Advertisement

ಐದು ವರ್ಷ ಸರ್ಕಾರ ಸುಭದ್ರ: ಸಿಎಂ

06:00 AM Jun 07, 2018 | Team Udayavani |

ಬೆಂಗಳೂರು: ಎರಡೂ ಪಕ್ಷಗಳ ಕಾರ್ಯಕ್ರಮಗಳ ಬಗ್ಗೆ ಸಮನ್ವಯ ಸಮಿತಿಯಲ್ಲಿ ಚರ್ಚಿಸಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸುತ್ತೇವೆ. ಜನರ ವಿಶ್ವಾಸ ಗಳಿಸಿ, ಸಮ್ಮಿಶ್ರ ಸರ್ಕಾರದಿಂದ ಉತ್ತಮ ಆಡಳಿತ ನೀಡುತ್ತೇವೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

Advertisement

ನೂತನ ಸಚಿವರ ಪ್ರಮಾಣ ವಚನ ಸ್ವೀಕಾರದ ಬಳಿಕ ಬುಧವಾರ ನಡೆದ ಮೊದಲ ಔಪಚಾರಿಕ ಸಂಪುಟ ಸಭೆಯ ನಂತರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಇಬ್ಬರೂ ನಾಯಕರು ಮಾತನಾಡಿದರು.

ಸಮ್ಮಿಶ್ರ ಸರ್ಕಾರ ರಚನೆಯಿಂದಾಗಿ ಕೆಲ ನಿರ್ಧಾರ ಕೈಗೊಳ್ಳುವಾಗ ಸ್ವಲ್ಪ ಸಮಯ ಹಿಡಿಯುತ್ತದೆ. ಸುಭದ್ರ ಸಮ್ಮಿಶ್ರ ಸರ್ಕಾರ ಐದು ವರ್ಷ ಉತ್ತಮ ಆಡಳಿತ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೊದಲು ಮಾತನಾಡಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಸಚಿವ ಸಂಪುಟ ರಚನೆ ಬಗ್ಗೆ ಕೆಲ ಮಾಧ್ಯಮಗಳಲ್ಲಿ ಕಟು ಟೀಕೆಗಳು ಕೇಳಿ ಬಂದಿವೆ. ಕೆಲಮಾಧ್ಯಮಗಳು ಖಾತೆ ಹಂಚಿಕೆ ಬಗ್ಗೆಯೂ ವರದಿ ಮಾಡಿವೆ. ಹೊಸ ಸರ್ಕಾರ ಅದರಲ್ಲೂ ಮೈತ್ರಿ ಸರ್ಕಾರ ರಚನೆಗೆ ಸ್ವಲ್ಪ ಸಮಯ ಬೇಕಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸ್ವಂತಬಲದ ಸರ್ಕಾರವಿದ್ದಾಗಲೂ ಸಂಪುಟ ರಚನೆಗೆ ಅನೇಕ ಸಮಸ್ಯೆಗಳಿದ್ದುದನ್ನು ಹಿಂದೆ ಕಂಡಿದ್ದೇವೆ ಎಂದರು.

2008ರಲ್ಲಿ ಬಿಜೆಪಿ ಸರ್ಕಾರದ ಸಂಪುಟ ರಚನೆ ಸಂದರ್ಭದಲ್ಲಿ ಸರ್ಕಾರಿ ಬಸ್‌ಗಳಿಗೆ ಉದ್ರಿಕ್ತರು ಬೆಂಕಿ ಹಚ್ಚಿದ್ದನ್ನು
ನೆನಪಿಸಿಕೊಳ್ಳಬೇಕು. ಅವಕಾಶ ಸಿಗದಿದ್ದಾಗ ಭಾವೋದ್ವೇಗಕ್ಕೆ ಒಳಗಾಗಿ ಪ್ರತಿಭಟನೆ ನಡೆಸುವುದು ಸಹಜ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕಾಗುತ್ತದೆ. ಸುಭದ್ರ ಸರ್ಕಾರ ರಚಿಸಿ ಧನಾತ್ಮಕ ದೃಷ್ಟಿಕೋನದಲ್ಲಿ ಉತ್ತಮ ಆಡಳಿತ ನೀಡಲಾಗುವುದು ಎಂದು ತಿಳಿಸಿದರು.

