Advertisement

ಈಗ ಅಂತರ ನಗರಗಳಿಗೂ ಎಲೆಕ್ಟ್ರಿಕ್‌ ಪವರ್‌ ಬಸ್‌ ಸೇವೆ

08:44 PM Mar 20, 2023 | Team Udayavani |

ಬೆಂಗಳೂರು: ರಾಜ್ಯದ ಅಂತರ ನಗರಗಳಲ್ಲಿ ಹವಾನಿಯಂತ್ರಿತ ಎಲೆಕ್ಟ್ರಿಕ್‌ ಪವರ್‌ ಪ್ಲಸ್‌ ಬಸ್‌ಗಳ ಸೇವೆಗೆ ಸೋಮವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ವು ಚಾಲನೆ ನೀಡಿತು.

Advertisement

ವಿಧಾನಸೌಧ ಮುಂಭಾಗದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಈ ಅತ್ಯಾಧುನಿಕ 25 ಎಲೆಕ್ಟ್ರಿಕ್‌ ಬಸ್‌ಗಳಿಗೆ ಹಸಿರು ನಿಶಾನೆ ತೋರಿಸಿದರು. ಇದರೊಂದಿಗೆ ಬರೀ ನಗರ ವ್ಯಾಪ್ತಿಗೆ ಸೀಮಿತವಾಗಿದ್ದ ವಿದ್ಯುತ್‌ಚಾಲಿತ ಬಸ್‌ಗಳ ಸೇವೆ ಇನ್ಮುಂದೆ ಅಂತರ ನಗರಗಳಿಗೆ ವಿಸ್ತರಣೆಯಾಗಿದೆ. ಮುಂಬರುವ ದಿನಗಳಲ್ಲಿ ರಾಜ್ಯದ ಎಲ್ಲ ನಗರಗಳ ನಡುವೆಯೂ ಇದೇ ಮಾದರಿಯ ಬಸ್‌ಗಳನ್ನು ಪರಿಚಯಿಸಲು ಉದ್ದೇಶಿಸಿದ್ದು, ಇದಕ್ಕಾಗಿ 350 ಇ-ಬಸ್‌ಗಳು ವಿವಿಧ ಹಂತಗಳಲ್ಲಿ ನಿಗಮಕ್ಕೆ ಸೇರ್ಪಡೆಗೊಳ್ಳಲಿವೆ.

ಕಳೆದ ಡಿಸೆಂಬರ್‌ನಲ್ಲಿ ಬೆಂಗಳೂರು- ಮೈಸೂರು ನಡುವೆ ಈ ವಿದ್ಯುತ್‌ಚಾಲಿತ ಬಸ್‌ ಅನ್ನು ಪ್ರಾಯೋಗಿಕವಾಗಿ ಪರಿಚಯಿಸಲಾಗಿತ್ತು. ಉತ್ತಮ ಸ್ಪಂದನೆ ಜತೆಗೆ ನಿಗಮಕ್ಕೂ ಉಳಿತಾಯದಾಯಕವಾದ ಕಾರಣ ಒಟ್ಟಾರೆ 50 ಹೈಟೆಕ್‌ ವಿದ್ಯುತ್‌ಚಾಲಿತ ಬಸ್‌ಗಳನ್ನು ರಸ್ತೆಗಿಳಿಸಲು ನಿಗಮ ನಿರ್ಧರಿಸಿದೆ. ಈ ಪೈಕಿ ಮೊದಲ ಹಂತದಲ್ಲಿ ಸೋಮವಾರ 25 ಬಸ್‌ಗಳನ್ನು ಸೇವೆಗೆ ಅಣಿಗೊಳಿಸಲಾಯಿತು. ಉಳಿದ 25 ಬಸ್‌ಗಳು ಶೀಘ್ರ ಸೇರ್ಪಡೆಗೊಳ್ಳಲಿವೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ನಿತ್ಯ ಈ ವಿದ್ಯುತ್‌ಚಾಲಿತ ಬಸ್‌ಗಳು ಬೆಂಗಳೂರಿನಿಂದ ಮೈಸೂರು, ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರಿಗೆ ಕಾರ್ಯಾಚರಣೆ ಮಾಡಲಿವೆ. ಈ ಬಸ್‌ಗಳ ಚಾರ್ಜಿಂಗ್‌ ಕೇಂದ್ರಗಳನ್ನು ಈಗಾಗಲೇ ಬೆಂಗಳೂರು, ಮೈಸೂರಿನಲ್ಲಿ ಸ್ಥಾಪಿಸಲಾಗಿದ್ದು, ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲೂ ಸ್ಥಾಪಿಸುವ ಕಾರ್ಯ ನಡೆದಿದೆ. ಇದರ ಜತೆಗೆ ರಾಜ್ಯದ ಉಳಿದೆಲ್ಲ ನಗರಗಳ ನಡುವೆಯೂ ಎಲೆಕ್ಟ್ರಿಕ್‌ ಬಸ್‌ಗಳ ಸೇವೆ ಆರಂಭಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ 350 ಬಸ್‌ಗಳು ಹಂತ-ಹಂತವಾಗಿ ರಸ್ತೆಗಿಳಿಯಲಿವೆ ಎಂದು ಅಧಿಕಾರಿಗಳು ಹೇಳಿದರು.

