Advertisement
ಸ್ವಾತಂತ್ರ್ಯ ಪೂರ್ವದಿಂದಲೂ ಹೋಟೆಲ್‌ಅನ್ನೇ ನಂಬಿಕೊಂಡಿರುವ ಕುಟುಂಬವೊಂದು ಇಲ್ಲಿ ಈಗಲೂ ಕಡಿಮೆ ರೇಟಲ್ಲಿ ಶುಚಿ, ರುಚಿಯಾದ ತಿಂಡಿಯನ್ನು ಗ್ರಾಹಕರಿಗೆ ಉಣಬಡಿಸುತ್ತಿದೆ. ಮೊದಲು ತುಮಕೂರಿನ ಮಂಡಿಪೇಟೆಯಲ್ಲಿ ಚನ್ನಬಸವೇಶ್ವರ ಹೋಟೆಲ್‌ಅನ್ನು ಹುಚ್ಚೀರಪ್ಪ ಎಂಬುವರು ಪ್ರಾರಂಭಿಸಿದ್ದರು. ನಂತರದ ದಿನಗಳಲ್ಲಿ ಅವರನ್ನು ಹೋಟೆಲ್ ಹುಚ್ಚೀರಪ್ಪ ಎಂದೇ ಕರೆಯಲಾಗುತ್ತಿತ್ತು. ಈ ಹೋಟೆಲ್ ಅನ್ನು ಅವರ ಮಗ ಟಿ.ಎಚ್.ಮಹದೇವಯ್ಯ ಮುಂದುವರಿಸಿದ್ದರು. ಈಗ ಟಿ.ಎಂ.ಪ್ರಸಾದ್ ಅವರು, ಹಳೇ ಹೋಟೆಲ್‌ನ ಜೊತೆಗೆ ಟೌನ್‌ಹಾಲ್ ಸರ್ಕಲ್‌ನಲ್ಲಿ ಚನ್ನಬಸವೇಶ್ವರ ರೆಸ್ಟೋರೆಂಟ್, ಪ್ರಸಾದ್ ಹೋಟೆಲ್ ಅನ್ನು ತೆರೆದಿದ್ದಾರೆ. ಕಡಿಮೆ ದರದಲ್ಲಿ ಗ್ರಾಹಕರಿಗೆ ಬಗೆಬಗೆಯ ತಿಂಡಿ ನೀಡುತ್ತಿದ್ದಾರೆ. ಪತ್ನಿ ಎಸ್.ಗಾಯಿತ್ರಿ ಪ್ರಸಾದ್ ಹಾಗೂ ಪುತ್ರರಾದ ಟಿ.ಪಿ.ಜ್ಞಾನೇಶ್, ಟಿ.ಪಿ.ದ್ಯಾನೇಶ್ ಕೂಡ ತಂದೆಗೆ ಸಾಥ್ ನೀಡುತ್ತಾರೆ.
ಹೊರಪೇಟೆ ಪ್ರದೇಶದಲ್ಲಿ ಮೂರು ವರ್ಷಗಳ ಹಿಂದೇ ಟಿ.ಎಂ.ಪ್ರಸಾದ್ ಅವರು, ತಮ್ಮದೇ ಹೆಸರಲ್ಲಿ ಹೋಟೆಲ್ ಪ್ರಾರಂಭಿಸಿದ್ದಾರೆ. ಈ ಹೋಟೆಲ್‌ನಲ್ಲಿ ಸಿಗುವ ತಿಂಡಿಗಳು ಡಿಫರೆಂಟ್. ಇಲ್ಲಿ 20 ರೂ.ಗೆ ಅಕ್ಕಿರೊಟ್ಟಿ ಜೊತೆಗೆ ಒಂದು ಕಪ್ ಅವರೇಕಾಳು ಉಸ್ಲಿ ಸಿಗುತ್ತದೆ. ಅದು ಕೇವಲ ಅವರೇ ಸಿಜನ್‌ನಲ್ಲಿ ಮಾತ್ರವಲ್ಲ, ವರ್ಷಪೂರ್ತಿ. ಈ ಅಕ್ಕಿರೊಟ್ಟಿ + ಉಸ್ಲಿ ತಿನ್ನಲು ನಟ ಸಿಹಿಕಹಿ ಚಂದ್ರು ಇಲ್ಲಿಗೆ ಬರುತ್ತಾರಂತೆ. ಇಲ್ಲಿ ಸಿಗುವ ಬುಲೆಟ್ ಇಡ್ಲಿ, ಮೈಸೂರಿನ ಕುಕ್ಕೆ ಇಡ್ಲಿ, ಶೇಂಗಾ ಚಟ್ನಿ ಹಾಗೂ ಬಾಂಬೆ ಸಾಗು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಬದನೇಕಾಯಿ ಗೊಜ್ಜು, ಮುದ್ದೆ ಊಟ:
ಈ ಹೋಟೆಲ್ ಗ್ರಾಹಕರ ಪ್ರಮುಖ ಆಯ್ಕೆ ಬದನೇಕಾಯಿಗೊಜ್ಜು ಒಳಗೊಂಡ ಮುದ್ದೆ ಊಟ. 30 ರೂ. ಕೊಟ್ಟರೆ ಸಾಕು; ಒಂದು ಮುದ್ದೆ, ಬದನೇಕಾಯಿಗೊಜ್ಜು, ಸಾಂಬಾರು, ತಿಳಿಸಾರು, ಒಂದು ಕಡ್ಲೆಬೇಳೆ ವಡೆ, ಹಪ್ಪಳ, ಉಪ್ಪಿನ ಕಾಯಿ ಜೊತೆಗೆ ಹೊಟ್ಟೆ ತುಂಬುವಷ್ಟು ಮಜ್ಜಿಗೆಯನ್ನು ಕೊಡಲಾಗುತ್ತದೆ. ಈ ಮುದ್ದೆ, ಬದನೇಕಾಯಿ ಗೊಜ್ಜು ತಿನ್ನಲು ಜಿಲ್ಲಾಧಿಕಾರಿಗಳು, ನ್ಯಾಯಾಧೀಶರು, ಶಾಲಾ, ಕಾಲೇಜು ಶಿಕ್ಷಕರು, ವಕೀಲರು ಹಾಗೂ ಸರ್ಕಾರಿ ಕಚೇರಿಯ ಮೇಲಧಿಕಾರಿಗಳಿಂದ ಹಿಡಿದು ಜವಾನರೂ ಇಲ್ಲಿಗೆ ಬರುತ್ತಾರೆ.