Advertisement

ಪೂರ್ಣ ಪ್ರಮಾಣದಲ್ಲಿ ಸರ್ಕಾರ ರಚನೆಯಾಗದಿದ್ದರೂ ಬೆಂಗಳೂರಿನ ರಸ್ತೆ ಗುಂಡಿ ಸಮಸ್ಯೆ, ಮಳೆ ಅನಾಹುತ ತಡೆ ಸಂಬಂಧ ನಾನೇ ಹಲವು ಸಭೆ ನಡೆಸಿದ್ದು, ಮೂರು ದಿನದ ಹಿಂದೆ ಪಾಲಿಕೆ ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲಿಸಿದ್ದೇನೆ. ಈವರೆಗೆ 1,500 ರಸ್ತೆ ಗುಂಡಿ ಮುಚ್ಚಲಾಗಿದ್ದು, 3,800 ಗುಂಡಿ ಬಾಕಿ ಉಳಿದಿವೆ. ಕಾಟಾಚಾರಕ್ಕೆ ಎಂಬಂತೆ ಗುಂಡಿ ಮುಚ್ಚಲು ಸಾಧ್ಯವಿಲ್ಲ. ಗುಣಮಟ್ಟದ ಕಾಮಗಾರಿ ನಡೆಸಿ ಗುಂಡಿ ದುರಸ್ತಿಪಡಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮಗಳ ಅನುಷ್ಠಾನದ ಚರ್ಚೆ: “ನಾನು, ಉಪಮುಖ್ಯಮಂತ್ರಿಗಳು ಸೇರಿದಂತೆ 27 ಸಚಿವರಿದ್ದು, ಹಿರಿಯರು, ಹೊಸ ಶಾಸಕರು ಸಂಪುಟದಲ್ಲಿದ್ದಾರೆ. ಸಂಪುಟ ರಚನೆ ಬಳಿಕ ನಡೆದ ಮೊದಲ ಔಪಚಾರಿಕ ಸಂಪುಟ ಸಭೆಯಲ್ಲಿ ಎರಡೂ ಪಕ್ಷಗಳ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಚರ್ಚಿಸಲಾಗಿದೆ. ಜತೆಗೆ ಜನರ ವಿಶ್ವಾಸ ಗಳಿಸಲು ಅಗತ್ಯವಾದ ನಡಾವಳಿಗಳ ಬಗ್ಗೆಯೂ ಮುಕ್ತ ಚರ್ಚೆ ನಡೆದಿದೆ. ಒಟ್ಟಾರೆ ಜನರ ವಿಶ್ವಾಸಗಳಿಸಿ ಉತ್ತಮ ಆಡಳಿತ ನೀಡುವ ಪ್ರಾಮಾಣಿಕ ಪ್ರಯತ್ನ ನಡೆಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

ಉಪ ಮುಖ್ಯಮಂತ್ರಿ ಪರಮೇಶ್ವರ್‌ ಮಾತನಾಡಿ, “ಸಮ್ಮಿಶ್ರ ಸರ್ಕಾರ ರಚನೆಯಾಗಿರುವುದರಿಂದ ಯಾವುದೇ ತೀರ್ಮಾನ ಕೈಗೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಬೆಂಗಳೂರಿನ ರಸ್ತೆ ಗುಂಡಿ ಸಮಸ್ಯೆಯಿರಬಹುದು, ದಕ್ಷಿಣ ಕನ್ನಡದಲ್ಲಿ ಭಾರಿ ಮಳೆಯಿಂದಾದ ಅನಾಹುತವಿರಬಹುದು, ಅವುಗಳ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ನಾನು ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಆ ಮೂಲಕ ಆಡಳಿತ ಯಂತ್ರ ನಿಲ್ಲದಂತೆ ಕ್ರಮ ವಹಿಸಲಾಗಿದೆ’ ಎಂದು
ಹೇಳಿದರು.

