ಬೆಂಗಳೂರು: ಹಿರಿಯ ಸಾಹಿತಿ, ಸಂಶೋಧಕ ಚಿದಾನಂದ ಮೂರ್ತಿಅವರು ಶನಿವಾರ ಇಹಲೋಕ ತ್ಯಜಿಸಿದ್ದು, ಇಂದು ಸುಮನಹಳ್ಳಿಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ನಡೆಯಲಿದೆ. ಅಲ್ಲಿಯವರೆಗೂ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಯಲಿದೆ.
ಸುಮನಹಳ್ಳಿಯ ಹಿಂದೂ ರುದ್ರಭೂಮಿಯಲ್ಲಿ ವೀರಶೈವ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಯಲಿದೆ. ಆದರೆ ಚಿಮೂ ಅವರ ಆಶಯದಂತೆ ಪಾರ್ಥೀವ ಶರೀರಕ್ಕೆ ಯಾವುದೇ ಪೂಜೆ ಮಾಡಲಾಗುವುದಿಲ್ಲ ಎಂದು ವರದಿಯಾಗಿದೆ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ನಿನ್ನೆ ಭೇಟಿ ನೀಡಿ ಚಿದಾನಂದ ಮೂರ್ತಿಯವರ ಅಂತಿಮ ದರ್ಶನ ಪಡೆದಿದ್ದರು.
1931ರಲ್ಲಿ ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಜನಿಸಿದ್ದ ಚಿದಾನಂದ ಮೂರ್ತಿಯವರು ಕನ್ನಡ ಸಾರಸ್ವತ ಲೋಕದಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದರು. ಸಾಹಿತಿಗಳಾಗಿ, ಸಂಶೋಧಕರಾಗಿ ಕನ್ನಡದ ಏಳ್ಗೆಗಾಗಿ ಶ್ರಮಿಸಿದ್ದರು.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶನಿವಾರ ಮುಂಜಾನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.