Advertisement

ಆತಂಕ ಪಡಬೇಡಿ: ಮಣಿಪಾಲ್‌ ಆಸ್ಪತ್ರೆಯಿಂದ ಸಿಎಂ BSY ಮನವಿ

01:56 AM Aug 04, 2020 | Hari Prasad |

ಬೆಂಗಳೂರು: ನಾನು ಆರೋಗ್ಯವಾಗಿದ್ದೇನೆ, ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಕೋವಿಡ್ 19 ಸೋಂಕಿನಿಂದಾಗಿ ಬೆಂಗಳೂರಿನ ಎಚ್‌ಎಎಲ್‌ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್‌ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ  ಹೇಳಿದ್ದಾರೆ.

Advertisement

ಆಸ್ಪತ್ರೆಯಿಂದಲೇ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸರಕಾರಿ ಕೆಲಸಕಾರ್ಯಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಸೂಚನೆ ನೀಡಿರುವುದಾಗಿ ಯಡಿಯೂರಪ್ಪ ಹೇಳಿದ್ದಾರೆ.

ಜತೆಗೆ ಆಡಳಿತ ಯಂತ್ರವನ್ನು ಸುಸೂತ್ರವಾಗಿ ನಿರ್ವಹಿಸುವಂತೆ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್‌ ಅವರಿಗೆ ಸಿಎಂ ಸೂಚಿಸಿದ್ದಾರೆ. ಕೋವಿಡ್ 19 ಸೋಂಕು ನಿಯಂತ್ರಣ, ಸರಕಾರದ ದೈನಂದಿನ ಆಡಳಿತ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮುಖ್ಯ ಕಾರ್ಯದರ್ಶಿಯವರು ಇಲಾಖಾ ಮುಖ್ಯಸ್ಥರು ಮತ್ತು ಜಿಲ್ಲಾಧಿಕಾರಿಗಳಿಗೆ ಕಾಲ ಕಾಲಕ್ಕೆ ನಿರ್ದೇಶನ ನೀಡಲಿದ್ದಾರೆ. ಮುಖ್ಯ ಕಾರ್ಯದರ್ಶಿಯವರು, ಪ್ರತೀ ದಿನ ಸಿಎಂ ಯಡಿಯೂರಪ್ಪ ಅವರೊಂದಿಗೆ ದೂರವಾಣಿ ಮೂಲಕ ಸಲಹೆ ಪಡೆದು ತೀರ್ಮಾನಗಳನ್ನು ತೆಗೆದುಕೊಳ್ಳಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಅಧಿಕಾರಿಗಳ ಮಟ್ಟದ ಸಭೆಗಳು ಮತ್ತು ಸಿಎಂ ಅವರನ್ನು ಕಾಣಬೇಕಿರುವ ನಿಯೋಗಗಳನ್ನು ಭೇಟಿ ಮಾಡಿ ಮನವಿ ಸ್ವೀಕರಿಸುವ ಜವಾಬ್ದಾರಿಯನ್ನೂ ಮುಖ್ಯ ಕಾರ್ಯದರ್ಶಿಗೆ ವಹಿಸಲಾಗಿದೆ.  ಸಿಎಂ ಕಚೇರಿಯ ದೈನಿಕ ಕೆಲಸ ಕಾರ್ಯಗಳ ಜವಾಬ್ದಾರಿ ಯನ್ನು ಸಿಎಂ ಅವರ ಅಪರ ಮುಖ್ಯ ಕಾರ್ಯದರ್ಶಿ ರವಿಕುಮಾರ್‌ ಅವರಿಗೆ ನೀಡಲಾಗಿದೆ.

ಶೀಘ್ರವೇ ಕೆಲಸ ಕಾರ್ಯಗಳಲ್ಲಿ  ಭಾಗಿ
ರವಿವಾರ ರಾತ್ರಿ 8.30ರಿಂದ 9ರ ಸುಮಾರಿಗೆ ನನಗೆ ಕೋವಿಡ್ 19 ಸೋಂಕು ಪಾಸಿಟಿವ್‌ ಬಂದಿದೆ ಎಂದು ಗೊತ್ತಾದ ತತ್‌ಕ್ಷಣ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ. ರವಿವಾರ ರಾತ್ರಿ ಮತ್ತು ಸೋಮವಾರ ವೈದ್ಯರು ಎಲ್ಲ ಪರೀಕ್ಷೆ ನಡೆಸಿದ್ದಾರೆ. “ಯಾವುದೇ ತೊಂದರೆ ಇಲ್ಲ. ಶೀಘ್ರ ಗುಣಮುಖ ರಾಗಿ ಮನೆಗೆ ಮರಳಲಿದ್ದೀರಿ’ ಎಂದು ವೈದ್ಯರು ತಿಳಿಸಿದ್ದು, ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಆಸ್ಪತ್ರೆಗೆ ದಾಖಲಾದ ಬಳಿಕ ಸೋಮವಾರ ಮೊದಲ ಬಾರಿಗೆ ವೀಡಿಯೋ ಸಂದೇಶ ನೀಡಿ ಸಿಎಂ ತಿಳಿಸಿದ್ದಾರೆ.

