Advertisement

ಚಿಗರಿ ದುರಸ್ತಿಯೇ ದೊಡ್ಡ ಸವಾಲು

09:28 AM Jun 15, 2019 | Team Udayavani |

ಹುಬ್ಬಳ್ಳಿ: ನಿರ್ವಹಣಾ ದೃಷ್ಟಿಯಿಂದ ವಾಯವ್ಯ ಸಾರಿಗೆ ಸಂಸ್ಥೆ ಪಾಲಿಗೆ ಬಿಳಿಯಾನೆಯಾಗಿರುವ ಬಿಆರ್‌ಟಿಎಸ್‌ನ ಚಿಗರಿ ಬಸ್‌ಗಳ ದುರಸ್ತಿ ಸಮಸ್ಯೆ ಎದುರಾಗಿದ್ದು, ಅಪಘಾತದಲ್ಲಿ ತೀವ್ರ ಹಾನಿಯಾದ ಬಸ್‌ಗಳ ದುರಸ್ತಿಯಂತೂ ಸವಾಲಾಗಿ ಪರಿಣಮಿಸಿದೆ.

Advertisement

ಅವಳಿ ನಗರದ ಜನತೆಗೆ ಉತ್ತಮ ಸಾರಿಗೆ ಸೇವೆ ನೀಡುವುಕ್ಕಾಗಿ ವೋಲ್ವೋ ಕಂಪೆನಿಯ ವಾಹನಗಳನ್ನು ರಸ್ತೆಗಿಳಿಸಿರುವುದು ಸಂತಸ ವಿಚಾರ. ಈ ವಾಹನಗಳ ನಿರ್ವಹಣೆಗಾಗಿ ವಾಯವ್ಯ ಸಾರಿಗೆ ಸಂಸ್ಥೆ ಮೆಕ್ಯಾನಿಕ್‌ಗಳಿಗೆ ವಿಶೇಷ ತರಬೇತಿ ನೀಡಲಾಗಿದೆ. ಹುಬ್ಬಳ್ಳಿ ಹಾಗೂ ಧಾರವಾಡ ಘಟಕಗಳಲ್ಲಿ ತಲಾ 25 ಮೆಕ್ಯಾನಿಕ್‌ಗಳು ವೋಲ್ವೋ ವಾಹನ ತರಬೇತಿ ಪಡೆದು ಕಾರ್ಯ ನಿರ್ವಹಿಸುತ್ತಿದ್ದಾರೆ. ನಿತ್ಯದ ನಿರ್ವಹಣೆಗೆ ಅತ್ಯಾಧುನಿಕ ಯಂತ್ರೋಪಕರಣಗಳು ಡಿಪೋಗಳಲ್ಲಿ ಅಳವಡಿಸಿರುವುದರಿಂದ ಯಾವುದೇ ತೊಂದರೆಯಿಲ್ಲ. ವೋಲ್ವೋ ವಾಹನಗಳಿಗೆ ಅಗತ್ಯವಾದ ಕೆಲ ಬಿಡಿ ಭಾಗಗಳನ್ನು ಖರೀದಿ ಮಾಡಲಾಗಿದೆ. ಅಗತ್ಯ ಬಿದ್ದರೆ ಖರೀದಿಸುವ ಅವಕಾಶ ಕೂಡ ಕಲ್ಪಿಸಲಾಗಿದೆ. ಆದರೆ ಅಪಘಾತಗಳಲ್ಲಿ ಹಾನಿಗೊಳಗಾದ ಬಸ್‌ಗಳ ದುರಸ್ತಿಗೆ ಯಾವುದೇ ತಯಾರಿ ಹಾಗೂ ವ್ಯವಸ್ಥೆ ಇಲ್ಲದಿರುವುದು ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ.

