ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್‌ಗೆ ಕಪ್ಪ ನೀಡಿರುವ ಉಲ್ಲೇಖಗಳಿವೆ ಎನ್ನಲಾದ ಡೈರಿ ಬಿಡುಗಡೆಯಾದ ಬಳಿಕ ಎರಡನೇ ದಿನವಾದ ಶನಿವಾರವೂ ಮಧ್ಯಾಹ್ನದವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾರೊಬ್ಬರಿಗೂ ತಮ್ಮನ್ನು ಭೇಟಿ ಮಾಡಲು ಅವಕಾಶ ನೀಡಿರಲಿಲ್ಲ.
ಹಾಗಾಗಿ ಮುಖ್ಯಮಂತ್ರಿಗಳ ಭೇಟಿಗೆ ಆಗಮಿಸಿದ ಮುಖಂಡರು ನಿರಾಶೆ ಯಿಂದಲೇ ಹಿಂತಿರುಗುವಂತಾಯಿತು. ಮಧ್ಯಾಹ್ನದ ಬಳಿಕ ಕೆಪಿಸಿಸಿ ಅಧ್ಯಕ್ಷರು, ಕಾರ್ಯಾಧ್ಯಕ್ಷರು, ಕೆಲ ವಿಧಾನ ಪರಿಷತ್ ಸದಸ್ಯರನ್ನು ಮುಖ್ಯಮಂತ್ರಿಗಳು ಭೇಟಿಯಾಗಿ ಮಾತುಕತೆ ನಡೆಸಿದರು.
ಮುಖ್ಯಮಂತ್ರಿಗಳ ಶನಿವಾರದ ದಿನಚರಿಯಲ್ಲಿ ಮಧ್ಯಾಹ್ನ 3.30ಕ್ಕೆ ಸಂಗೊಳ್ಳಿ ರಾಯಣ್ಣ ಕ್ಷೇತ್ರದ ಅಭಿವೃದ್ಧಿ ಕುರಿತು ಚರ್ಚೆ ಹಾಗೂ ಸಂಜೆ 4.30ಕ್ಕೆ ಕೆಆರ್‌ಎಸ್ ಬೃಂದಾವನ ಗಾರ್ಡನ್ ಪುನರುಜ್ಜೀವನ ಸಂಬಂಧ ಚರ್ಚೆ ಸಭೆ ನಿಗದಿಯಾಗಿತ್ತು. ಹಾಗಾಗಿ ಮುಖ್ಯಮಂತ್ರಿಗಳು ಶನಿವಾರ ಬೆಳಗ್ಗೆಯಿಂದ ಅಧಿಕೃತ ನಿವಾಸ “ಕಾವೇರಿ’ಯಲ್ಲೇ ಉಳಿದಿದ್ದರು.
40 ನಿಮಿಷ ಕಾದು ಕುಳಿತ ಪರಂ: ಶನಿವಾರ ಬೆಳಗ್ಗೆ ಮುಖ್ಯಮಂತ್ರಿಗಳ ಭೇಟಿಗೆ ಆಗಮಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಅವಕಾಶ ಸಿಗದ ಕಾರಣ ಹಿಂತಿರುಗಿದರು. ಹಾಗೆಯೇ ಮೈಸೂರಿನ ಕಾಂಗ್ರೆಸ್ ಮುಖಂಡ ಹಾಗೂ ಮುಖ್ಯಮಂತ್ರಿಗಳ ಆಪ್ತನೂ ಆದ ಮರಿಗೌಡ ಅವರ ಭೇಟಿಗೂ ಅವಕಾಶ ಸಿಗಲಿಲ್ಲ. ಮಧ್ಯಾಹ್ನದ ವೇಳೆಗೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷರೂ ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕೂಡ ಸುಮಾರು 40 ನಿಮಿಷ ಮುಖ್ಯಮಂತ್ರಿಗಳ ಭೇಟಿಗೆ ಕಾದು ಕುಳಿತಿರುವಂತಾಯಿತು.
ರಮ್ಯಾಗೂ ಸಿಗದ ದರ್ಶನ ಭಾಗ್ಯ: ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಮೇಶ್ವರ್, ದಿನೇಶ್ ಗುಂಡೂ ರಾವ್, ವಿಧಾನ ಪರಿಷತ್ ಸದಸ್ಯರಾದ ವಿ.ಎಸ್.ಉಗ್ರಪ್ಪ, ಎಚ್.ಎಂ.ರೇವಣ್ಣ ಇತರರೊಂದಿಗೆ ಮಾತುಕತೆ ನಡೆಸಿದರು. ಬಳಿಕ “ಕೃಷ್ಣಾ’ದಲ್ಲಿ ಅಧಿಕೃತ ಸಭೆಯಲ್ಲಿ ಪಾಲ್ಗೊಂಡರು. ಸಭೆ ನಡೆಯುವ ವೇಳೆ ಆಗಮಿಸಿದ ಮಾಜಿ ಸಂಸದೆ ರಮ್ಯಾ ಅವರಿಗೂ ಭೇಟಿ ಅವಕಾಶ ಸಿಗಲಿಲ್ಲ. ಬಳಿಕ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರು ರಮ್ಯಾ ಅವರೊಂದಿಗೆ ಮಾತುಕತೆ ನಡೆಸಿ ಕಾವೇರಿಗೆ ಬಿಟ್ಟು ಮತ್ತೆ ಸಭೆಗೆ ಹಿಂತಿರುಗಿದರು.