ಸಚಿವರಾದ ಆರ್‌.ವಿ.ದೇಶಪಾಂಡೆ, ಡಿ.ಕೆ. ಶಿವಕುಮಾರ್‌, ಬಂಡೆಪ್ಪ ಕಾಶೆಂಪುರ, ಎನ್‌.ಮಹೇಶ್‌, ಆರ್‌. ಶಂಕರ್‌ ಇತರರು ಉಪಸ್ಥಿತರಿದ್ದರು.

ಜನಪರ ಯೋಜನೆಗಳ
ಜಾರಿಗೆ ಅಡ್ಡಿಯಿಲ್ಲ

ಹಿಂದಿನ ಸರ್ಕಾರದ ಉತ್ತಮ ಕಾರ್ಯಕ್ರಮಗಳು, ಜನರಿಗೆ ಅನುಕೂಲವಾಗುವಯೋಜನೆಗಳನ್ನು ಮುಂದುವರಿಸಲಾಗುವುದು.ಸಮನ್ವಯ ಸಮಿತಿಯಡಿ “ಸಾಮಾನ್ಯ ಕನಿಷ್ಠ ಕಾರ್ಯಕ್ರಮ’ ರೂಪಿಸಿ ಅನುಷ್ಠಾನಗೊಳಿಸಲಾಗುವುದು. ರಾಜ್ಯದ ಅಭಿವೃದ್ಧಿಯೇ ನಮ್ಮ ಗುರಿ ಎಂದು ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಇಂದು ಖಾತೆ ಹಂಚಿಕೆ ಸಂಪುಟ ರಚನೆಯಾಗಿದ್ದು, ಗುರುವಾರ ಖಾತೆ ಹಂಚಿಕೆಯಾಗಲಿದೆ. ಔಪಚಾರಿಕ ಸಂಪುಟ ಸಭೆಯಲ್ಲಿ ಜಿಲ್ಲೆಯ ಅಭಿವೃದ್ಧಿ ಹಾಗೂ ತಮಗೆ ಹಂಚಿಕೆಯಾಗುವ ಖಾತೆ ಮೂಲಕ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವ ಬಗ್ಗೆಯೂ ಚರ್ಚಿಸಲಾಗಿದೆ. ಅನುಭವಿ ಸಚಿವರೊಂದಿಗೆ ಹೊಸ ಸಚಿವರಿದ್ದು, ಸರ್ಕಾರ ರಚನೆ ಮಾತ್ರವಲ್ಲದೇ ಸಂಪುಟದಲ್ಲೂ ಸಮ್ಮಿಶ್ರವಾಗಿದೆ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದರು.

ಕಾಂಗ್ರೆಸ್‌ನಲ್ಲಿ ಹಲವರಿಗೆ ಅಸಮಾಧಾನವಾಗಿದ್ದು, ನಮ್ಮ ಹಂತದಲ್ಲಿ ಹಾಗೂ ಹೈಕಮಾಂಡ್‌ ಹಂತದಲ್ಲಿ ಸಮಾಧಾನ
ಹೇಳಲಾಗುವುದು. ಯಾವುದೇ ಗೊಂದಲವಿಲ್ಲ. ಕಾಂಗ್ರೆಸ್‌ವತಿಯಿಂದ 6 ಹಾಗೂ ಜೆಡಿಎಸ್‌ನಲ್ಲಿ 1 ಖಾತೆ ಖಾಲಿ ಇದೆ.
ಕಾಂಗ್ರೆಸ್‌ನ 80 ಶಾಸಕರೂ ಸಚಿವರಾಗಲು ಸಮರ್ಥರಾಗಿದ್ದು, 22 ಸಚಿವ ಸ್ಥಾನಗಳಷ್ಟೇ ಪಕ್ಷಕ್ಕಿವೆ. ಮುಂದೆ ಅವಕಾಶ ಸಿಗಲಿದ್ದು, ಯಾರೊಬ್ಬರೂ ಆತಂಕಪಡಬೇಕಾದ ಅಗತ್ಯವಿಲ್ಲ. ಜನತೆಗೆ ಉತ್ತಮ ಆಡಳಿತ ನೀಡುವ ಭರವಸೆ ನೀಡಿದ್ದು, ಅದರಂತೆ ಉತ್ತಮ ಆಡಳಿತ ಕೊಡುತ್ತೇವೆ ಎಂದು ಹೇಳಿದರು.

