Advertisement
ಮೈತ್ರಿ ಸರಕಾರದ ಸ್ಥಿರತೆ, ಸುಸೂತ್ರ ವಿಧಾನಸಭಾ ಅಧಿವೇಶನ, ಸಂಪುಟ ವಿಸ್ತರಣೆ, ಅಪರೇಷನ್ ಕಮಲಕ್ಕೆ ತಡೆ ಹಾಗೂ ಶತ್ರುಸಂಹಾರಕ್ಕಾಗಿ ಹೋಮ ನಡೆಸಲಾಗಿತ್ತು. ಈ ಹಿಂದೆ ರೇವಣ್ಣ ಅವರು ಹೋಮದ ಸಂಕಲ್ಪ ಕೈಗೊಂಡಿದ್ದು, ಶುಕ್ರವಾರ
ಪೂರ್ಣಾಹುತಿಯೊಂದಿಗೆ ಹೋಮ ಸಂಪನ್ನಗೊಂಡಿತು. ಗುರುವಾರ ಸಂಜೆ ಶೃಂಗೇರಿಗೆ ಆಗಮಿಸಿದ್ದ ಕುಮಾರಸ್ವಾಮಿ, ದೇವಾಲಯಗಳಿಗೆ ಭೇಟಿ ನೀಡಿದ್ದರಲ್ಲದೆ ಜಗದ್ಗುರುಗಳ ದರ್ಶನಾಶೀರ್ವಾದ ಪಡೆದಿದ್ದರು. ಜಯಪುರ ಸಮೀಪದ ಗುಡ್ಡೆತೋಟದಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದರು.
ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ನಮ್ಮ ಕುಟುಂಬ ಮೊದಲಿನಿಂದಲೂ ಶೃಂಗೇರಿ ಪೀಠದಲ್ಲಿ
ಹಲವು ಧಾರ್ಮಿಕ ಕಾರ್ಯಗಳನ್ನು ನಡೆಸುತ್ತ ಬಂದಿದೆ. ನಾವು ಅದನ್ನು ಮುಂದುವರಿಸಿದ್ದು, ಇದರಲ್ಲಿ ಯಾವುದೇ ವಿಶೇಷ ಇಲ್ಲ. ಸಮಾಜದಲ್ಲಿ ಎಲ್ಲರಿಗೂ ಒಳಿತಾಗಲಿ ಎಂದು ಪ್ರಾರ್ಥಿಸಿ ಶಾರದಾಂಬೆಯ ಸನ್ನಿಧಿಯಲ್ಲಿ ಪೂಜೆ, ಹೋಮ ನಡೆಸಲಾಗಿದೆ ಎಂದರು. ಅಪರೇಷನ್ ಕಮಲದ ಬಗ್ಗೆ ಗಮನ ಸೆಳೆಯುತ್ತಿದ್ದಂತೆ “ಈ ಬಗ್ಗೆ ನನ್ನ ಬಳಿ ಕೇಳಬೇಡಿ. ಯಾರೆಲ್ಲಾ ಏನು ಮಾಡುತ್ತಿದ್ದಾರೆ ಎಂಬ ಬಗ್ಗೆ ಅರಿವಿದೆ. ಅದಕ್ಕೆ ನಾನೇಕೆ ತಲೆ ಕೆಡಿಸಿಕೊಳ್ಳಬೇಕು. ತಾಯಿ ಶಾರದೆ ಎಲ್ಲವನ್ನೂ ನೋಡಿಕೊಳ್ಳುತ್ತಾಳೆ. ದೇವರು ಕೊಟ್ಟ ಆಶೀರ್ವಾದ ದೊಡ್ಡದು. ತಾಯಿಯ ಆಶೀರ್ವಾದದಿಂದ ನಾನು ಸಿಎಂ ಆಗಿದ್ದೇನೆ.ಮನುಷ್ಯರಿಗಿಂತ ದೇವರ ಆಶೀರ್ವಾದ ದೊಡ್ಡದು. ಹೀಗಾಗಿಯೇ ದೇವರ ಸನ್ನಿಧಿಯಲ್ಲೇ ಪೂಜೆ ಸಲ್ಲಿಸಿದ್ದೇನೆ ಎಂದರು.