Advertisement

ಧಾರವಾಡದವರೆಗೂ ಚಿಗರಿ ಓಟ ಸರಳ 

05:30 PM Oct 25, 2018 | Team Udayavani |

ಹುಬ್ಬಳ್ಳಿ: ಬಿಆರ್‌ಟಿಎಸ್‌ ಎರಡನೇ ಹಂತದ ಪ್ರಾಯೋಗಿಕ ಕಾರ್ಯಾಚರಣೆಗೆ ಬುಧವಾರ ಚಾಲನೆ ನೀಡಲಾಯಿತು. ಇಲ್ಲಿನ ಹೊಸೂರು ಬಿಆರ್‌ಟಿಎಸ್‌ ಬಸ್‌ ನಿಲ್ದಾಣ ಬಳಿ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಸಂಸದ ಪ್ರಹ್ಲಾದ ಜೋಶಿ ಚಾಲನೆ ನೀಡಿ ಧಾರವಾಡದವರೆಗೆ ಚಿಗರಿ ಬಸ್‌ನಲ್ಲಿ ಸಂಚರಿಸಿ ಮೆಚ್ಚುಗೆ ವ್ಯಕ್ತಪಡಿದರು. ಅಲ್ಲಲ್ಲಿ ಸಣ್ಣ ಪುಟ್ಟ ಕಾಮಗಾರಿಗಳು ಬಾಕಿ ಉಳಿದಿರುವುದನ್ನು ಆದಷ್ಟು ಬೇಗ ಪೂರ್ಣಗೊಳಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದರು.

Advertisement

ಬಿಆರ್‌ಟಿಎಸ್‌ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್‌ ಸುದ್ದಿಗಾರರೊಂದಿಗೆ ಮಾತನಾಡಿ, ಎರಡನೇ ಹಂತದಲ್ಲಿ ಧಾರವಾಡಕ್ಕೆ ಪ್ರಾಯೋಗಿಕ ಸೇವೆಯನ್ನು ವಿಸ್ತರಿಸಲಾಗಿದೆ. ಏಳು ನಿಲ್ದಾಣಗಳಲ್ಲಿ ಸಣ್ಣ ಪುಟ್ಟ ಕಾರ್ಯಗಳು ಬಾಕಿಯಿರುವುದರಿಂದ ಅವುಗಳನ್ನು ಹೊರತುಪಡಿಸಿ ಹುಬ್ಬಳ್ಳಿಯಿಂದ ಧಾರವಾಡದವರೆಗೆ ಬಿಆರ್‌ಟಿಎಸ್‌ನ ಪ್ರಾಯೋಗಿಕ ಸೇವೆ ದೊರೆಯಲಿದೆ. ಈ ಹಂತದಲ್ಲಿ ನಾವು ಯಾವುದೇ ಲಾಭದ ನಿರೀಕ್ಷೆ ಹೊಂದಿಲ್ಲ. ಪ್ರಾಯೋಗಿಕ ಹಂತದಲ್ಲಿನ ಸಮಸ್ಯೆಗಳನ್ನು ಗುರುತಿಸಿ ಅವುಗಳಿಗೆ ಪರಿಹಾರ ಕಲ್ಪಿಸುವುದು ಪ್ರಮುಖ ಉದ್ದೇಶ ಎಂದು ತಿಳಿಸಿದರು.

ವಾಯವ್ಯ ಸಾರಿಗೆ ದರ: ಬಿಆರ್‌ಟಿಎಸ್‌ ಬಸ್‌ ದರ ನಿಗದಿಯಾಗದ ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ವಾಯವ್ಯ ಸಾರಿಗೆ ದರ ನಿಗದಿ ಮಾಡಲಾಗಿದೆ. ವಿದ್ಯಾರ್ಥಿಗಳ ಬಸ್‌ ಪಾಸ್‌ ಸೇರಿದಂತೆ ಎಲ್ಲಾ ರಿಯಾಯ್ತಿ ಪಾಸ್‌ಗಳ ಮೂಲಕ ಸಂಚರಿಸಲು ಅವಕಾಶ ನೀಡಲಾಗಿದೆ. ಎರಡನೇ ಹಂತದ ಪ್ರಾಯೋಗಿಕ ಸೇವೆಗೆ 10 ಬಸ್‌ಗಳನ್ನು ಹೆಚ್ಚುವರಿಯಾಗಿ ರಸ್ತೆಗಳಿಸಲಾಗಿದೆ. ಒಟ್ಟು 15 ಬಸ್‌ಗಳು ಹುಬ್ಬಳ್ಳಿ-ಧಾರವಾಡ ನಡುವೆ ಸಂಚರಿಸಲಿವೆ.