ದೂರದೃಷ್ಟಿ ಕೊರತೆ ಜಾಹೀರು:
ಅಪಘಾತದಲ್ಲಿನ ಸಣ್ಣಪುಟ್ಟ ದುರಸ್ತಿಯನ್ನು ಸಂಸ್ಥೆಯ ಸಿಬ್ಬಂದಿ ಹಾಗೂ ಕಂಪೆನಿ ತಂತ್ರಜ್ಞರ ತಂಡ ನಿರ್ವಹಿಸುತ್ತದೆ. ಆದರೆ ತೀವ್ರ ಹಾನಿಯಾದ ಬಸ್‌ಗಳ ದುರಸ್ತಿ ಹೇಗೆ ಎನ್ನುವ ಪ್ರಶ್ನೆ ಉದ್ಭವಿಸಿದೆ. ಉತ್ತರ ಕರ್ನಾಟಕ ಭಾಗದಲ್ಲಿ ವೋಲ್ವೋ ಕಂಪನಿಯ ಸರ್ವೀಸ್‌ ಸೆಂಟರ್‌ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ. ಈಗಾಗಲೇ ಅಪಘಾತಗಳಲ್ಲಿ ತೀವ್ರ ಜಖಂಗೊಂಡ 3 ಬಸ್‌ಗಳನ್ನು ಡಿಪೋಗಳಲ್ಲಿ ಇರಿಸಿದ್ದು, ಇವುಗಳ ದುರಸ್ತಿ ಹೇಗೆ ಎಂಬುದು ಅಧಿಕಾರಿಗಳಿಗೆ ತೋಚದ ಸ್ಥಿತಿ ನಿರ್ಮಾಣವಾಗಿದೆ. ಸುಮಾರು 130 ಕೋಟಿ ರೂ. ವೆಚ್ಚದಲ್ಲಿ ಬಸ್‌ಗಳನ್ನು ಖರೀದಿಸಿದ ಮೇಲೆ ದುರಸ್ತಿಗಾಗಿ ಒಂದು ವ್ಯವಸ್ಥೆ ಕಲ್ಪಿಸುವ ದೂರದೃಷ್ಟಿ ಕೊರತೆ ಅಧಿಕಾರಿಗಳಲ್ಲಿದೆ ಎಂಬುದು ಸಾಬೀತಾದಂತಾಗಿದೆ.

ದುರಸ್ತಿಗಾಗಿ ಬೆಂಗಳೂರಿಗೆ ವಾಹನಗಳನ್ನು ಕಳುಹಿಸಿದರೆ ಒಂದು ಬಸ್‌ಗೆ ಸುಮಾರು 30-35 ಸಾವಿರ ರೂ. ಡೀಸೆಲ್ಗಾಗಿ ವ್ಯಯ ಮಾಡಬೇಕಾಗುತ್ತದೆ. ಇನ್ನೂ ಈ ವಾಹನಗಳು ಕಂಪೆನಿ ವಿಮಾ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ವಿಮೆ ಪ್ರಕ್ರಿಯೆ ಪೂರ್ಣಗೊಂಡ ನಂತರವಷ್ಟೇ ದುರಸ್ತಿ ನಡೆಯುವುದರಿಂದ ವಿಳಂಬಕ್ಕೆ ಕಾರಣವಾಗಲಿದೆ.

ಆರು ತಂತ್ರಜ್ಞರ ತಂಡ:
ವಾಯವ್ಯ ಸಾರಿಗೆ ಸಂಸ್ಥೆ 50 ಮೆಕ್ಯಾನಿಕ್‌ಗಳಿಗೆ ತರಬೇತಿ ನೀಡಿದೆಯಾದರೂ ಆರಂಭದಲ್ಲಿ ಯಾವುದೇ ಸಮಸ್ಯೆ ಉದ್ಭವಿಸಬಾರದು ಎನ್ನುವ ಕಾರಣಕ್ಕೆ ವೋಲ್ವೋ ಕಂಪೆನಿ 6 ತಂತ್ರಜ್ಞರನ್ನು ಹುಬ್ಬಳ್ಳಿಯ ಘಟಕದಲ್ಲಿ ಇರಿಸಿದೆ. ಸಂಸ್ಥೆಯ ಮೆಕ್ಯಾನಿಕ್‌ಗಳಿಗೆ ತಾಂತ್ರಿಕವಾಗಿ ನೆರವು ನೀಡುವ ಕೆಲಸ ಈ ತಂಡ ಮಾಡುತ್ತಿದೆ. ಬಹುತೇಕ ಕಾರ್ಯವನ್ನು ಈ ತಂಡ ನಿರ್ವಹಿಸುತ್ತದೆ. ಒಂದು ವೇಳೆ ಹೆಚ್ಚುವರಿ ನೆರವು ಅಗತ್ಯಬಿದ್ದರೆ ಬೆಂಗಳೂರಿನಿಂದ ತಂತ್ರಜ್ಞರು ಆಗಮಿಸುವ ವ್ಯವಸ್ಥೆಯಿದೆ. ಹೀಗಾಗಿ ಸಣ್ಣಪುಟ್ಟ ದುರಸ್ತಿಗೆ ಯಾವುದೇ ಸಮಸೆಯಿಲ್ಲ.
ಕಾರ್ಯಾಚರಣೆ ಶಾಖೆ ನಿರ್ಲಕ್ಷ್ಯ:

