Advertisement
ಹತ್ತು ಹಲವು ಕಾರಣಗಳಿಂದ ಬಿಆರ್‌ಟಿಎಸ್ ಯೋಜನೆಯ ವಿಳಂಬ ಕಾಮಗಾರಿಯಿಂದ ಈ ಯೋಜನೆ ಯಾಕಪ್ಪ ನಗರಕ್ಕೆ ಬಂತು ಎಂದು ಅವಳಿ ನಗರದಲ್ಲಿ ಓಡಾಡುತ್ತಿದ್ದ ಜನ ಶಾಪ ಹಾಕುತ್ತಿದ್ದರು. ಯೋಜನೆ ತಂದ ಜನಪ್ರತಿನಿಧಿಗಳು ಕೂಡ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೆಲ್ಲದರ ನಡುವೆಯೂ ಕುಂಟುತ್ತ-ತೆವಳುತ್ತಾ ಬಸ್ ಓಡುವಷ್ಟರ ಮಟ್ಟಿಗೆ ತಲುಪಿಸಲಾಯಿತು.
Related Articles
Advertisement
ಹೆಚ್ಚುತ್ತಿದೆ ನಷ್ಟದ ಪ್ರಮಾಣ: ಬಿಆರ್‌ಟಿಎಸ್ ವಾಯವ್ಯ ಸಾರಿಗೆ ಸಂಸ್ಥೆ ಪಾಲಿಗೆ ಬಿಳಿಯಾನೆಯಾಗಿದೆ. ಪ್ರತಿ ತಿಂಗಳು ಸುಮಾರು 1.5 ಕೋಟಿ ರೂ. ನಷ್ಟ ಅನುಭವಿಸುತ್ತಿದೆ. ಕಳೆದ ಒಂದು ವರ್ಷದಲ್ಲಿ ಸುಮಾರು 20 ಕೋಟಿ ರೂ. ನಷ್ಟವಾಗಿದೆ. ಕಡಿಮೆ ಬಸ್ ದರ ಇರುವುದು ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಕೇವಲ 100 ಬಸ್‌ಗಳಿಂದ ಇಷ್ಟೊಂದು ಪ್ರಮಾಣದ ನಷ್ಟ ಸಂಸ್ಥೆಗೆ ದೊಡ್ಡ ಹೊರೆಯಾಗಿ ಪರಿಣಮಿಸುತ್ತಿದೆ. ವರ್ಷ ಕಳದಂತೆಲ್ಲ ನಷ್ಟದ ಪ್ರಮಾಣ ಹೆಚ್ಚಾಗಲಿದ್ದು, ಮುಂದೆ ಹೇಗೆ ಎನ್ನುವ ಪ್ರಶ್ನೆ ಅಧಿಕಾರಿಗಳಲ್ಲಿ ಕಾಡುತ್ತಿದೆ. ಸರಕಾರದಿಂದ ಬರಬೇಕಾದ ಪ್ರೋತ್ಸಾಹ ಧನ ಇನ್ನೂ ಸಂಸ್ಥೆಗೆ ಬಂದಿಲ್ಲ. ಮೊದಲ ಹಂತದಲ್ಲಿ 20 ಕೋಟಿ ರೂ. ಮಂಜೂರಾಗಿದ್ದು, ನಗರಾಭಿವೃದ್ಧಿ ಇಲಾಖೆಯಿಂದ ಸಂಸ್ಥೆಗೆ ವರ್ಗಾಯಿಸಲು ವಿಳಂಬವಾಗುತ್ತಿದೆ.