ಪ್ರತ್ಯೇಕ ಧರ್ಮ ಹೋರಾಟಗಾರರಿಗೆ ಶಾಕ್‌
ಬೆಂಗಳೂರು:
ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಮಾಡಿದ್ದ ಪ್ರಭಾವಿ ಲಿಂಗಾಯತ ನಾಯಕರಾದ ಎಂ.ಬಿ. ಪಾಟೀಲ್‌ ಹಾಗೂ ಬಸವರಾಜ ಹೊರಟ್ಟಿ ಅವರನ್ನು ಸಂಪುಟದಿಂದ ಹೊರಗಿಡುವ ಮೂಲಕ ಶಾಕ್‌ ನೀಡಲಾಗಿದೆ.
ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಿಂದ ಕಾಂಗ್ರೆಸ್‌ಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ ಎನ್ನುವುದು ಕಾಂಗ್ರೆಸ್‌ ನಾಯಕರವಾದ. ಪಕ್ಷದ ಅನುಮತಿ ಇಲ್ಲದಿದ್ದರೂ, ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಸೂಕ್ಷ್ಮವಿಷಯಕ್ಕೆ ಕೈ ಹಾಕಿ ಪಕ್ಷಕ್ಕೆ ಹಿನ್ನಡೆ ಮಾಡಿದ್ದಾರೆ ಎನ್ನುವ ಮಾತು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದೆ. ಪ್ರತ್ಯೇಕ ಲಿಂಗಾಯತ ಧರ್ಮದ ಮುಂಚೂಣಿಯಲ್ಲಿರುವ ಹೊರಟ್ಟಿ ಹಾಗೂ ಎಂ.ಬಿ.ಪಾಟೀಲ್‌ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿ ಧರ್ಮದ ಹೋರಾಟ ಮುಂದುವರೆಸಿದರೆ, ಗೊಂದಲಕ್ಕೆ ಕಾರಣವಾಗುತ್ತದೆ ಎಂಬ ಆಲೋಚನೆಯಿಂದ ಅವರನ್ನು ಹೊರಗಿಡಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.

ಮುಲಾಜಿಲ್ಲದೆ ಕ್ರಮ
ಉಡುಪಿಯಲ್ಲಿ ದನದ ವ್ಯಾಪಾರಿ ಹುಸೇನಬ್ಬ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಹಿತಿ ಪಡೆದುಕೊಳ್ಳಲಾಗಿದ್ದು, ಘಟನೆ ಸಂಬಂಧ ಇನ್‌ ಸ್ಪೆಕ್ಟರ್‌ ಒಬ್ಬರನ್ನು ಅಮಾನತುಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. 

ರಾಜ್ಯದ ಯಾವುದೇ ಮೂಲೆಯಲ್ಲಿ ಯಾವುದೇ ಘಟನೆ ಸಂಭವಿಸಿದರೂ ಆ ಮಾಹಿತಿ ಸರ್ಕಾರಕ್ಕೆ ಗೊತ್ತಾಗಲಿದೆ. ಅವುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುವುದು.