Advertisement

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌, ಮಾಜಿ ಪ್ರಧಾನಿ ಎಚ್‌. ಡಿ. ದೇವೇಗೌಡರು, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್‌.ಡಿ. ಕುಮಾರಸ್ವಾಮಿ, ಹಲವು ಮಠಾಧಿಪತಿಗಳು ಆಶೀರ್ವದಿಸಿ ಬೇಗ ಚೇತರಿಸಿಕೊಳ್ಳಿ ಎಂದು ಹಾರೈಸಿದ್ದಾರೆ ಎಂದು ತಿಳಿಸಿದ್ದಾರೆ.

ರವಿವಾರ ರಾತ್ರಿಯಿಂದಲೂ ಅಧಿಕಾರಿಗಳ ಸಂಪರ್ಕದಲ್ಲಿದ್ದು, ಸರಕಾರಿ ಕೆಲಸಗಳಿಗೆ ಅಡ್ಡಿ ಆಗ ಬಾರದು ಎಂದು ಸೂಚಿಸಿದ್ದೇನೆ. ಸೋಮವಾರ ಬೆಳಗ್ಗೆಯೂ ಎಲ್ಲ ಹಿರಿಯ ಅಧಿಕಾರಿಗೊಂದಿಗೆ ಮಾತನಾಡಿದ್ದೇನೆ. ಆದಷ್ಟು ಬೇಗ ಗುಣಮುಖನಾಗಿ ಕೆಲಸ ಕಾರ್ಯಗಳಲ್ಲಿ ತೊಡಗುತ್ತೇನೆ. ನಾಡಿನ ಆರೂವರೆ ಕೋಟಿ ಜನರ ಆರೋಗ್ಯ ಬಹಳ ಮುಖ್ಯ. ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಧರಿಸಬೇಕು ಎಂದು ಮನವಿ ಮಾಡಿದ್ದಾರೆ.

50 ಮಂದಿಯ ಮಾದರಿ ಸಂಗ್ರಹ
ಸಿಎಂ ಕುಟುಂಬ ಸದಸ್ಯರು, ಕಾವೇರಿ ಮತ್ತು ಕೃಷ್ಣಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬಂದಿ ಸಹಿತ ಸುಮಾರು 50 ಮಂದಿಯ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಲಾಗಿದೆ. ಎಲ್ಲ ಸಿಬಂದಿಯ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಎರಡೂ ಕಟ್ಟಡಗಳನ್ನು ಸ್ಯಾನಿಟೈಸ್‌ ಮಾಡಲಾಗಿದೆ.

ಬಿಎಸ್‌ವೈ ಪುತ್ರಿಗೂ ಕೋವಿಡ್ 19 ಸೋಂಕು ದೃಢ
ಯಡಿಯೂರಪ್ಪ ಅವರ ಹಿರಿಯ ಪುತ್ರಿ ಬಿ.ವೈ. ಪದ್ಮಾವತಿ ಅವರಿಗೂ ಲಕ್ಷಣರಹಿತವಾಗಿ  ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅವರನ್ನೂ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಜತೆಗೆ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ನಾನಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಆರು ಮಂದಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಅವರಿಗೆ ಸೂಕ್ತ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಮೂಲಗಳು ತಿಳಿಸಿವೆ.

ಗೃಹ ಕ್ವಾರೆಂಟೈನ್‌ನಲ್ಲಿ ವಿಜಯೇಂದ್ರ
ಸಿಎಂ ಯಡಿಯೂರಪ್ಪ ಮತ್ತು ಪುತ್ರಿ ಪದ್ಮಾವತಿ ಅವರಿಗೆ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಪುತ್ರ ಬಿ.ವೈ. ವಿಜಯೇಂದ್ರ ಗೃಹ ಕ್ವಾರೆಂಟೈನ್‌ಗೆ ಒಳಗಾಗಿದ್ದಾರೆ.

ಗುಣಮುಖರಾಗಲು ಹಾರೈಕೆ
ಸಿಎಂ ಶೀಘ್ರ ಗುಣಮುಖರಾಗಲಿ ಎಂದು ಬಿಜೆಪಿ ಮಾತ್ರವಲ್ಲದೆ ಅನ್ಯ ಪಕ್ಷಗಳ ಹಿರಿಯ ನಾಯಕರು, ಮಠಾಧಿಪತಿಗಳು ಹಾರೈಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ವಿಪಕ್ಷ  ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತಿತರರು ಸಿಎಂ ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

ಆಸ್ಪತ್ರೆಯಲ್ಲಿರುವ ಸಿಎಂ ಪುಸ್ತಕ ಓದಿನಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಹತ್ತು ಪುಸ್ತಕಗಳನ್ನು ತನ್ನೊಂದಿಗೆ ಒಯ್ದಿದ್ದು, ಇದರಲ್ಲಿ  ವಿವೇಕಾನಂದರ ಕುರಿತ ಕೃತಿ ಸೇರಿದೆ ಎಂದು ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next