಯೆ ಕೇಳಿಯೆಂದು ಎಪಿಎಂಸಿ ಅವ್ಯವಸ್ಥೆಯ ವಿಡಿಯೋಗಳನ್ನು ಶಾಸಕರ ಫೇಸ್‌ಬುಕ್‌ಗೆ ಟ್ಯಾಗ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದರು.
-ಕಾಗತಿ ನಾಗರಾಜಪ್ಪ