Advertisement

Haveri ; ಬಿಜೆಪಿಯ “ಕೋಲೆ ಬಸವ’ ಸಂಸದರಿಗೆ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

11:18 PM Feb 18, 2024 | Team Udayavani |

ಹಾವೇರಿ: “ಕರ್ನಾಟಕಕ್ಕೆ ಅನ್ಯಾಯವಾದಾಗ ಬಿಜೆಪಿ ಸಂಸದರು ಯಾವತ್ತೂ ಧ್ವನಿ ಎತ್ತುವುದಿಲ್ಲ. ಪ್ರಧಾನಿ ಮೋದಿ ಹೇಳಿದ್ದನ್ನು ತಲೆ ಅಲ್ಲಾಡಿಸಿ ಕೇಳಿಸಿಕೊಂಡು ಬರುತ್ತಾರೆ. ಹೀಗಾಗಿ ಇಂಥ “ಕೋಲೆ ಬಸವ’ ಸಂಸದರಿಗೆ ಇನ್ನು ಮುಂದೆ ಮತ ಹಾಕಬೇಡಿ’ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

Advertisement

ರಾಷ್ಟ್ರಿಯ ಆರೋಗ್ಯ ಅಭಿಯಾನ ಹಾಗೂ ರಾಷ್ಟ್ರಿಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿ ಸರ್ಕಾರದ ಮಹತ್ವಾಕಾಂಕ್ಷೆಯ “ಆಶಾಕಿರಣ-ನಿಮ್ಮ ಮನೆ ಬಾಗಿಲಿಗೆ ಕಣ್ಣಿನ ಆರೈಕೆ’ ಯೋಜನೆಗೆ ಚಾಲನೆ ಕಾರ್ಯಕ್ರಮಕ್ಕೆ ಭಾನುವಾರ ಹಾವೇರಿಯಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಬಾಯಿ ಇಲ್ಲದ ಬಿಜೆಪಿಯವರನ್ನು ಮತ್ತೆ ಲೋಕಸಭೆಗೆ ಕಳುಹಿಸಬಾರದು. ನ್ಯಾಯ ಕೇಳಲು ಧೈರ್ಯ ಇಲ್ಲದವರು ಲೋಕಸಭೆಗೆ ಹೋಗಬಾರದು. ನಾವು ತೆರಿಗೆ ಕಟ್ಟಿದ ಹಣದಲ್ಲಿ ಶೇ.50ರಷ್ಟು ಪಾಲನ್ನು ನಮಗೆ ವಾಪಸ್‌ ಕೊಡಬೇಕು ಎಂದು ಕೇಳುತ್ತೇವೆ. ಇದಕ್ಕೆ ನೀವು ನಮಗೆ ಶಕ್ತಿ ಕೊಡಬೇಕು. ಆಗ ಕೇಂದ್ರದಿಂದ ಆದ ಅನ್ಯಾಯ ಸರಿಪಡಿಸುತ್ತೇವೆ ಎಂದರು.

ನಾವು 5 ಗ್ಯಾರಂಟಿ ಘೋಷಣೆ ಮಾಡಿದಾಗ ಜಾರಿ ಮಾಡಲು ಸಾಧ್ಯವಿಲ್ಲ, ಹಣಕಾಸಿನ ಪರಿಸ್ಥಿತಿ ದಿವಾಳಿಯಾಗುತ್ತದೆ ಎಂದು ವಿಪಕ್ಷದವರು ಟೀಕೆ ಮಾಡಿದ್ದರು. ಯಶಸ್ವಿಯಾಗಿ ಗ್ಯಾರಂಟಿ ಯೋಜನೆ ಜಾರಿಗೊಳಿಸಿದರೂ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿಲ್ಲ. ಬಜೆಟ್‌ ಗಾತ್ರ ಈಗ 46 ಸಾವಿರ ಕೋಟಿ ಹೆಚ್ಚಾಗಿದೆ. ಒಂದು ಬಜೆಟ್‌ನಿಂದ ಮತ್ತೂಂದು ಬಜೆಟ್‌ಗೆ ಗಾತ್ರ ಹೆಚ್ಚಾಗಬೇಕಾದರೆ ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗಲು ಸಾಧ್ಯವೇ? ವಿಪಕ್ಷದವರು ದಾರಿ ತಪ್ಪಿಸುತ್ತಿದ್ದಾರೆ. ಅವರಿಗೆ ತಕ್ಕ ಪಾಠವನ್ನು ನೀವೇ ಕಲಿಸಬೇಕು ಎಂದರು.

