Advertisement
ವೈಯಕ್ತಿಕ ಕಷ್ಟ-ನಷ್ಟಗಳನ್ನು ಬದಿಗೊತ್ತಿ, ಕುಟುಂಬದವರಿಂದ ಅಂತರ ಕಾಯ್ದುಕೊಂಡು ಕಾರ್ಯ ನಿರ್ವಹಿಸುತ್ತಿರುವ ಶುಷ್ರೂಷಕರ ಕರ್ತವ್ಯ ಪ್ರಜ್ಞೆ ಅನುಕರಣೀಯ ಎಂದು ಮುಖ್ಯಮಂತ್ರಿಗಳು ತಿಳಿಸಿದರು..
Related Articles
Advertisement
ಈ ಸಂದರ್ಭದಲ್ಲಿ ಸ್ಟಾಫ್ ನರ್ಸ್ ಗಳ ಕರ್ತವ್ಯ ನಿರ್ವಹಣೆ, ಆರೋಗ್ಯದ ಸ್ಥಿತಿಗತಿ ಮತ್ತಿತರ ವಿಷಯಗಳ ಕುರಿತು ಮುಖ್ಯಮಂತ್ರಿಗಳು ಚರ್ಚಿಸಿದರು. ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯ ಸಿಬ್ಬಂದಿಗೂ ರಿಸ್ಕ್ ಅಲೊವೆನ್ಸ್ ಒದಗಿಸುವಂತೆ ಬೀದರ್ನ ಸಂತೋಷ್ ಅವರು ಮಾಡಿದ ಮನವಿಗೆ ಉತ್ತರಿಸಿದ ಮುಖ್ಯಮಂತ್ರಿಗಳು ಈಗಾಗಲೇ ಈ ಕುರಿತು ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.
ವೆನ್ಲಾಕ್ ಆಸ್ಪತ್ರೆಯ ವಹೀದಾ ಅವರು ಎರಡನೇ ಅಲೆಯ ಸಂದರ್ಭದಲ್ಲಿ ಯುವಕರು, ಮಧ್ಯವಯಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ. ಮೊದಲ ಅಲೆಯ ಸಂದರ್ಭದಲ್ಲಿ ಇತರ ಆರೋಗ್ಯ ಸಮಸ್ಯೆಗಳಿರುವ ಹಿರಿಯ ನಾಗರಿಕರ ಮರಣ ಪ್ರಮಾಣ ಹೆಚ್ಚಾಗಿತ್ತು ಎಂದು ತಮ್ಮ ಅನುಭವವನ್ನು ಹಂಚಿಕೊಂಡರು. ಜೊತೆಗೆ ಕೋವಿಡ್ ಕರ್ತವ್ಯ ನಿರ್ವಹಿಸುತ್ತಿರುವ ನಮ್ಮ ಮನೆಯವರಿಗೆ ಸೋಂಕು ತಗಲುವ ಅಪಾಯ ಹೆಚ್ಚಿರುವುದರಿಂದ ಕುಟುಂಬದವರಿಗೂ ವ್ಯಾಕ್ಸಿನ್ ಒದಗಿಸುವಂತೆ ಮನವಿ ಮಾಡಿದರು.
ದಾವಣಗೆರೆಯ ಚಿಗಟೇರಿ ಆಸ್ಪತ್ರೆಯ ಶಾರದಾ ಅವರು ಕೋವಿಡ್ ಸೋಂಕಿತರ ಹೆರಿಗೆ ಮಾಡಿಸಿದ ಅನುಭವವನ್ನು ಹಂಚಿಕೊಂಡರು. ಒಂದು ತಿಂಗಳಿಗೆ ಸುಮಾರು 8 ಸೋಂಕಿತರಿಗೆ ಶಸ್ತ್ರ ಚಿಕಿತ್ಸೆ ಹಾಗೂ 10-12 ಸೋಂಕಿತರಿಗೆ ಸಹಜ ಹೆರಿಗೆಗಳಾಗುತ್ತಿದ್ದು, ತಮ್ಮ ಆಸ್ಪತ್ರೆಯಲ್ಲಿ ಇಂತಹ ತಾಯಿ-ಮಗುವಿನ ಮರಣ ಪ್ರಮಾಣ ಕಡಿಮೆ ಇದೆ ಎಂದು ತಿಳಿಸಿದರು.
ಎರಡೂವರೆ ತಿಂಗಳ ಹಿಂದಷ್ಟೇ ಪತಿಯನ್ನು ಕಳೆದುಕೊಂಡ ಬದಾಮಿ ತಾಲ್ಲೂಕು ಆಸ್ಪತ್ರೆಯ ರೇಣುಕಾ ಗೂಗಿಹಾಳ ಅವರಿಗೆ ಸಾಂತ್ವನ ಹೇಳಿದ ಮುಖ್ಯಮಂತ್ರಿಗಳು ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಸಲಹೆ ನೀಡಿದರು.