ಸಾರಿಗೆ ಇಲಾಖೆ ಕಾರ್ಯದರ್ಶಿ ಎನ್‌.ವಿ. ಪ್ರಸಾದ್‌, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನುºಕುಮಾರ್‌, ಸಾರಿಗೆ ಇಲಾಖೆ ಆಯುಕ್ತ ಸಿದ್ದರಾಮಪ್ಪ ಮತ್ತಿತರರು ಉಪಸ್ಥಿತರಿದ್ದರು.

Advertisement

ಅಂತರ ನಗರ ಎಲೆಕ್ಟ್ರಿಕ್‌ ಬಸ್‌ ಎಲ್ಲೆಲ್ಲಿ?
ಬೆಂಗಳೂರಿನಿಂದ ಮೈಸೂರು, ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು.

ಬಸ್‌ಗಳ ವೈಶಿಷ್ಟ್ಯ
* 12 ಮೀಟರ್‌ ಉದ್ದ, 300 ಕಿ.ಮೀ. ಕ್ರಮಿಸುವ ಸಾಮರ್ಥ್ಯ
* 2-3 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್‌
* ಮನರಂಜನಾ ಸೌಲಭ್ಯ
* ಚಾಲಕರು, ನಿರ್ವಾಹಕರು ಸೇರಿ 45 ಪುಶ್‌ಬ್ಯಾಕ್‌ ಆಸನಗಳು, ಬಸ್‌ಗಳಲ್ಲಿ ಸಿಸಿಟಿವಿ, ತುರ್ತು ನಿರ್ಗಮನ ದ್ವಾರಗಳು, ಅಗ್ನಿಶಾಮಕ ಸಾಧನ, ಪ್ರಥಮ ಚಿಕಿತ್ಸಾ ಕಿಟ್‌, ಗ್ಲಾಸ್‌ ಹ್ಯಾಮ್ಲರ್‌ ಮತ್ತಿತರ ಸುರಕ್ಷತಾ ಉಪಕರಣಗಳು,