ಬಿಜೆಪಿಯವರು ತಮ್ಮ ರಾಜಕೀಯ ಬೆಳವಣಿಗೆಗಾಗಿ ಸಮಾಜದಲ್ಲಿ ಕಲುಷಿತ ವಾತಾವರಣ ಸೃಷ್ಟಿಸಲು ಮುಂದಾದರೆ ಆ ವಿಚಾರದಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ. ಮುಲಾಜಿಲ್ಲದೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಿಎಂ, ಡಿಸಿಎಂ, ಸಚಿವರ ಶೈಕ್ಷಣಿಕ ಅರ್ಹತೆ
ಎಚ್‌.ಡಿ. ಕುಮಾರಸ್ವಾಮಿ-ಬಿಎಸ್ಸಿ
ಡಾ. ಜಿ. ಪರಮೇಶ್ವರ-ಎಂಎಸ್ಸಿ, ಪಿಎಚ್‌ಡಿ
ಆರ್‌.ವಿ. ದೇಶಪಾಂಡೆ-ಎಲ್‌ಎಲ್‌ಬಿ
ಡಿ.ಕೆ. ಶಿವಕುಮಾರ್‌-ಎಂ.ಎ
ಎಚ್‌.ಡಿ. ರೇವಣ್ಣ-ಎಸ್‌ಎಸ್‌ಎಲ್‌ಸಿ
ಕೆ.ಜೆ. ಜಾರ್ಜ್‌-ಪಿಯುಸಿ
ಯು.ಟಿ. ಖಾದರ್‌-ಎಲ್‌ಎಲ್‌ಬಿ
ಕೃಷ್ಣಭೈರೇಗೌಡ-ಎಂ.ಎ
ಪ್ರಿಯಾಂಕ್‌ ಖರ್ಗೆ-ಬಿಎ
ರಮೇಶ್‌ ಜಾರಕಿಹೊಳಿ-ಬಿಎ
ಜಿ.ಟಿ. ದೇವೇಗೌಡ-8ನೇ ತರಗತಿ
ಡಿ.ಸಿ ತಮ್ಮಣ್ಣ-ಬಿಇ
ಸಿ.ಎಸ್‌. ಪುಟ್ಟರಾಜು-ಪಿಯುಸಿ
ಬಂಡೆಪ್ಪ ಕಾಶೆಂಪುರ-ಬಿಎಸ್ಸಿ
ಶಿವಾನಂದ ಪಾಟೀಲ್‌-ಡಿಪ್ಲೋಮಾ
ಎಂ.ಸಿ. ಮನಗೋಳಿ- ಎಸ್‌ಎಸ್‌ಎಲ್‌ಸಿ
ರಾಜಶೇಖರ್‌ ಪಾಟೀಲ್‌ ಹುಮನಾಬಾದ-ಪಿಯುಸಿ
ವೆಂಕಟರಾವ್‌ ನಾಡಗೌಡ-ಬಿಎ
ಆರ್‌. ಶಂಕರ್‌-ಎಸ್‌ಎಸ್‌ಎಲ್‌ಸಿ
ಎಸ್‌.ಆರ್‌. ಶ್ರೀನಿವಾಸ-ಬಿಎ
ವೆಂಕಟರಮಣಪ್ಪ-ಎಸ್‌ಎಸ್‌ಎಲ್‌ಸಿ
ಎನ್‌.ಎಚ್‌. ಶಿವಶಂಕರರೆಡ್ಡಿ- ಎಂಎಸ್ಸಿ
ಜಮೀರ್‌ ಅಹ್ಮದ್‌ ಖಾನ್‌-ಎಸ್‌ಎಸ್‌ಎಲ್‌ಸಿ
ಎನ್‌. ಮಹೇಶ್‌-ಎಂ.ಎ
ಸಾ.ರಾ. ಮಹೇಶ್‌-ಬಿಎಸ್ಸಿ
ಡಾ. ಜಯಮಾಲಾ- ಎಂ.ಎ, ಪಿಎಚ್‌ಡಿ

