Advertisement

ಆಲಮಟ್ಟಿ ಜಲಾಶಯಕ್ಕೆ ಮುಖ್ಯಮಂತ್ರಿ ಬಾಗಿನ ಅರ್ಪಣೆ

07:10 AM Aug 19, 2017 | |

ಬಾಗಲಕೋಟೆ: ಆಲಮಟ್ಟಿಯ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅಣೆಕಟ್ಟೆ ಭರ್ತಿಯಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಬಾಗಿನ ಅರ್ಪಿಸಿದರು.

Advertisement

ಕೃಷ್ಣಾ ಭಾಗ್ಯ ಜಲ ನಿಗಮದಿಂದ ನಿರ್ಮಿಸಿದ ಈ ಬೃಹತ್‌ ಜಲಾಶಯದಲ್ಲಿ ಶುಕ್ರವಾರ 123 ಟಿಎಂಸಿ ಅಡಿ ನೀರು
ಸಂಗ್ರಹವಾಗಿತ್ತು. ಒಟ್ಟು 519.60 ಮೀಟರ್‌ (123 ಟಿಎಂಸಿ) ಸಾಮರ್ಥಯದ ಜಲಾಶಯದಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ಸಂಗ್ರಹವಾಗಿತ್ತು.

ಸಚಿವರಾದ ಎಂ.ಬಿ.ಪಾಟೀಲ ಹಾಗೂ ಉಮಾಶ್ರೀ, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‌. ಆರ್‌.ಪಾಟೀಲ, ಬಾಗಲಕೋಟೆ ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ, ವಿಜಯಪುರ ಜಿಪಂ ಅಧ್ಯಕ್ಷೆ ನೀಲಮ್ಮ ಮೇಟಿ, ಶಾಸಕರಾದ ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ, ಬಿ.ಬಿ.ಚಿಮ್ಮನಕಟ್ಟಿ, ವಿಜಯಾನಂದ ಕಾಶಪ್ಪನವರ ಮುಂತಾದವರು ಇದ್ದರು.

ಹಲವು ಶಾಸಕರ ಗೈರು: ಬಾಗಲಕೋಟೆ ಶಾಸಕ ಎಚ್‌.ವೈ. ಮೇಟಿ, ನಾಗಠಾಣ ಶಾಸಕ ಪ್ರೊ. ರಾಜು ಆಲಗೂರ, ವಿಜಯಪುರ ನಗರ ಶಾಸಕ ಡಾ. ಮಕುಲ್‌ ಬಾಗವಾನ, ಮುದ್ದೇಬಿಹಾಳ ಶಾಸಕ ಹಾಗೂ ಸರ್ಕಾರದ ದೆಹಲಿ ಪ್ರತಿನಿಧಿ ಸಿ.ಎಸ್‌. ನಾಡಗೌಡ,ಕಾಂಗ್ರೆಸ್‌ ಬಂಡಾಯ ಶಾಸಕ -ದೇವರಹಿಪ್ಪರಗಿಯ ಎ.ಎಸ್‌. ಪಾಟೀಲ (ನಡಹಳ್ಳಿ), ಸಿಂದಗಿಯ ಬಿಜೆಪಿ ಶಾಸಕ ರಮೇಶ ಭೂಸನೂರ ಗೈರಾಗಿದ್ದರು. ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಸಿದ್ದು ನ್ಯಾಮಗೌಡ, ಮುಧೋಳದ ಬಿಜೆಪಿ ಶಾಸಕ ಗೋವಿಂದ ಕಾರಜೋಳ ಗೈರಾಗಿದ್ದರು.

ಶಾಸಕರಿಗಾಗಿ ಕಾದರು ಸಿಎಂ!
ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಣೆ ವೇಳೆ, ಶಾಸಕರ ಬರುವಿಕೆಗಾಗಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕೆಲ
ಸಮಯ ಕಾದು ನಿಂತ ಪ್ರಸಂಗ ನಡೆಯಿತು. ಬೆಳಗ್ಗೆ 11.40ಕ್ಕೆ ಹೆಲಿಕಾಪ್ಟರ್‌ ಆಲಮಟ್ಟಿಯ ಹೆಲಿಪ್ಯಾಡ್‌ಗೆ ಬಂದಿಳಿಯಿತು. ಅಲ್ಲಿ
ವಿಜಯಪುರ ಜಿಲ್ಲಾಡಳಿತದಿಂದ ಮುಖ್ಯಮಂತ್ರಿಗಳನ್ನು ಬರ ಮಾಡಿಕೊಳ್ಳಲಾಯಿತು. ಅಲ್ಲಿಂದ 12.15ಕ್ಕೆ ಸಿಎಂ  ಆಲಮಟ್ಟಿ 
ಜಲಾಶಯದ ಮೇಲೆ ಬಂದರೂ ಯಾವುದೇ ಸಚಿವರು, ಶಾಸಕರು ಬಂದಿರಲಿಲ್ಲ. ತಮ್ಮ ಕಾರಿನಲ್ಲಿದ್ದ ಜಲ ಸಂಪನ್ಮೂಲ ಸಚಿವರಿಗೆ “ಏ ಶಾಸಕರೆಲ್ಲ ಬರ್ಲಿ ಇರಪ್ಪಾ’ ಎಂದು ಸಚಿವ ಪಾಟೀಲರಿಗೆ ಹೇಳಿದ ಸಿಎಂ, ಸುಮಾರು ಮೂರು ನಿಮಿಷಗಳ ಕಾಲ ಕಾದರು. ಆಗ ಶಾಸಕರಾದ ವಿಜಯಾನಂದ ಕಾಶಪ್ಪನವರ, ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ,ಜೆ.ಟಿ. ಪಾಟೀಲ, ಬಿ.ಬಿ. ಚಿಮ್ಮನಕಟ್ಟಿ, ಸಚಿವೆ ಉಮಾಶ್ರೀ ಒಬ್ಬೊಬ್ಬರಾಗಿ ಬಂದರು. “ಏ ಶಾಸಕರು ಬೇಗ ಬರ್ರಪ್ಪಾ’ ಎಂದು ಸಿಎಂ ಕರೆಯುತ್ತಿದ್ದರು. ಎಲ್ಲರೂ ಬಂದ ಬಳಿಕ, ಬಾಗಿನ ಅರ್ಪಿಸಲು ವ್ಯವಸ್ಥೆ ಕಲ್ಪಿಸಿದ್ದ ಸ್ಥಳಕ್ಕೆ ಸಿಎಂ ಹೋದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next