ಜನರು ಭಾವನಾತ್ಮಕವಾಗಿ ವರ್ತಿಸುವುದರಿಂದ, ಕರ್ತವ್ಯ ನಿರ್ವಹಣೆಗೆ ಅಡೆತಡೆಯಾಗುತ್ತದೆ. ಆದರೆ ಮೇಲಾಧಿಕಾರಿಗಳು ಇಂತಹ ಸಮಸ್ಯೆಗಳನ್ನು ಬಗೆಹರಿಸಿ, ಧೈರ್ಯ ತುಂಬುತ್ತಾರೆ ಎಂದು ಕೋಲಾರದ ಎಸ್. ಎನ್. ಆರ್. ಆಸ್ಪತ್ರೆಯ ಶಶಿಕಲಾ ಅವರು ತಿಳಿಸಿದರು.
ರಾಯಚೂರು ವೈದ್ಯಕೀಯ ಕಾಲೇಜಿನ ರಾಚೋಟಿ ವಾರದ ಅವರು ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯ ಸಿಬ್ಬಂದಿಗೆ ಜ್ಯೋತಿ ಸಂಜೀವಿನಿ ಸೌಲಭ್ಯ ವಿಸ್ತರಿಸುವ ಮೂಲಕ, ಕುಟುಂಬದವರು ಅನಾರೋಗ್ಯಕ್ಕೆ ಒಳಗಾದಾಗ ಚಿಕಿತ್ಸೆ ಒದಗಿಸಲು ನೆರವಾಗುವಂತೆ ಮನವಿ ಮಾಡಿದರು. ಈ ಕುರಿತು ಕ್ರಮ ವಹಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು. ನರ್ಸಿಂಗ್ ಸಿಬ್ಬಂದಿ ಲಸಿಕೆ ಪಡೆದ ಕಾರಣ, ಎರಡನೇ ಅಲೆಯಲ್ಲಿ ಸೋಂಕಿತರಾದ ಸ್ಟಾಫ್ ನರ್ಸ್ ಗಳ ಪ್ರಮಾಣ ಅತ್ಯಂತ ಕಡಿಮೆ. ಆದ್ದರಿಂದ ಸಾರ್ವಜನಿಕರ ಲಸಿಕೆ ಅಭಿಯಾನವನ್ನೂ ಸಹ ಬಲಪಡಿಸುವಂತೆ ಮನವಿ ಮಾಡಿದರು.
ಚಾಮರಾಜನಗರದ ಜಿಲ್ಲಾ ಆಸ್ಪತ್ರೆಯ ಪ್ರದೀಪ್ ಕುಮಾರ್ ಅವರು, ಸೋಂಕಿತರು ಸಕಾಲದಲ್ಲಿ ಚಿಕಿತ್ಸೆ ಪಡೆಯದೆ, ಆಸ್ಪತ್ರೆಗೆ ದಾಖಲಾಗದೆ ಸಾವನ್ನಪ್ಪುತ್ತಾರೆ. ಇದನ್ನು ತಪ್ಪಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಈಗಾಗಲೇ ಗ್ರಾಮೀಣ ಪ್ರದೇಶದ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರುಗಳಿಗೆ ದಾಖಲಿಸಲಾಗುತ್ತಿದ್ದು, ಆ ಮೂಲಕ ಸಕಾಲದಲ್ಲಿ ಚಿಕಿತ್ಸೆ ನೀಡುವುದನ್ನು ಖಾತರಿಪಡಿಸಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ವಿಜಯಪುರ ಜಿಲ್ಲೆಯ ಪುಷ್ಪರಾಜ್ ಅವರು ಸೋಂಕಿತರಿಗೆ ಔಷಧೋಪಚಾರದ ಜೊತೆಗೆ ಸ್ಥೈರ್ಯ ಮೂಡಿಸುವ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಆಸ್ಪತ್ರೆಯಿಂದ ಬಿಡುಗಡೆ ಹೊಂದುವಾಗ ಅವರು ತೋರಿಸುವ ಕೃತಜ್ಞತೆಯ ಭಾವ ಸಾರ್ಥಕತೆಯನ್ನು ಮೂಡಿಸುತ್ತದೆ ಎಂದು ತಿಳಿಸಿದರು.
ಹರಿಹರ ಸಾರ್ವಜನಿಕ ಆಸ್ಪತ್ರೆಯ ಶ್ವೇತಾ ಆರ್. ಅವರು ನರ್ಸಿಂಗ್ ಸಿಬ್ಬಂದಿ ಸತತ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ಹಾಗೂ ಹತ್ತಿರದಿಂದ ಸಾವು-ನೋವುಗಳನ್ನು ಕಾಣುವ ಹಿನ್ನೆಲೆಯಲ್ಲಿ ಅವರಿಗೆ ಆಪ್ತ ಸಮಾಲೋಚನೆ ಸೌಲಭ್ಯ ಒದಗಿಸಬೇಕು ಎಂದು ಮನವಿ ಮಾಡಿದರು.
ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯ ಸಂಧ್ಯಾರಾಣಿ ಅವರು ತಮ್ಮ ಆಸ್ಪತ್ರೆಯ ಸಿಬ್ಬಂದಿ ಕೊರತೆ ನೀಗಿಸುವಂತೆ ಮನವಿ ಮಾಡಿದರು.
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ಆರೋಗ್ಯ ಇಲಾಖೆ ಆಯುಕ್ತ ಡಾ. ಕೆ.ವಿ. ತ್ರಿಲೋಕಚಂದ್ರ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.