ರಾಜ್ಯದ 7 ಕೋಟಿ ಜನರಲ್ಲಿ 5 ಕೋಟಿ ಜನರು ಗ್ಯಾರಂಟಿ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ. ಬಜೆಟ್‌ನಲ್ಲಿ ಬಡತನದಿಂದ ನರಳುವ ಜನರು ಮಧ್ಯಮ ವರ್ಗಕ್ಕೆ ಬರಬೇಕು ಎಂಬುದು ನಮ್ಮ ಕಳಕಳಿ. ಬಿಜೆಪಿಯವರ ಕಳಕಳಿ ಕೋಮುವಾದ. ಒಂದು ಜಾತಿ ಜನರನ್ನು ಮತ್ತೂಂದು ಜಾತಿಗೆ ಎತ್ತಿ ಕಟ್ಟುವುದು. ಬಿಜೆಪಿಯವರ ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಎಂದು ಬಾಯಿ ಮಾತಿಗೆ ಸೀಮಿತವಾಗಿದೆ ಎಂದರು.

ಬೊಮ್ಮಾಯಿಗೆ ಧಮ್‌, ತಾಕತ್‌ ಇಲ್ಲ:
ರಾಜ್ಯಕ್ಕೆ ದೊಡ್ಡ ಅನ್ಯಾಯವಾಗಿದೆ. 25 ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದಿರಿ. ಸಂಸದ ಶಿವಕುಮಾರ ಉದಾಸಿ ರಾಜ್ಯಕ್ಕೆ ಆದ ಅನ್ಯಾಯದ ಬಗ್ಗೆ ಯಾವತ್ತಾದರೂ ಬಾಯಿ ಬಿಟ್ಟಿದ್ದಾರಾ? ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ವೇಳೆ 15ನೇ ಹಣಕಾಸು ಆಯೋಗದ ವರದಿಯಿಂದ ಅನ್ಯಾಯವಾಗಿದೆ ಎಂದಿದ್ದೆ. 5,495 ಕೋಟಿ ಕೊಡಬೇಕು ಎಂದು ಶಿಫಾರಸು ಮಾಡಿದ್ದಾರೆ. ಅಂತಿಮ ವರದಿಯಲ್ಲಿ 3 ಸಾವಿರ ಕೋಟಿ ಫೆರಿಫೆರಲ್‌ ರಿಂಗ್‌ ರೋಡ್‌ಗೆ, 3 ಸಾವಿರ ಕೋಟಿ ಕೆರೆ ಅಭಿವೃದ್ಧಿಗೆ ಕೊಡುತ್ತೇವೆ ಎಂದರು. ಒಟ್ಟು 11,495 ಕೋಟಿ. ಇದನ್ನು ಕೇಳಪ್ಪ. ಕೇಂದ್ರದಿಂದ ಕೇಳಪ್ಪ ಎಂದೆ. ಆದರೂ ಕೇಳಲಿಲ್ಲ, ಅವರಿಗೆ ಧಮ್‌, ತಾಕತ್ತು ಎರಡೂ ಇಲ್ಲ ಎಂದರು.