ಒಂದೆಡೆ ಬೇಂದ್ರೆ ಬಸ್‌ಗಳ ಸಂಖ್ಯೆ ಕಡಿಮೆಯಾಗುತ್ತಿದೆ. ವಾಕರಸಾ ಸಾಮಾನ್ಯ ಬಸ್‌ ಕಡಿತಗೊಳಿಸಲಾಗಿದೆ. ಅಪಘಾತ, ನಿರ್ವಹಣೆ ಹಾಗೂ ತಲಾ ಘಟಕಗಳಲ್ಲಿ 5 ಬಸ್‌ ಮೀಸಲಿರಿಸಲಾಗುತ್ತಿದೆ. ಹೀಗಾಗಿ ಅವಳಿ ನಗರದ ನಡುವೆ ಸಂಚರಿಸುವ ಜನರಿಗೆ ಸಮರ್ಪಕವಾಗಿ ಸಾರಿಗೆ ವ್ಯವಸ್ಥೆ ಕೊರತೆ ಉಂಟಾಗುತ್ತಿದೆ. ಬಸ್‌ಗಳ ಕೊರತೆಯಿಂದ ಪ್ರಯಾಣಿಕರು ನಿತ್ಯವೂ ನಿಂತುಕೊಂಡು ಓಡಾಡುವಂತಾಗಿದೆ. ದಿನ ಕಳೆದಂತೆ ಜನರು ಚಿಗರಿ ಸವಾರಿಗೆ ಹೆಚ್ಚು ಒಲವು ತೋರುತ್ತಿರುವುದರಿಂದ ಜನದಟ್ಟಣೆ ಹೆಚ್ಚಾಗುತ್ತಿದೆ. ಇಂತಹದರಲ್ಲಿ ದುರಸ್ಥಿಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕಾದ ಕಾರ್ಯಾಚರಣೆ ಶಾಖೆ ಸಂಪೂರ್ಣ ನಿರ್ಲಕ್ಷ್ಯ ತೋರುತ್ತಿರುವುದು ಜನರು ಸಮಸ್ಯೆ ಅನುಭವಿಸುವಂತಾಗಿದೆ.

ವೋಲ್ವೋ ಬಸ್ಸಿನ ಮುಂಭಾಗದ ಗಾಜು ಒಡೆದರೆ ಅದನ್ನು ಬೆಂಗಳೂರಿನಿಂದ ತರಿಸಿಕೊಂಡು ಅಳವಡಿಸಲಾಗುತ್ತದೆ. ಈ ಕಾರ್ಯಕ್ಕೆ ಕನಿಷ್ಠ ಐದಾರು ದಿನ ಬೇಕಾಗುತ್ತಿದೆ. ಸಣ್ಣ ಕಾರ್ಯಕ್ಕೆ ಇಷ್ಟೊಂದು ದಿನ ಬೇಕಾಗಿರುವುದರಿಂದ ತೀವ್ರ ಜಖಂಗೊಂಡಿರುವ ಬಸ್‌ಗಳ ದುರಸ್ತಿಗೆ ಇನ್ನೆಷ್ಟು ದಿನ ಬೇಕಾಗುತ್ತದೆ ಎಂಬುದು ಸಂಸ್ಥೆಯ ತಾಂತ್ರಿಕ ಸಿಬ್ಬಂದಿ ಅಭಿಪ್ರಾಯವಾಗಿದೆ.

Advertisement

•ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next