ಗುಳೇದಗುಡ್ಡ: ಇಲ್ಲಿಯ ಸರ್ಕಾರಿ ಆಸ್ಪತ್ರೆ ಕಳೆದ ಐದಾರು ವರ್ಷಗಳಿಂದ ಗರ್ಭಿಣಿಯರಿಗೆ ವರವಾಗುತ್ತ ಬಂದಿದೆ. ಆದರೆ ಕಳೆದ 20 ದಿನಗಳಿಂದ ಮುಖ್ಯ ವೈದ್ಯರು ರಜೆ ಮೇಲೆ ತೆರಳಿದ್ದರಿಂದ ಗರ್ಭಿಣಿಯರು ಹೆರಿಗೆ ಮಾಡಿಸಿಕೊಳ್ಳಲು ಪರದಾಡುವಂತಾಗಿದೆ.
ಅಲ್ಲದೇ ಹೆರಿಗೆ ಸಂಕಟ ಒಂದೆಡೆಯಾದರೆ ಖಾಸಗಿ ಆಸ್ಪತ್ರೆಗೆ ತೆರಳಿದರೆ ದೊಡ್ಡ ಮೊತ್ತ ತೆರಬೇಕಲ್ಲ ಎಂಬ ಚಿಂತೆ ಸಾರ್ವಜನಿಕರಲ್ಲಿ ಕಾಡುತ್ತಿದೆ.
ಕಳೆದ 25 ದಿನಗಳಿಂದ ಇಲ್ಲಿನ ಮುಖ್ಯ ವೈದ್ಯಾಧಿಕಾರಿಗಳು ಹಾಗೂ ಹೆರಿಗೆ ಮತ್ತು ಸ್ತ್ರೀರೋಗ ತಜ್ಞರಾಗಿದ್ದ ಡಾ|ನಾಗರಾಜ ಕುರಿ ವಿಶ್ರಾಂತಿ ರಜೆ ಪಡೆದಿದ್ದು, ಅವರ ಸ್ಥಾನಕ್ಕೆ ತಾತ್ಕಾಲಿಕವಾಗಿ ಬೇರೆ ವೈದ್ಯರನ್ನು ನೇಮಕ ಮಾಡದೇ ಇರುವುದರಿಂದ ಆಸ್ಪತ್ರೆ ಈಗ ಬಿಕೋ ಎನ್ನುತ್ತಿದೆ.
ಡಾ|ನಾಗರಾಜ ಕುರಿ ಸರ್ಕಾರಿ ಆಸ್ಪತ್ರೆಗೆ ಆಗಮಿಸಿದ ದಿನದಿಂದ ಆಸ್ಪತ್ರೆಯಲ್ಲಿ ಸಾಕಷ್ಟು ಹೆರಿಗೆಗಳು ಆಗುತ್ತಿವೆ. ಅಲ್ಲದೇ ಬಡವರಿಗೆ ಇದು ವರವಾಗಿದೆ. ಈ ಸಮುದಾಯ ಆರೋಗ್ಯ ಕೇಂದ್ರ ಕಳೆದ ಐದಾರು ವರ್ಷಗಳಿಂದ ಹೆರಿಗೆಯ ಕೇಂದ್ರವಾಗಿತ್ತು. ಗುಳೇದಗುಡ್ಡ ಸೇರಿದಂತೆ ಬಾದಾಮಿ, ಗಜೇಂದ್ರಗಡ, ಮುದ್ದೇಬಿಹಾಳ, ಕಮತಗಿ, ಇಳಕಲ್ಲ, ಗುಡೂರ ಮತ್ತಿತರ ಊರುಗಳಲ್ಲಿನ ಬಡ ಜನರು ಹೆರಿಗೆಗಾಗಿ ಇಲ್ಲಿಗೆ ಆಗಮಿಸುತ್ತಿದ್ದರು.