ಪ್ರವರ್ತನ ಕಾರ್ಯಕ್ಕೆ ಪಿಒಎಸ್‌
ಸಾರಿಗೆ ಇಲಾಖೆಯು ಕಾರ್ಯಾಚರಣೆ ವೇಳೆ ಸಮಯ ಉಳಿತಾಯದ ಜತೆಗೆ ಚುರುಕುಗೊಳಿಸಲು ಪಿಒಎಸ್‌ (ಪಾಯಿಂಟ್‌ ಆಫ್ ಸೇಲ್‌ ಮಷಿನ್‌) ಯಂತ್ರಗಳ ಆಧಾರಿತ ಇ-ಚಲನ್‌ ಪದ್ಧತಿಗೆ ಸೋಮವಾರ ಚಾಲನೆ ನೀಡಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ವ್ಯವಸ್ಥೆಗೆ ಚಾಲನೆ ನೀಡಿದರು. ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೋಟಾರು ವಾಹನ ನಿರೀಕ್ಷಕರಿಗೆ ಪ್ರವರ್ತನ ಕಾರ್ಯ (ಎನ್‌ಫೋರ್ಸ್‌ಮೆಂಟ್‌) ಚುರುಕು ಮತ್ತು ತ್ವರಿತವಾಗಿ ನಡೆಯಲಿ ಎಂಬ ಕಾರಣಕ್ಕೆ ಈ ಪಿಒಎಸ್‌ ಯಂತ್ರಗಳನ್ನು ಪರಿಚಯಿಸಲಾಗಿದ್ದು, ಮೊದಲ ಹಂತದಲ್ಲಿ ಸುಮಾರು 200 ಯಂತ್ರಗಳನ್ನು ಪರಿಚಯಿಸಲಾಗಿದೆ.

ಇದರಿಂದ ವಾಹನಗಳ ದಾಖಲೆಗಳ ಮಾಹಿತಿಯನ್ನು ಅಂತರ್ಜಾಲದಿಂದ ಪಡೆದು, ನಿಯಮ ಉಲ್ಲಂ ಸಿ ಕಾರ್ಯಾಚರಣೆ ಮಾಡುತ್ತಿರುವ ವಾಹನಗಳ ವಿರುದ್ಧ ಸ್ಥಳದಲ್ಲೇ ಕೇವಲ ಒಂದು ನಿಮಿಷದಲ್ಲಿ ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ ಅಥವಾ ನಗದು ಮೂಲಕ ದಂಡ ಪಾವತಿಸಿಕೊಳ್ಳಬಹುದು. ಇದಲ್ಲದೆ, ಇಲಾಖೆಯ ಪ್ರವರ್ತನ ಕಾರ್ಯಕ್ಕಾಗಿ 6.35 ಕೋಟಿ ವೆಚ್ಚದಲ್ಲಿ 68 ಹೊಸ ಬೊಲೆರೊ ವಾಹನಗಳನ್ನು ಸಾರಿಗೆ ಇಲಾಖೆ ಖರೀದಿಸಿದ್ದು, ಅವುಗಳನ್ನು ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ನೀಡುವ ಮೂಲಕ ಲೋಕಾರ್ಪಣೆ ಮಾಡಲಾಯಿತು.

ಪಿಒಎಸ್‌ನಿಂದ ಏನು ಅನುಕೂಲ?
* ಇಂಟರ್‌ನೆಟ್‌ ಮೂಲಕ ವಾಹನ ದಾಖಲೆಗಳ ಮಾಹಿತಿ ಸಂಗ್ರಹ
* ತ್ವರಿತವಾಗಿ ಹೆಚ್ಚು ವಾಹನಗಳನ್ನು ಪರೀಕ್ಷಿಸಿ ದಂಡ ವಸೂಲು
* ಸಂಚಾರ ಶಿಸ್ತು ಜಾಗೃತಿ
* ನಕಲಿ ರಸೀದಿಗಳ ನಿಯಂತ್ರಣ
* ದಾಖಲಾದ ಪ್ರಕರಣಗಳನ್ನು ರಾಜ್ಯದ ಯಾವುದೇ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಸುಲಭವಾಗಿ ವಿಲೇವಾರಿ

Advertisement

Udayavani is now on Telegram. Click here to join our channel and stay updated with the latest news.

Next