Advertisement

ಸಾಂಸ್ಕೃತಿಕ ಸಂಘಟಕ ಚಿದಾನಂದ ಕಾಮತ್‌ ಕಾಸರಗೋಡು ನಿಧನ

11:45 AM Jul 25, 2017 | Karthik A |

ಪುತ್ತೂರು: ನಗರದ ಪರ್ಲಡ್ಕ ನಿವಾಸಿ, ಗಡಿನಾಡ ಕನ್ನಡಿಗ, ಸಾಂಸ್ಕೃತಿಕ ಸಂಘಟಕ ಚಿದಾನಂದ ಕಾಮತ್‌ ಕಾಸರಗೋಡು (60) ಅವರು ಜು. 23ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ಜನಿಸಿ, ಅನಂತರ ಕಾಸರಗೋಡಿನಲ್ಲಿ ವಾಸವಾಗಿದ್ದ ಅವರು ತನ್ನ ವೃತ್ತಿಯ ಜತೆಗೆ ಸಾಂಸ್ಕೃತಿಕ ಸಂಘಟಕರಾಗಿ ಚಿರಪರಿಚಿತರಾಗಿದ್ದರು. ಪುತ್ತೂರು ಕಾರ್ಮಿಕ ಇಲಾಖೆಯಲ್ಲಿ ಗುಮಾಸ್ತರಾಗಿದ್ದ ಅವರು ಕಳೆದ ವರ್ಷ ಸೇವಾ ನಿವೃತ್ತಿ ಹೊಂದಿದ್ದರು. ಅನಂತರ ಪೂರ್ಣ ಪ್ರಮಾಣದಲ್ಲಿ ಸಾಂಸ್ಕೃತಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

Advertisement

1976ರಲ್ಲಿ ಕೆಮ್ತೂರು ದೊಡ್ಡಣ್ಣ ಶೆಟ್ಟರ ತುಳುನಾಡು ಸಾಹಿತ್ಯ ಕಲಾಮಂಡಳಿಗೆ ಸೇರಿ ತನ್ನ ಕಲಾ ಸೇವೆ ಆರಂಭಿಸಿದ ಇವರು, 2003 ಹಾಗೂ 2007ರಲ್ಲಿ ಬೊಳುವಾರು ಸಾಂಸ್ಕೃತಿಕ ಕಲಾ ಕೇಂದ್ರ ಮತ್ತು ಬಾರಿಸು ಕನ್ನಡ ಡಿಂಡಿಮ ಸ್ಥಾಪಿಸಿ ದೇಶದ ನಾನಾ ಕಡೆ 350ಕ್ಕೂ ಅಧಿಕ ಕಾರ್ಯಕ್ರಮ ನೀಡಿದ್ದರು. ಕುಂದಾಪುರದಲ್ಲಿ ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ ಬಸ್‌ ಪ್ರಯಾಣಿಕರ ಸಂಘ ಕಟ್ಟಿದ್ದರು. ಬಸ್ಸಿನಲ್ಲಿಯೇ ಹಾಡು, ಮಿಮಿಕ್ರಿ, ಹಾಸ್ಯ, ತಮಾಷೆಗಳಂತಹ ಕಾರ್ಯಕ್ರಮ ಆಯೋಜಿಸಿದ್ದರು.

ಜಿಲ್ಲಾ ಕನ್ನಡ ರಾಜೋತ್ಸವ ಪ್ರಶಸ್ತಿ, ಸುವರ್ಣ ಕರ್ನಾಟಕ ಕನ್ನಡಿಗ ಪ್ರಶಸ್ತಿಗಳು ಸಂದಿವೆ. ‘ಪ್ರೀತಿ’ ಧಾರಾವಾಹಿ, ‘ಗುಗ್ಗು ನನ್ನ ಮಕ್ಳು’, ‘ಮಂಗಳೂರು ಹುಡ್ಗಿ ಹುಬ್ಬಳ್ಳಿ ಹುಡ್ಗ’, ‘ಕನಸು ಕಣ್ಣು ತೆರೆದಾಗ’, ‘ಗುಡ್ಡೆದ ಭೂತ’ ಹೀಗೆ ಹತ್ತಾರು ಬಗೆಯ ಸಿನೆಮಾ, ಕಿರುಚಿತ್ರ, ಧಾರವಾಹಿಗಳಲ್ಲಿ ಅಭಿನಯಿಸಿದ್ದರು. ಆಗಸ್ಟ್‌ನಲ್ಲಿ ಬಿಡುಗಡೆಗೊಳ್ಳಲಿರುವ ಕೊಂಕಣಿ ಭಾಷಾ ಚಿತ್ರ ‘ಅಂತು”ದಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next