Advertisement

155 ಕೋಟಿ ಮಹಿಳೆಯರು ಶಕ್ತಿ ಯೋಜನೆಯಲ್ಲಿ ಉಚಿತವಾಗಿ ಬಸ್‌ ಪ್ರಯಾಣ ಮಾಡಿದ್ದಾರೆ. ಧರ್ಮಸ್ಥಳದ ಆದಾಯ ಜಾಸ್ತಿಯಾಗಿದೆ ಎಂದು ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ. ಗ್ಯಾರಂಟಿ ಕೊಟ್ಟ ಮೇಲೆ ರಾಜ್ಯದ ಆದಾಯ ಜಾಸ್ತಿಯಾಗಿದೆ. ಜಿಎಸ್ಟಿ ಬೆಳವಣಿಗೆ ಶೇ.18ರಷ್ಟಾಗಿದೆ. ಐದು ಗ್ಯಾರಂಟಿ ಯೋಜನೆಗಳಲ್ಲಿ ಜನರಿಗೆ ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಬ್ಯಾಂಕ್‌ ಖಾತೆಗೆ ಜಮೆ ಮಾಡುತ್ತಿದ್ದೇವೆ. ಬಡವರಿಗೆ ಶಕ್ತಿ ತುಂಬುವ ಕೆಲಸ ಮಾಡಿದೆ. ಬಡತನ ನಿವಾರಣೆ ಮಾಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದೇವೆ. ನಾವು ಎಲ್ಲ ಜಾತಿ, ಧರ್ಮದವರನ್ನು ಒಳಗೊಂಡ ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಎಂಬುದನ್ನು ನಿಜ ಅರ್ಥದಲ್ಲಿ ಜಾರಿಗೊಳಿಸಿದ್ದೇವೆ ಎಂದರು.
ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಗೃಹ ಸಚಿವ ಡಾ|ಜಿ.ಪರಮೇಶ್ವರ, ಕಾನೂನು ಸಚಿವ ಎಚ್‌.ಕೆ. ಪಾಟೀಲ, ಆರೋಗ್ಯ ಸಚಿವ ದಿನೇಶ ಗುಂಡೂರಾವ್‌, ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ನಗರಾಭಿವೃದ್ಧಿ ಸಚಿವ ಬಿ.ಎಸ್‌.ಸುರೇಶ್‌ ಸೇರಿದಂತೆ ಇತರರು ಇದ್ದರು.

ಏನಿದು ಆಶಾಕಿರಣ?
ರಾಜ್ಯದ ಮನೆ ಮನೆಗೆ ತೆರಳಿ ಪ್ರತಿ ಕುಟುಂಬದ ಸದಸ್ಯರ ಕಣ್ಣಿನ ತಪಾಸಣೆ ನಡೆಸುವಂಥ ಯೋಜನೆ ಇದಾಗಿದೆ. ಅದರಂತೆ, ಕಣ್ಣಿನ ಪೊರೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಶಸ್ತ್ರಚಿಕಿತ್ಸೆ, ಉಚಿತ ಕನ್ನಡಕ ವಿತರಣೆ ಮಾಡಲಾಗುತ್ತದೆ. ಮೊದಲ ಹಂತದಲ್ಲಿ ಹಾವೇರಿ, ಕಲಬುರಗಿ, ಚಿಕ್ಕಬಳ್ಳಾಪುರ, ಚಾಮರಾಜನಗರ, 2ನೇ ಹಂತದಲ್ಲಿ ಚಿತ್ರದುರ್ಗ, ಮಂಡ್ಯ, ರಾಯಚೂರು, ಉತ್ತರ ಕನ್ನಡ ಜಿಲ್ಲೆಯಲ್ಲಿ ಯೋಜನೆ ಜಾರಿಗೊಳ್ಳಲಿದೆ.

ಆಶಾಕಿರಣದಿಂದ ಎಲ್ಲರಿಗೂ ಅನುಕೂಲ
ಕಣ್ಣಿನ ದೋಷ ಸರಿಪಡಿಸಲು ರಾಜ್ಯಾದ್ಯಂತ ಮಕ್ಕಳು, ವೃದ್ಧರು, ಮಧ್ಯವಯಸ್ಕರನ್ನು ತಪಾಸಣೆಗೆ ಒಳಪಡಿಸಿ ದೋಷ ಪತ್ತೆ ಹಚ್ಚಿ ಉಚಿತವಾಗಿ ಕನ್ನಡಕ ನೀಡಲಾಗುವುದು. ಇದರಿಂದ ಎಲ್ಲರಿಗೂ ಅನುಕೂಲವಾಗಲಿದೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next