Advertisement

ಇಸ್ಕಾನ್‌ವರೆಗೆ  ಚಿಗರಿ

05:38 PM Oct 06, 2018 | |

ಹುಬ್ಬಳ್ಳಿ: ಕಳೆದ ನಾಲ್ಕು ದಿನಗಳಿಂದ ಕೆಲ ಸಮಸ್ಯೆಗಳ ನಡುವೆಯೂ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿರುವ ಚಿಗರಿ ಸೇವೆಯನ್ನು ಇಸ್ಕಾನ್‌ ಮಂದಿರದವರೆಗೆ ವಿಸ್ತರಿಸಲು ಸಿದ್ಧತೆ ನಡೆದಿದ್ದು, ತ್ವರಿತ ಸೇವೆಗೆ ಮತ್ತಷ್ಟು ಬಸ್‌ಗಳು ಸೇರ್ಪಡೆಯಾಗಲಿವೆ.

Advertisement

ಚಿಗರಿ ಸಂಚಾರಕ್ಕೆ ಅತ್ಯಂತ ಕಡಿಮೆ 5 ರೂ. ಪ್ರೋತ್ಸಾಹ ದರ ನಿಗದಿ ಮಾಡಿ ಜನರನ್ನು ಆಕರ್ಷಿಸುವಲ್ಲಿ ವಾಯವ್ಯ ಸಾರಿಗೆ ಸಂಸ್ಥೆ ಹಾಗೂ ಬಿಆರ್‌ಟಿಎಸ್‌ ಅಧಿಕಾರಿಗಳು ಕೊಂಚ ಮಟ್ಟಿಗೆ ಯಶಸ್ವಿಯಾಗಿದ್ದಾರೆ. ದಿನದಿಂದ ದಿನಕ್ಕೆ ಬಸ್‌ನಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಅಧಿಕಾರಿಗಳಲ್ಲಿ ಒಂದಿಷ್ಟು ಸಮಾಧಾನ ಮೂಡಿಸಿದೆ. ಇದೇ ಹುಮ್ಮಸ್ಸಿನಲ್ಲಿ ಬಿಎಸ್ಸೆನ್ನೆಲ್‌ ಕಚೇರಿಯಿಂದ ಇಸ್ಕಾನ್‌ ಮಂದಿರದ ವರೆಗೆ ಚಿಗರಿ ಸೇವೆ ವಿಸ್ತರಿಸಲು ಸಿದ್ಧತೆ ನಡೆಸಿದ್ದು, ಬಹುತೇಕ ಪೂರ್ಣಗೊಂಡಿದೆ.

ಹೆಚ್ಚುವರಿ ಬಸ್‌ ರಸ್ತೆಗೆ: ಬಿಎಸ್ಸೆನ್ನೆಲ್‌ ಕಚೇರಿಯಿಂದ ಇಸ್ಕಾನ್‌ ಮಂದಿರದ ವರೆಗೆ ವಾಯವ್ಯ ಸಾರಿಗೆ ಸಂಸ್ಥೆಯ ಬಸ್‌ ದರ 15 ರೂ.ವನ್ನೇ ಅಥವಾ ಅದಕ್ಕಿಂತ ಕಡಿಮೆ ಮೊತ್ತವನ್ನು ಪ್ರೊತ್ಸಾಹ ದರವಾಗಿ ನಿಗದಿ ಮಾಡುವ ಸಾಧ್ಯತೆ ಇದೆ. ಹೆಚ್ಚುವರಿಯಾಗಿ ಮತ್ತೆ 5 ಬಸ್‌ಗಳು ರಸ್ತೆಗಿಳಿಯಲಿವೆ. ಇದರಿಂದ ಸರಾಸರಿ 10 ನಿಮಿಷಕ್ಕೊಂದು ಬಸ್‌ ಸೇವೆ ದೊರೆಯಲಿದೆ. ಈಗಿರುವ ಪ್ರೋತ್ಸಾಹ ದರ 5 ರೂ. ಶ್ರೀನಗರದ ವರೆಗೆ ಮಾತ್ರ ಉಳಿಸಿಕೊಳ್ಳುವ ಬಗ್ಗೆ ಅಧಿಕಾರಿಗಳಿಂದ ಅಭಿಪ್ರಾಯ ವ್ಯಕ್ತವಾಗಿದೆ.