ಜಿಲ್ಲಾವಾರು ಪ್ರಾತಿನಿಧ್ಯ
*ಬೆಂಗಳೂರು: ಕೆ.ಜೆ.ಜಾರ್ಜ್‌, ಜಮೀರ್‌ ಅಹಮದ್‌, ಕೃಷ್ಣ ಭೈರೇಗೌಡ, ಜಯಮಾಲಾ
*ಚಿಕ್ಕಬಳ್ಳಾಪುರ- ಶಿವಶಂಕರೆಡ್ಡಿ
*ತುಮಕೂರು: ಗುಬ್ಬಿ ಶ್ರೀನಿವಾಸ್‌, ಪಾವಗಡ ವೆಂಕಟರಮಣಪ್ಪ
*ಮೈಸೂರು: ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್‌
*ಚಾಮರಾಜನಗರ: ಎನ್‌.ಮಹೇಶ್‌, ಪುಟ್ಟರಂಗಶೆಟ್ಟಿ
*ಮಂಡ್ಯ: ಸಿ.ಎಸ್‌.ಪುಟ್ಟರಾಜು, ಡಿ.ಸಿ.ತಮ್ಮಣ್ಣ
*ಹಾಸನ: ಎಚ್‌.ಡಿ.ರೇವಣ್ಣ
*ವಿಜಯಪುರ: ಶಿವಾನಂದ ಪಾಟೀಲ್‌, ಎಂ.ಸಿ.ಮನಗೋಳಿ
*ರಾಮನಗರ: ಡಿ.ಕೆ.ಶಿವಕುಮಾರ್‌
*ಹಾವೇರಿ : ಆರ್‌.ಶಂಕರ್‌
*ರಾಯಚೂರು: ವೆಂಕಟರಾವ್‌ ನಾಡಗೌಡ
*ಬೀದರ್‌: ರಾಜಶೇಖರ ಪಾಟೀಲ್‌ ಹುಮ್ನಾಬಾದ್‌, ಬಂಡೆಪ್ಪ ಕಾಶಂಪೂರ್‌
*ಬೆಳಗಾವಿ: ರಮೇಶ್‌ ಜಾರಕಿಹೊಳಿ
*ದಕ್ಷಿಣ ಕನ್ನಡ: ಯು.ಟಿ.ಖಾದರ್‌,
*ಉತ್ತರ ಕನ್ನಡ: ಆರ್‌.ವಿ.ದೇಶಪಾಂಡೆ
*ಕಲಬುರಗಿ: ಪ್ರಿಯಾಂಕಾ ಖರ್ಗೆ

ಪ್ರಾತಿನಿಧ್ಯ ಸಿಗದ ಜಿಲ್ಲೆಗಳು
*ಕೋಲಾರ
*ಬೆಂಗಳೂರು ಗ್ರಾಮಾಂತರ
*ಶಿವಮೊಗ್ಗ
*ಕೊಡಗು
*ಚಿಕ್ಕಮಗಳೂರು
*ಉಡುಪಿ
*ಯಾದಗಿರಿ
*ಬಾಗಲಕೋಟೆ
*ಚಿತ್ರದುರ್ಗ
*ಹುಬ್ಬಳ್ಳಿ-ಧಾರವಾಡ
*ಬಳ್ಳಾರಿ
*ಗದಗ
*ಕೊಪ್ಪಳ

ಜೆಡಿಎಸ್‌ ಪ್ರಾತಿನಿಧ್ಯ ನೀಡಿರುವ ಜಿಲ್ಲೆಗಳು
ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ರಾಯಚೂರು, ಬೀದರ್‌, ವಿಜಯಪುರ.

ಕಾಂಗ್ರೆಸ್‌ ಪ್ರಾತಿನಿಧ್ಯ ನೀಡಿರುವ ಜಿಲ್ಲೆಗಳು
ಬೆಂಗಳೂರು, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಬೆಳಗಾವಿ, ಯಾದಗಿರಿ, ವಿಜಯಪುರ, ಚಾಮರಾಜನಗರ, ಹಾವೇರಿ, ದಕ್ಷಿಣ ಕನ್ನಡ, ಬೀದರ್‌.

Advertisement

Udayavani is now on Telegram. Click here to join our channel and stay updated with the latest news.

Next