Related Articles
ಸಾಮಾನ್ಯವಾಗಿ ಕೆಲ ಹೋಟೆಲ್‌ಗಳಲ್ಲಿ ತಿಂಡಿ ಬೆಳಗ್ಗೆ ಮಾತ್ರ ಸಿಗತ್ತೆ, ಆದರೆ, ಇಲ್ಲಿ ಸಂಜೆವರೆಗೂ 15ಕ್ಕೂ ಹೆಚ್ಚು ತಿಂಡಿಗಳು ಸಿಗುತ್ತವೆ. ಸಂಜೆ ನಂತರ ಮಿರ್ಚಿ ಮಂಡಕ್ಕಿ ಸಿಗುತ್ತದೆ. ಇಲ್ಲಿ 20 ರೂ.ಗೆ ಸಿಗುವ ಖಾಲಿ, ಬೆಣ್ಣೆ, ಸೆಟ್ ದೋಸೆ ಅಷ್ಟೇ ಅಲ್ಲದೆ, ತ್ರಿಮೂರ್ತಿ, ಚಾರ್‌ಮಿನಾರ್, ಪಂಚರಂಗಿ, ಜೋಡಿ ರೈಸ್‌ಬಾತ್ ತಿಂಡಿಗಳು ಬೆಂಗಳೂರಿನಿಂದಲೂ ಜನರು ಆಕರ್ಷಿಸುತ್ತಿವೆಯಂತೆ. ತಿಪಟೂರು, ಮಧುಗಿರಿ, ಶಿರಾ ಮುಂತಾದ ಕಡೆಯಿಂದ ಕಚೇರಿ ಕೆಲಸಕ್ಕೆಂದು ಬರುವ ಜನರು ತಿಂಡಿ ತಿನ್ನಲು ಇಲ್ಲಿಗೆ ಬರುತ್ತಾರಂತೆ.
Advertisement
ಹೋಟೆಲ್‌ನ ಸಮಯ:ಪ್ರಸಾದ್ ಹೋಟೆಲ್ ವಾರದ 7 ದಿನವೂ ತೆರೆದಿರುತ್ತದೆ. ಬೆಳಗ್ಗೆ 6.30 ರಿಂದ ರಾತ್ರಿ 9ರವರೆಗೂ ಕಾರ್ಯನಿರ್ವಹಿಸುತ್ತದೆ. ಭಾನುವಾರ ಮಾತ್ರ ಮಧ್ಯಾಹ್ನ 12ಗಂಟೆವರೆಗೆ ಬಾಗಿಲು ಓಪನ್ ಇರುತ್ತದೆ. ಸೆಲ್ಫ್ ಸರ್ವಿಸ್ ಹಾಗೂ ಸರ್ವಿಸ್ ಎರಡೂ ಇದೆ. ಬೆಳಗ್ಗೆ, ಮಧ್ಯಾಹ್ನ, ಸಂಜೆ ವೇಳೆಯಲ್ಲಿ ಹೆಚ್ಚು ಗ್ರಾಹಕರು ಇರುತ್ತಾರೆ. ತುಮಕೂರಿನಲ್ಲೇ ಹುಟ್ಟಿ ಬೆಳೆದಿದ್ದರೂ ಉತ್ತರ ಕರ್ನಾಟಕ, ಕರಾವಳಿ ಹೀಗೆ ರಾಜ್ಯದ ಎಲ್ಲಾ ಭಾಗದ ತಿಂಡಿಗಳನ್ನು ಗ್ರಾಹಕರಿಗೆ ಒದಗಿಸುತ್ತಿರುವ ಟಿ.ಎಂ.ಪ್ರಸಾದ್ ಬಗ್ಗೆ ಗ್ರಾಹಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಡಿಮೆ ದರದಲ್ಲಿ, ಎಷ್ಟು ಸಾಧ್ಯವೋ ಅಷ್ಟು ಶುಚಿ ರುಚಿಯಾಗಿ ತಿಂಡಿ ಒದಗಿಸುವುದು ನಮ್ಮ ಉದ್ದೇಶ ಎನ್ನುತ್ತಾರೆ ಪ್ರಸಾದ್. ಜಿ.ಜಗದೀಶ್/ಭೋಗೇಶ್ ಎಂ.ಆರ್.