ಯೋಗ್ಯ ಸ್ಥಳವಲ್ಲ: ಪ್ರಾಯೋಗಿಕ ಚಾಲನೆಗೆ ಆಯ್ದುಕೊಂಡಿದ್ದ ಆರಂಭಿಕ ಹಾಗೂ ಕೊನೆ ಸ್ಥಳ ಮಾರುಕಟ್ಟೆ ಅಥವಾ ಪ್ರಮುಖ ಪ್ರದೇಶವಲ್ಲ. ಹೀಗಾಗಿ ಬಿಆರ್‌ಟಿಎಸ್‌ ಬಸ್‌ ಸಂಚಾರ ನಿರೀಕ್ಷಿತ ಪ್ರಮಾಣದಲ್ಲಿ ಈಡೇರಲಿಲ್ಲ. 5 ರೂ. ಪ್ರೋತ್ಸಾಹ ದರ ಘೋಷಿಸುತ್ತಿದ್ದಂತೆ ಐಷಾರಾಮಿ ಚಿಗರಿ ಸವಾರಿಗೆ ಜನರು ಮುಗಿಬಿದ್ದಿದ್ದಾರೆ. ಇದೀಗ ಇಸ್ಕಾನ್‌ ಮಂದಿರದ ವರೆಗೆ ಬಸ್‌ ಸಂಚಾರ ವಿಸ್ತರಿಸುವುದರಿಂದ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಲಿದೆ ಎನ್ನುವ ವಿಶ್ವಾಸ ಅಧಿಕಾರಿಗಳದ್ದು.

ಬಿಆರ್‌ಟಿಎಸ್‌ ಮಂಡಳಿ ನಿರ್ದೇಶಕರ ಸಭೆ
ನವನಗರದ ಬಿಆರ್‌ಟಿಎಸ್‌ ಕಚೇರಿಯಲ್ಲಿ ಅ. 6ರಂದು ಬೆಳಗ್ಗೆ 11 ಗಂಟೆಗೆ ಮಂಡಳಿ ನಿರ್ದೇಶಕರ ಸಭೆ ನಡೆಯಲಿದ್ದು, ಬಸ್‌ ಸಂಚಾರ ಆರಂಭವಾದ ನಂತರದಲ್ಲಿ ನಡೆಯುತ್ತಿರುವ ಈ ಸಭೆ ಮಹತ್ವ ಪಡೆದಿದೆ. ನಾಲ್ಕು ದಿನಗಳಿಂದ ನಗರದಲ್ಲಿ ನಡೆದ ಪ್ರಾಯೋಗಿಕ ಸಂಚಾರ, ಸಾಧಕ-ಬಾಧಕಗಳ ಕುರಿತು ಚರ್ಚೆಯಾಗಲಿದೆ. ಅ. 15ರ ನಂತರ ಪೂರ್ಣ ಪ್ರಮಾಣದ ಬಸ್‌ಗಳ ಪ್ರಾಯೋಗಿಕ ಸಂಚಾರ, ನ. 1ರಂದು ಅಧಿಕೃತ ಚಾಲನೆ, ಪರಿಣಾಮಕಾರಿ ಸೇವೆ ನೀಡುವ ನಿಟ್ಟಿನಲ್ಲಿ ವಾಯವ್ಯ ಸಾರಿಗೆ ಸಂಸ್ಥೆಯಿಂದ ಅಧಿಕಾರಿ-ಸಿಬ್ಬಂದಿ ಎರವಲು, ದರ ನಿರ್ಧಾರ ಸೇರಿದಂತೆ ಹಲವು ವಿಷಯಗಳ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳು ಇರುವುದರಿಂದ ಸಭೆ ಮಹತ್ವ ಪಡೆದಿದೆ.

