Advertisement

New year celebration: ಬೆಂಗಳೂರಿನಲ್ಲಿ ಈ ಬಾರಿ ನಿರ್ಬಂಧ ಹಾಕುವ ಆಲೋಚನೆ ಇಲ್ಲ; ಆಯುಕ್ತ

12:02 PM Dec 09, 2023 | Team Udayavani |

ಬೆಂಗಳೂರು: ಸಿಲಿಕಾನ್‌ ಸಿಟಿ ಜನರ ಹೊಸ ವರ್ಷದ ಸಂಭ್ರಮಕ್ಕೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಈ ವರ್ಷ ಯಾವುದೇ ನಿರ್ಬಂಧಗಳನ್ನು ಹಾಕುವುದಿಲ್ಲ ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದರು.

Advertisement

ಶುಕ್ರವಾರ ಸುದ್ದಿ ಗಾರರ ಜತೆ ಮಾತನಾಡಿ, ಕೆಲವು ವರ್ಷಗಳ ಹಿಂದೆ ಕೋವಿಡ್‌ ಸೋಂಕಿನ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಹೊಸ ವರ್ಷ ಆಚರಣೆಗೆ ಬಿಬಿಎಂಪಿ ಹಲವು ಬಿಗಿ ನಿಯಮಗಳನ್ನು ರೂಪಿಸಿತ್ತು. ಆ ವೇಳೆ ಅದು ಅನಿವಾರ್ಯ ಕೂಡ ಆಗಿತ್ತು. ಆದರೆ, ಈ ವರ್ಷ ಅಂತಹ ವಾತಾವರಣವಿಲ್ಲ. ಈ ಹಿನ್ನೆಲೆಯಲ್ಲಿ ಜನರ ಹೊಸ ವರ್ಷದ ಸಂಭ್ರಮ, ಸಂತಸಕ್ಕೆ ನಿರ್ಬಂಧ ಹಾಕುವ ಯಾವುದೇ ಆಲೋಚನೆ ಬಿಬಿಎಂಪಿ ಮುಂದಿಲ್ಲ ಎಂದು ತಿಳಿಸಿದರು. ಕೋವಿಡ್‌ ಮಾರ್ಗಸೂಚಿ ಸಡಿಲಿಕೆಯಾಗಿದ್ದ ಹಿನ್ನೆಲೆಯಲ್ಲಿ ಕಳೆದ ವರ್ಷ ಕೂಡ ಯಾವುದೇ ನಿರ್ಬಂಧ ಹಾಕಿರಲಿಲ್ಲ. ಪ್ರತಿ ವರ್ಷದಂತೆ ಜನರು ಸಂಭ್ರಮದಿಂದ ಆಚರಿಸಲಿದ್ದಾರೆ ಎಂದು ಹೇಳಿದರು.

ನಗರ ಪೊಲೀಸ್‌ ಆಯುಕ್ತರು ಕ್ರಮ ಕೈಗೊಳ್ಳಲಿದ್ದಾರೆ: ವಿವಿಧ ರಸ್ತೆಗಳಲ್ಲಿ ಹೊಸ ವರ್ಷ ಆಚರಣೆ ಪರವಾನಿಗೆ ನೀಡುವುದು ಪಾಲಿಕೆ ವ್ಯಾಪ್ತಿಗೆ ಬರುವುದಿಲ್ಲ. ಬೆಂಗಳೂರು ನಗರ ಪೊಲೀಸ್‌ ಆಯುಕ್ತರೇ ಈ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ. ಪಾಲಿಕೆ ನಗರ ಸ್ವತ್ಛತೆ ಸೇರಿ ಮತ್ತಿತರ ಕಾರ್ಯಗಳನ್ನು ಮಾಡಲಿದೆ. ಆದರೆ, ಹೊಸ ವರ್ಷದ ಆಚರಣೆ ವೇಳೆ ಯಾವ ಪ್ರದೇಶದಲ್ಲಿ ಏನೇನು ನಿರ್ಬಂಧಗಳು ಬೇಕು ಎಂಬುವುದು ಸೇರಿ ಹೊಸ ವರ್ಷ ಸಂಭ್ರಮಾಚರಣೆಯ ಇಡೀ ಪೊಲೀಸ್‌ ಬಿಗಿ ಭದ್ರತೆ ಬಗ್ಗೆ ಬೆಂಗಳೂರು ನಗರ ಪೊಲೀಸ್‌ ಆಯುಕ್ತರು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ರೂಫ್ ನಲ್ಲಿ ಕಿಚನ್‌ಗೆ ಅವಕಾಶವಿಲ್ಲ: ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಬಾರ್‌ ಆ್ಯಂಡ್‌ ಪಬ್‌ಗಳು ತಲೆ ಎತ್ತಿವೆ. ಈ ಬಗ್ಗೆ ಪಾಲಿಕೆ ಏನು ಕ್ರಮ ಕೈಗೊಂಡಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಿಂದೆ ಕೋರಮಂಗಲದ ಪಬ್‌ ಒಂದರಲ್ಲಿ ಸಂಭವಿಸಿದ್ದ ಅಗ್ನಿ ಅನಾಹುತದ ನಂತರ ಬಿಬಿಎಂಎಪಿ ಹಲವು ಕಡೆಗಳಲ್ಲಿ ದಾಳಿ ನಡೆಸಿತ್ತು. ಕೆಲವು ಕಡೆಗಳಲ್ಲಿ ಅಬಕಾರಿ ಇಲಾಖೆ ಬಾರ್‌ ಮತ್ತು ಪಬ್‌ಗಳನ್ನು ತೆರೆಯಲು ಅವಕಾಶ ನೀಡಿದೆ. ಅಲ್ಲಿ ಯಾವುದೇ ಕ್ರಮ ಕೈಗೊಳ್ಳಲು ಪಾಲಿಕೆಗೆ ಅಧಿಕಾರವಿಲ್ಲ ಎಂದು ಹೇಳಿದರು.

ಈ ಹಿಂದೆ ರೂಫ್ಗಳಲ್ಲಿ ಬಾರ್‌ ಆ್ಯಂಡ್‌ ಪಬ್‌ಗಳನ್ನು ತೆರೆಯಲು ಅವಕಾಶ ನೀಡಿರಲಿಲ್ಲ. ಆದರೆ, ಇದಕ್ಕೆ ಅಬಕಾರಿ ಇಲಾಖೆ ಆಸನಗಳ ನಿರ್ಬಂಧ ಹೇರಿ ಅನುಮತಿ ನೀಡಿದೆ. ಅಬಕಾರಿ ಇಲಾಖೆ ಪರವಾನಿಗೆ ನೀಡಿರುವ ಪಬ್‌ ಮತ್ತು ಬಾರ್‌ಗಳನ್ನು ನಿಲ್ಲಿಸಲು ನಮಗೆ ಅಧಿಕಾರದಲ್ಲಿ ಇರಲಿಲ್ಲ. ಆದರೆ, ಬಿಬಿಎಂಪಿ ರೂಫ್ಗಳಲ್ಲಿ ಕಿಚನ್‌ಗೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.

Advertisement

ಒಂದು ವೇಳೆ ಕಾನೂನು ಬಾಹಿರ ವಾಗಿ ರೂಫ್ ಗಳಲ್ಲಿ ಕಿಚನ್‌ ತೆರೆದರೆ ಅಂತಹ ಪಬ್‌, ಬಾರ್‌ ಮಾಲೀಕರ ವಿರುದ್ಧ ಪಾಲಿಕೆ ಕ್ರಮ ಕೈಗೊಳ್ಳಲಿದೆಂದು ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.