ಮುಂದಿನ 4-5 ದಿನಗಳಲ್ಲಿ ಆರು ನಿಲ್ದಾಣಗಳಲ್ಲಿ ಕಾರ್ಯಗಳು ಪೂರ್ಣಗೊಂಡು ಸೇವೆಗೆ ದೊರೆಯಲಿವೆ. ನವೆಂಬರ್‌ ತಿಂಗಳಲ್ಲಿ ಯಾವುದೇ ಸಂದರ್ಭದಲ್ಲಿ ಉದ್ಘಾಟನೆಗೆ ದಿನ ನಿಗದಿ ಮಾಡಿದರೆ ನಾವು ಸಿದ್ಧರಿದ್ದೇವೆ.

ನ.15ರೊಳಗೆ ಬಿಆರ್‌ಟಿಎಸ್‌ ಕಾರಿಡಾರ್‌ ಜಂಕ್ಷನ್‌ಗಳ ಟ್ರಾಫಿಕ್‌ ಸಿಗ್ನಲ್‌ಗ‌ಳ ಕಾರ್ಯಾರಂಭ ಮಾಡಲಿವೆ. ಉದ್ಘಾಟನೆ ದಿನ ನಿಗದಿಯಾಗುತ್ತಿದ್ದಂತೆ ಒಂದು ವಾರ ಮುಂಚಿತವಾಗಿ ಇಡೀ ಕಾರಿಡಾರ್‌ದುದ್ದಕ್ಕೂ ಡಾಂಬರ್‌ ಹಾಕಿ ಅಗತ್ಯ ಸಂಚಾರಿ ಚಿಹ್ನೆಗಳನ್ನು ಹಾಕಲಾಗುವುದು ಎಂದು ತಿಳಿಸಿದರು.

Advertisement

ನ.15ಕ್ಕೆ ಹೊಸೂರಿಗೆ ಬಸ್‌ಗಳು: ಚನ್ನಮ್ಮ ವೃತ್ತದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಎಕ್ಸಪ್ರಸ್‌ ಬಸ್‌ಗಳನ್ನು ನ.15 ರೊಳಗೆ ಹೊಸೂರಿನ ಪ್ರಾದೇಶಿಕ ಬಸ್‌ ನಿಲ್ದಾಣಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಇದರಿಂದ ಪ್ರಮುಖ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ಕಡಿಮಯಾಗಿ ಬಿಆರ್‌ಟಿಎಸ್‌ ಬಸ್‌ಗಳ ಓಡಾಟಕ್ಕೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಬಸ್‌ ಸಂಚಾರ ಆರಂಭ ಮಾಡದಿದ್ದರೆ ಇನ್ನೂ ವಿಳಂಬವಾಗುತ್ತಿದೆ ಎನ್ನುವ ಕಾರಣಕ್ಕೆ ಸಣ್ಣ ಪುಟ್ಟ ಕಾರ್ಯಗಳು ಬಾಕಿಯಿದ್ದರೂ ಬಸ್‌ ಕಾರ್ಯಾಚರಣೆ ಆರಂಭಿಸಲಾಗಿದೆ. ಗುತ್ತಿಗೆದಾರರಿಗೆ ಕೆಲಸಗಳನ್ನು ನಿಗದಿತ ವೇಳೆಯಲ್ಲಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ವಿಳಂಬ ಮಾಡಿದ ಗುತ್ತಿಗೆದಾರರ ಮೇಲೆ ದಿನದ ಲೆಕ್ಕದಲ್ಲಿ ದಂಡ ವಿಧಿಸಲಾಗುತ್ತಿದೆ. ಹಿಂದೆ ಕೂಡ ಕೆಲ ಗುತ್ತಿಗೆದಾರರರಿಂದ ದಂಡ ವಸೂಲಿ ಮಾಡಲಾಗಿದೆ.

ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ, ಉಪ ಮಹಾಪೌರ ಮೇನಕಾ ಹುರಳಿ, ವಾಯವ್ಯ ಸಾರಿಗೆ ಅಧಿಕಾರಿಗಳಾದ ಶಾಂತಪ್ಪ ಗೋಟಖಂಡಕಿ, ಬಸಲಿಂಗಪ್ಪ ಬೀಡಿ, ವಿವೇಕಾನಂದ ವಿಶ್ವಜ್ಞ, ಗೊಲ್ಲರ ಶೀನಯ್ನಾ, ಅಶೋಕ ಪಾಟೀಲ, ಪಿ.ವೈ.ನಾಯಕ, ಶಶಿಧರ ಚನ್ನಪ್ಪಗೌಡರ, ಕೆ.ಗುಡೆನ್ನವರ, ಗುರುಪ್ರಸಾದ ಹೂಗಾಡಿ, ಶ್ರೀನಾಥ, ಬಸವರಾಜ ಕೇರಿ, ಅಭಯಂಕರ ಇನ್ನಿತರರಿದ್ದರು.

ಬಾಕಿ ಉಳಿದಿವೆ ಕಾರ್ಯಗಳು
ಉಣಕಲ್ಲ ಶ್ರೀ ನಗರದ ಕ್ರಾಸ್‌ನಿಂದ ಧಾರವಾಡದ ಮಿತ್ರ ಸಮಾಜದವರಿಗೆ ಸಣ್ಣಪುಟ್ಟ ಕಾಮಗಾರಿ ಬಾಕಿಯಿದ್ದು, ರಸ್ತೆ ವಿಭಜಕ ಅಳವಡಿಕೆ, ಮಿಶ್ರ ರಸ್ತೆ ಕಾಮಗಾರಿ, ನಿಲ್ದಾಣಗಳಲ್ಲಿ ಸಣ್ಣಪುಟ್ಟ ಕಾರ್ಯಗಳು ಬಾಕಿ ಉಳಿದಿವೆ. ಎಪಿಎಂಸಿ ಜಂಕ್ಷನ್‌ನಲ್ಲಿ ಇನ್ನೂ ರಸ್ತೆ ವಿಭಜಕ ಅಳವಡಿಸದೆ ಇರುವುದರಿಂದ ಖಾಸಗಿ ವಾಹನಗಳು ದಿಢೀರ್‌ನೆ ನುಗ್ಗುತ್ತಿವೆ. ಧಾರವಾಡ ವ್ಯಾಪ್ತಿಯ ವಿದ್ಯಾಗಿರಿ, ಟೋಲ್‌ ನಾಕಾ, ಬಾಗಲಕೋಟ ಪೆಟ್ರೋಲ್‌ ಬಂಕ್‌, ಎನ್‌ಟಿಟಿಎಫ್, ಕೋರ್ಟ್‌ ವೃತ್ತ, ಜ್ಯುಬ್ಲಿ ವೃತ್ತದ ಬಸ್‌ ನಿಲ್ದಾಣ ಕಾಮಗಾರಿ ಬಾಕಿಯಿದೆ. ನವಲೂರು ಸೇತುವೆ ಕಾಮಗಾರಿ ಇನ್ನೂ ಸಾಕಷ್ಟು ಪ್ರಮಾಣದಲ್ಲಿ ಬಾಕಿಯಿದ್ದು, ಮಾರ್ಚ್‌ ಅಂತ್ಯಕ್ಕೆ ಮುಗಿಸುವ ಯೋಜನೆಯಿದ್ದು, ಇದರಿಂದ ಬಿಆರ್‌ಟಿಎಸ್‌ ಸಂಚಾರಕ್ಕೆ ಒಂದಿಷ್ಟು ತೊಡಕಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next