ಆಳಂದ: ಸ್ವಚ್ಛ ಭಾರತ ಸ್ವತ್ಛ ನಗರವನ್ನಾಗಿಸಲು ಪುರಸಭೆಯೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ವಿಜಯಮಹಾಂತೇಶ ಹೂಗಾರ ಜನತೆಗೆ ಕರೆ ನೀಡಿದರು.
ಪಟ್ಟಣದ ಹನುಮಾನ ದೇವಸ್ಥಾನ ಆವರಣದಲ್ಲಿ ಪುರಸಭೆ ಹಾಗೂ ಲೈಫ್ ಲೈನ್ ಅಸೋಶಿಯೇಶನ್ ಜೇವರ್ಗಿ ಸಂಸ್ಥೆಯ ಆಶ್ರಯದಲ್ಲಿ ಸ್ವಚ್ಛ ಭಾರತ ಅಭಿಯಾನ ಜಾಗೃತಿ ಮತ್ತು ಕಲಾ ತಂಡದ ಬೀದಿನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ನಾವು ವಾಸಿಸುವ ಬಡಾವಣೆ ನಗರದಲ್ಲಿ ಪುರಸಭೆ ಸಿಬ್ಬಂದಿಗಳೊಂದಿಗೆ ನಾಗರಿಕರು ಸಹ ಸ್ವಚ್ಛತೆಗೆ ಒತ್ತು ನೀಡಬೇಕು. ಸ್ವಚ್ಛತೆ ಇದ್ದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ. ಬೀದಿ ಬದಿಗಳ ಮೇಲೆ ಬೇಕಾಬಿಟ್ಟಿಯಾಗಿ ಕಸವನ್ನು ಚಲ್ಲದೆ, ಕಸ ಸಂಗ್ರಹಿಸಲು ಸಿಬ್ಬಂದಿಗಳು ಮನೆ ಬಾಗಿಲಿಗೆ ಬಂದಾಗ ಕಸವನ್ನು ಗಾಡಿಗೆ ಹಾಕಬೇಕು. ನೀರಿನ ಬಾಟಲ್, ಪ್ಲಾಸ್ಟಿಕ್‌ಗಳನ್ನು ಚರಂಡಿಗೆ ಎಸೆದರೆ ನೀರು ಹರಿಯದೆ ರಸ್ತೆಗೆ ಬರುತ್ತವೆ. ಇದರಿಂದ ರಸ್ತೆ ಮಲೀನವಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಕಾಲಕಾಲಕ್ಕೆ ಬಡಾವಣೆಗಳಲ್ಲಿ ಸ್ವತ್ಛತೆ ಆಗದೆ ಇದ್ದಲ್ಲಿ ಗಮನಕ್ಕೆ ತಂದರೆ ಸರಿಪಡಿಸಲಾಗುವುದು ಎಂದು ಹೇಳಿದರು.
ಪುರಸಭೆ ವಾರ್ಡ್ ಸದಸ್ಯ ಶ್ರೀಶೈಲ ಪಾಟೀಲ, ಯುವ ಮುಖಂಡ ಶ್ರೀಶೈಲ ಖಜೂರಿ, ಸಿದ್ದು ಪೂಜಾರಿ, ಪರಿಸರ ಅಭಿಯಂತರ ರವಿಕಾಂತ ಮೀಸ್ಕಿನ್, ಎಸ್‌ಐ ಲಕ್ಷ್ಮಣ ತಳವಾರ ಇದ್ದರು. ಬಳಿಕ ಪ್ರದರ್ಶನಗೊಂಡ ಸಂಸ್ಥೆಯ ಕಲಾತಂಡ ಬೀದಿ ನಾಟಕದಲ್ಲಿ ಸ್ವಚ್ಛತೆ ಕುರಿತು ನಾಗರಿಕ ಸಮುದಾಯದಲ್ಲಿ ಹಕ್ಕು ಮತ್ತು ಕರ್ತವ್ಯ ಜವಾಬ್ದಾರಿ ಕುರಿತು ಅರಿವು ಮೂಡಿಸಲಾಯಿತು.