Advertisement

ಮೂರುವರ್ಷ ಯಡಿಯೂರಪ್ಪ ಅವರೇ ಸಿಎಂ: ಸವದಿ, ರವಿ, ಜೊಲ್ಲೆ ಅವರಿಂದ ಗೊಂದಲಕ್ಕೆ ತೆರೆ ಯತ್ನ

02:54 AM Jul 30, 2020 | Hari Prasad |

ಬೆಂಗಳೂರು: ಮುಂದಿನ ಮೂರು ವರ್ಷ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿರಲಿದ್ದಾರೆ ಎಂದು ದಿಲ್ಲಿಗೆ ಭೇಟಿ ನೀಡಿ ಕುತೂಹಲಕ್ಕೆ ಕಾರಣರಾಗಿದ್ದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

Advertisement

ದಿಲ್ಲಿ ಭೇಟಿ ಪೂರ್ವಯೋಜಿತವಾಗಿದ್ದು, ರಾಜಕೀಯ ಲೆಕ್ಕಾಚಾರ ಇಲ್ಲವೇ ಗೊಂದಲ ಮೂಡಿಸುವ ಅಗತ್ಯವಿಲ್ಲ ಎಂದು ಅವರು ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ನಾನು ಯಾವುದಕ್ಕೂ ಆಸೆ ಪಟ್ಟವನಲ್ಲ. ಯಡಿಯೂರಪ್ಪ ಇರುವವರೆಗೆ ಯಾರೂ ಪ್ರಶ್ನೆ ಮಾಡುವಂತಿಲ್ಲ.

ಮುಂದೆ ಅವರ ನೇತೃತ್ವದಲ್ಲೇ ಚುನಾವಣೆ ಗೆಲ್ಲಲು ಸಂಕಲ್ಪ ಮಾಡುತ್ತೇವೆ. ಉಪಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ದಿಲ್ಲಿಗೆ ತೆರಳಿದ್ದು ಎಂಬುದೂ ಸುಳ್ಳು ಎಂದರು.

ಬುಧವಾರ ಬೆಂಗಳೂರಿಗೆ ಆಗಮಿಸಿದ ಲಕ್ಷ್ಮಣ ಸವದಿ, ಇಲಾಖೆ ಕೆಲಸಕ್ಕೆ ದಿಲ್ಲಿಗೆ ತೆರಳಿದ್ದೆ. ಕಾಕತಾಳೀಯ ಎಂಬಂತೆ ರಾಜ್ಯಪಾಲರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಬಳಿಕ ದಿಲ್ಲಿಗೆ ತೆರಳಿದ್ದರಿಂದ ಹಲವು ವದಂತಿ ಹರಡಿದಾಡಿವೆ ಎಂದರು.

Advertisement

ಎಲ್ಲವೂ ಊಹಾಪೋಹ: ರವಿ
ಸವದಿಯವರ ದಿಲ್ಲಿ ಪ್ರವಾಸಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಈ ಹಂತದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ಎಂಬ ವಿಚಾರ ಸತ್ಯಕ್ಕೆ ದೂರವಾದುದು ಎಂದು ಸಚಿವ ಸಿ.ಟಿ. ರವಿ ಹೇಳಿದ್ದಾರೆ. ಸಿಎಂ ಬದಲಾವಣೆ ವಿಚಾರ ಯಾಕೆ ಬಂತು ಎಂಬುದೇ ಗೊತ್ತಿಲ್ಲ ಎಂದರು.

ಯಾವುದೇ ಬೆಳವಣಿಗೆ ನಡೆದಿಲ್ಲ: ಜೊಲ್ಲೆ
ನಾನು ಇಲಾಖೆ ಕಾರ್ಯದ ಹಿನ್ನೆಲೆಯಲ್ಲಿ ದಿಲ್ಲಿಗೆ ಹೋಗಿದ್ದೆ. ಅದನ್ನು ಸಚಿವ ಸ್ಥಾನ ಉಳಿಸಿಕೊಳ್ಳಲು ದಿಲ್ಲಿಗೆ ತೆರಳಿದ್ದಾರೆ ಎಂಬಂತೆ ಬಿಂಬಿಸಲಾಗಿದೆ. ಆ ರೀತಿಯ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

ಜನ ಹೊಡೆದಾರು: ಪ್ರಮೋದ್‌ ಮುತಾಲಿಕ್‌

ಈಗ ಸಿಎಂ ಬದಲಾಯಿಸಿದರೆ ಜನ ಬೆನ್ನು ಹತ್ತಿ ಹೊಡೆಯುತ್ತಾರೆ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಹೇಳಿದ್ದಾರೆ.

ಅಧ್ಯಕ್ಷರನ್ನು ಭೇಟಿಯಾಗಿದ್ದೆ
ದಿಲ್ಲಿಯಲ್ಲೂ ಬುಧವಾರ ಬೆಳಗ್ಗೆ ಪ್ರತಿಕ್ರಿಯಿಸಿ ಲಕ್ಷ್ಮಣ ಸವದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾಗಿದ್ದೆ. ಕೇಂದ್ರ ಸರಕಾರ ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಸಿಹಿ ನೀಡಿ ಶುಭ ಕೋರಿದ್ದೇನೆ. ಅವರೊಂದಿಗೆ ರಾಜಕೀಯ ಚರ್ಚಿಸಿಲ್ಲ. ಅಮಿತ್‌ ಶಾ ಭೇಟಿಗೆ ಅವಕಾಶ ಸಿಕ್ಕಿಲ್ಲ ಎಂದು ತಿಳಿಸಿದರು.

ಎಲೆಕ್ಟ್ರಿಕ್‌ ಬಸ್‌
ಎಲೆಕ್ಟ್ರಿಕ್‌ ಬಸ್‌ ಕುರಿತಂತೆ ಕೇಂದ್ರ ಸಚಿವ ಪ್ರಕಾಶ್‌ ಜಾಬ್ಡೇಕರ್‌ ಜತೆ ಚರ್ಚಿಸಿದ್ದೇನೆ. ಬೆಂಗಳೂರಿಗೆ 300 ಹಾಗೂ ಹುಬ್ಬಳ್ಳಿ- ಧಾರವಾಡಕ್ಕೆ 50 ಎಲೆಕ್ಟ್ರಿಕ್‌ ಬಸ್‌ ಕುರಿತಂತೆ ಮಾತುಕತೆ ನಡೆಸಲಾಗಿದೆ ಎಂದರು ಸವದಿ.

Advertisement

Udayavani is now on Telegram. Click here to join our channel and stay updated with the latest news.

Next