ಈಡೇರದ ಭರವಸೆಗಳು : ಬಿಆರ್‌ಟಿಎಸ್‌ನಿಂದ ಅವಳಿ ನಗರದ ನಡುವೆ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎನ್ನುವ ಯೋಜನೆ ಮೂಲ ಉದ್ದೇಶಕ್ಕೆ ಕೊಡಲಿ ಪೆಟ್ಟು ಬಿದ್ದಿದೆ. ಹುಬ್ಬಳ್ಳಿಯ ಸಿಬಿಟಿಯಿಂದ ಬೈರಿದೇವರಕೊಪ್ಪ ಹಾಗೂ ಧಾರವಾಡದ ಮಿತ್ರ ಸಮಾಜದಿಂದ ವಿದ್ಯಾಗಿರಿವರೆಗೂ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಟ್ರಾಕ್ ಸಿಗ್ನಲ್‌ಗಳು ಕೂಡ ಕಾರಣವಾಗಿವೆ ಎನ್ನುವ ಆರೋಪಗಳಿವೆ. ಟ್ರಾಕ್ ಸಿಗ್ನಲ್‌ಗಳಿಗೆ ಮೊದಲ ಬಾರಿಗೆ ಕ್ಯೂಟಿ ತಂತ್ರಜ್ಞಾನ ಅಳವಡಿಸಿದರೂ ಪರಿಣಾಮಕಾರಿ ಸಂಚಾರ ವ್ಯವಸ್ಥೆ ಜನರಿಗೆ ದೊರೆಯುತ್ತಿಲ್ಲ ಎನ್ನುವ ಭಾವನೆ ಜನರಲ್ಲಿದೆ. ಈ ಪ್ರಮುಖ ನಿಲ್ದಾಣಗಳಲ್ಲಿ ಟಿಕೆಟ್ ಪಡೆಯಲು ಉಂಟಾಗಿರುವ ಸರತಿ ಸಾಲಿಗೆ ಇತಿಶ್ರೀ ಹಾಡಲು ಸಾಧ್ಯವಾಗಿಲ್ಲ. ಇನ್ನೂ ಕೆಲವೆಡೆ ಬಿಆರ್‌ಟಿಎಸ್ ಬಸ್ ನಿಲ್ದಾಣಕ್ಕೆ ಬರಲು ಪ್ರಾಣ ಕೈಯಲ್ಲಿ ಹಿಡಿದುಕೊಂಡು ಬರುವಂತಾಗಿದೆ. ಪಾದಚಾರಿ ಮೇಲ್ಸೇತುವೆಗಳಿಗೆ ಅಳವಡಿಸಿರುವ ಲಿಫ್ಟ್‌ಗಳ ಮುಖವನ್ನು ಜನರು ನೋಡಿಲ್ಲ. ಬಿಆರ್‌ಟಿಎಸ್ ಪ್ರಮುಖ ಯೋಜನೆಗಳಲ್ಲಿ ಒಂದಾದ ಸ್ಮಾರ್ಟ್ ಕಾರ್ಡ್ ವಿತರಣೆಗೆ ಭಾಗ್ಯ ಕೂಡಿ ಬಂದಿಲ್ಲ.
ಅಲ್ಲಲ್ಲಿ ಪಾರ್ಕಿಂಗ್ ಸ್ಥಳ ಗುರುತಿಸುವ ಕೆಲಸ ನಡೆಯಿತೇ ವಿನಃ ಕಾರ್ಯರೂಪಕ್ಕೆ ಬರಲಿಲ್ಲ. ಬಿಆರ್‌ಟಿಎಸ್ ಕಾರಿಡಾರ್ ಗೆ ನೀಡಿದ ಪ್ರಾಶಸ್ತ ಮಿಶ್ರ ಪಥಕ್ಕೆ ನೀಡದ ಪರಿಣಾಮ ರಸ್ತೆ ಎಂಬುದು ಪಾರ್ಕಿಂಗ್ ಸ್ಥಳವಾಗುತ್ತಿದೆ. ಬೇಂದ್ರೆ ಹಾಗೂ ವಾಯವ್ಯ ಸಾರಿಗೆ ಸಂಸ್ಥೆ ಬಸ್‌ಗಳ ಸಂಚಾರದಿಂದ ಮಿಶ್ರಪಥದ ಸಂಚಾರ ಹೇಳ ತೀರದು. ಮಳೆಗಾಲದಲ್ಲಿ ಕೆರೆಯಂತಾಗುವ ಬಸ್ ನಿಲ್ದಾಣಗಳು, ಒಳ ಚರಂಡಿ ವ್ಯವಸ್ಥೆಯೇ ದುರ್ನಾತಕ್ಕೆ ಪರಿಹಾರ ಕಲ್ಪಿಸಿಲ್ಲ. ಬಿಆರ್‌ಟಿಎಸ್ ಸಾರಿಗೆಗೆ ಸಂಪರ್ಕ ಕಲ್ಪಿಸುವ ಹೊಸೂರು ಟರ್ಮಿನಲ್ ಬಳಕೆಯಾಗದೆ ಗಿಡ ಗಂಟಿ ಬೆಳೆದು ಪಾಳು ಬಿದ್ದಂತೆ ಕಾಣುತ್ತಿದೆ. ಸುಮಾರು 120 ಕೋಟಿ ರೂ. ವೆಚ್ಚದ ಐಟಿಎಸ್ ಕೇಂದ್ರ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಪಿಒಎಸ್ ಸಿಬ್ಬಂದಿಗೆ ಕಲ್ಪಿಸಬೇಕಾಗಿದ್ದ ಶೌಚಾಲಯ ಭರವಸೆ ಈಡೇರಿಲ್ಲ.
-ಹೇಮರಡ್ಡಿ ಸೈದಾಪುರ