ಮುಖ್ಯ ವೈದ್ಯಾಧಿ ಕಾರಿಗಳು ಹಾಗೂ ಹೆರಿಗೆ ತಜ್ಞರಾಗಿದ್ದ ಡಾ|ಕುರಿ ಸಹಜ ಹೆರಿಗೆ ಮಾಡಿಸುವುದರಲ್ಲಿ ಹೆಸರು ಗಳಿಸಿದ್ದರಿಂದ ಪ್ರತಿ ತಿಂಗಳು ನೂರಕ್ಕೂ ಹೆಚ್ಚು ಹೆರಿಗೆಗಳು ಈ ಆಸ್ಪತ್ರೆಯಲ್ಲಿ ದಾಖಲಾಗುತ್ತಿದ್ದವು. ಈಗಲೂ ದೂರ ದೂರಿನಿಂದ ಬಡ ಹೆಣ್ಣು ಮ್ಕಕಳು ಇಲ್ಲಿಗೆ ಹೆರಿಗೆ ಮಾಡಿಸಿಕೊಳ್ಳಲು ಆಗಮಿಸಿ ಹೆರಿಗೆಯ ವೈದ್ಯರಿಲ್ಲದಿರುವುದನ್ನು ಕಂಡು ವಾಪಸ್ ಬೇರೆ ಆಸ್ಪತ್ರೆಗೆ ತೆರಳುತ್ತಿದ್ದಾರೆ. ಹೆರಿಗೆಗೆ ಬರುತ್ತಿದ್ದ ಬಡವರು ಈಗ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ.
ಹೀಗೆ ತುರ್ತಾಗಿ ಆಗಮಿಸುವ ಗರ್ಭಿಣಿಯರಿಗೆ ತೊಂದರೆಯಾದರೆ ಈ ಆಸ್ಪತ್ರೆಯಲ್ಲಿ ನೋಡುವವರು ಇಲ್ಲ. ಇದಕ್ಕೆ ಯಾರು ಹೊಣೆ? ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಇಲ್ಲಿನ ಆಸ್ಪತ್ರೆಗೆ ಕೂಡಲೇ ತಾತ್ಕಾಲಿಕವಾಗಿ ತಜ್ಞ ಹೆರಿಗೆ ವೈದ್ಯರನ್ನು ನೇಮಕ ಮಾಡಬೇಕಾಗಿದೆ.
ಗುಳೇದಗುಡ್ಡದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾ ಧಿಕಾರಿಗಳು ವಿಶ್ರಾಂತಿ ರಜೆ ಮೇಲೆ ಇರುವುದರಿಂದ, ಜಿಲ್ಲಾ ಆರೋಗ್ಯಾಧಿಕಾರಿಗಳ ಗಮನಕ್ಕೆ ತಂದು ಇಲ್ಲಿನ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ.
ಎಂ.ಬಿ. ಪಾಟೀಲ,
ತಾಲೂಕು ವೈದ್ಯಾಧಿಕಾರಿಗಳು, ಬಾದಾಮಿ
ಮೇ 11ರಂದು ನನ್ನ ಸೊಸೆಯ ಡಿಲೇವರಿ ಇಲ್ಲಿಯೇ ಇತ್ತು. ನನ್ನ ಸೊಸೆಯ ಜತೆಗೆ ಒಟ್ಟು 11 ಗರ್ಭಿಣಿಯರು ಬಂದಿದ್ದರು. ಆದರೆ ಯಾವ ವೈದ್ಯರು ಇಲ್ಲಿರಲಿಲ್ಲ. ಹೀಗಾಗಿ ನಾವು ಎಲ್ಲ 11 ಜನರು ಖಾಸಗಿ ಆಸ್ಪತ್ರೆಗೆ ಹೋಗಬೇಕಾಯಿತು. ಇದರಿಂದ ಆರ್ಥಿಕವಾಗಿ ತೊಂದರೆಗೆ ಸಿಲುಕುವಂತಾಗಿದೆ. ಕೂಡಲೇ ಇಲ್ಲಿನ ವೈದ್ಯರ ಸಮಸ್ಯೆ ಬಗೆಹರಿಸಬೇಕು.
ಸಾವಿತ್ರಿ ಜೋಗೂರ, ಗುಳೇದಗುಡ್ಡ
ಮಲ್ಲಿಕಾರ್ಜುನ ಕಲಕೇರಿ