Advertisement

17 ನಿಲ್ದಾಣಕ್ಕೆ ಸೇವೆ 
ಇಸ್ಕಾನ್‌ ಮಂದಿರದವರೆಗೆ ಬಿಆರ್‌ಟಿಎಸ್‌ ಬಸ್‌ ವಿಸ್ತರಿಸುವುದರಿಂದ ಪ್ರಮುಖವಾಗಿ ಬೈರಿದೇವರಕೊಪ್ಪ, ನವನಗರ ಪ್ರದೇಶಗಳು ಒಳಗೊಳ್ಳಲಿವೆ. ಈ ಭಾಗದಲ್ಲಿ ಬಿಆರ್‌ಟಿಎಸ್‌ ಸಂಚಾರಕ್ಕೆ ಹೆಚ್ಚಿನ ಒಲವು ವ್ಯಕ್ತವಾಗಲಿದ್ದು, ನಿರೀಕ್ಷಿತ ಸ್ಪಂದನೆ ದೊರೆಯಲಿದೆ. ವಿಸ್ತರಣೆಯಿಂದ ಒಟ್ಟು 17 ನಿಲ್ದಾಣಗಳಲ್ಲಿ ಸೇವೆ ದೊರೆತಂತಾಗುತ್ತದೆ. 11 ಕಿಮೀ ದೂರದ ಪ್ರಯಾಣವನ್ನು ಸುಮಾರು 25-30 ನಿಮಿಷದೊಳಗೆ ಪೂರೈಸಬೇಕು ಎನ್ನುವ ಗುರಿಯಿದೆ. ಆದರೆ ಮಿಕ್ಸ್‌ ಟ್ರಾಫಿಕ್‌ ಪರಿಣಾಮ ಇದು ಕಷ್ಟವಾದರೂ ಹೊಸೂರು ಬಸ್‌ ನಿಲ್ದಾಣ ನಂತರ ಪ್ರತ್ಯೇಕ ಕಾರಿಡಾರ್‌ ಇರುವುದರಿಂದ ಸಂಚಾರದ ಸಮಸ್ಯೆಯಾಗುವುದಿಲ್ಲ ಎನ್ನುವುದು ಅಧಿಕಾರಿಗಳ ಅಭಿಪ್ರಾಯ.

ಚನ್ನಮ್ಮ ವೃತ್ತದಲ್ಲಿ ಒಂದಿಷ್ಟು ಸಂಚಾರ ದಟ್ಟಣೆ ಹೊರತುಪಡಿಸಿ ಇತರೆ ಯಾವುದೇ ಪ್ರದೇಶದಲ್ಲಿ ಬಿಆರ್‌ಟಿಎಸ್‌ ಸಂಚಾರಕ್ಕೆ ಸಮಸ್ಯೆಯಾಗುತ್ತಿಲ್ಲ. ಕಳೆದ ನಾಲ್ಕು ದಿನಗಳಿಂದ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸೇವೆಯನ್ನು ಇಸ್ಕಾನ್‌ ಮಂದಿರದ ವರೆಗೆ ವಿಸ್ತರಿಸಲು ವ್ಯವಸ್ಥಾಪಕ ನಿರ್ದೇಶಕರು ನಿರ್ಧರಿಸಿದ್ದು, ಬಸ್‌ ದರ, ಸಂಖ್ಯೆಯಲ್ಲಿ ಹೆಚ್ಚಳ ಕುರಿತು ಇನ್ನಷ್ಟೇ ಚರ್ಚೆಯಾಗಬೇಕಿದೆ.
 ಬಸವರಾಜ ಕೇರಿ,
ಡಿಜಿಎಂ, ಬಿಆರ್‌ಟಿಎಸ್‌

„ಹೇಮರಡ್ಡಿ ಸೈದಾಪುರ 

Advertisement

Udayavani is now on Telegram. Click here to join our channel and stay updated with the latest news.

Next