ಬೆಂಗಳೂರು: ಲಾಕ್‌ಡೌನ್‌ನಿಂದ ದುಬಾೖಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರನ್ನು ವಾಪಸ್ ಕರೆತರಲು ಕೇಂದ್ರ ಸರಕಾರದೊಂದಿಗೆ ಚರ್ಚಿಸಿ ಆದಷ್ಟು ಬೇಗ ಬೆಂಗಳೂರಿಗೂ ವಿಮಾನಯಾನ ವ್ಯವಸ್ಥೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ದುಬಾೖಯಲ್ಲಿ ನೆಲೆಸಿರುವ ಕನ್ನಡಿಗರೊಂದಿಗೆ ವೀಡಿಯೋ ಸಂವಾದ ನಡೆಸಿದರು.
ಯುಎಇಯಲ್ಲಿ ತೊಂದರೆಗೆ ಸಿಲುಕಿರುವ ಅನಿವಾಸಿ ಕನ್ನಡಿಗರನ್ನು ರಾಜ್ಯಕ್ಕೆ ವಾಪಸ್ ಕರೆತರಲು ವಿಮಾನದ ವ್ಯವಸ್ಥೆ ಮಾಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ವಿಶೇಷ ವಿಮಾನಯಾನದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಯುಎಇಯಿಂದ ಹಿಂದಿರುಗಿ ಬರುವ ಎಲ್ಲರೂ 14 ದಿನಗಳ ಕಾಲ ಕ್ವಾರಂಟೈನ್‌ಗೆ ಒಳಪಡಲು ಸರಕಾರದ ಜತೆಗೆ ಸಂಪೂರ್ಣ ಸಹಕಾರ ನೀಡಬೇಕು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಇರುವ ಹೊಟೇಲ್‌ಗಳಲ್ಲಿ ಕ್ವಾರಂಟೈನ್‌ಗೆ ಈಗಾಗಲೇ ವ್ಯವಸ್ಥೆ ಕಲ್ಪಿಸಲಾಗಿದೆ.
ಮಂಗಳೂರಿನಲ್ಲಿಯೂ ಆರೋಗ್ಯ ತಪಾಸಣೆ ಮತ್ತು ಕ್ವಾರಂಟೈನ್ ಮಾಡಲು ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನೂ ಹೆಚ್ಚಿನ ಸೌಲಭ್ಯ ಇರುವ ಹೊಟೇಲ್‌ಗಳಲ್ಲಿ ಕ್ವಾರಂಟೈನ್ ಆಗುವ ಇಚ್ಛೆ ಇದ್ದವರು ತಾವೇ ಹಣ ಪಾವತಿಸಿ ಇರಬಹುದು ಎಂದು ಹೇಳಿದರು. ತೊಂದರೆಗೆ ಸಿಲುಕಿರುವ ಕನ್ನಡಿಗರು ಆತಂಕಕ್ಕೆ ಒಳಗಾಗದೆ, ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಬೇಕು. ಸರಕಾರ ನಿಮ್ಮೊಂದಿಗಿದೆ ಎಂದು ಭರವಸೆ ನೀಡಿದರು.
ಅಲ್ಲಿಯೇ ಉಳಿದುಕೊಂಡಿರುವ ಕನ್ನಡಿಗರೂ ಸಹ ಹತಾಶರಾಗದೆ ದೃಢ ಮನಸ್ಸಿನಿಂದ ಪರಿಸ್ಥಿತಿಯನ್ನು ಎದುರಿಸಿ. ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು, ಆರೋಗ್ಯ ಕಾಪಾಡಿಕೊಳ್ಳುವಂತೆ ಕಿವಿಮಾತು ಹೇಳಿದರು.
ಅಲ್ಲಿನ ಕನ್ನಡಿಗರಿಗೆ ಏನಾದರೂ ತೊಂದರೆ ಎದುರಾದಲ್ಲಿ ಕೇಂದ್ರ ಸರಕಾರದ ಗಮನ ಸೆಳೆದು ಅದನ್ನು ನಿವಾರಿಸಲು ಎಲ್ಲ ಪ್ರಯತ್ನಗಳನ್ನೂ ಮಾಡಲಾಗುವುದು. ಅಲ್ಲದೆ ರಾಜ್ಯ ಸರಕಾರದ ಹಂತದಲ್ಲಿ ಕೈಗೊಳ್ಳಬಹುದಾದ ಕ್ರಮಗಳನ್ನೂ ಕೈಗೊಳ್ಳಲಿದೆ ಎಂದು ಹೇಳಿದರು.
ದುಬಾೖ ಕನ್ನಡಿಗರ ಬೇಡಿಕೆಗಳು
– ದುಬಾೖಯಿಂದ ಬರುವವರಿಗೆ ಕೂಡಲೇ ಬೆಂಗಳೂರಿಗೆ ವಿಮಾನ ವ್ಯವಸ್ಥೆ.
– ಮಂಗಳೂರಿಗೆ ಹೆಚ್ಚಿನ ವಿಮಾನ ವ್ಯವಸ್ಥೆ.
– ಯುಎಇಯಲ್ಲಿ ಸಾಕಷ್ಟು ಮಂದಿ ನಿರುದ್ಯೋಗಿಗಳಾಗಿದ್ದು ರಾಜ್ಯಕ್ಕೆ ಬರಲು ಸಾಧ್ಯವಾಗದವರಿಗೆ ಆರ್ಥಿಕ ನೆರವು.
– ಕೆಳವರ್ಗದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಉಚಿತ ಕ್ವಾರಂಟೈನ್ ವ್ಯವಸ್ಥೆ.