ನವದೆಹಲಿ: ಐ.ಎನ್.ಎಕ್ಸ್. ಮೀಡಿಯಾ ಅವ್ಯವಹಾರ ಪ್ರಕರಣದಲ್ಲಿ ಸಿಬಿಐ ಮತ್ತು ಇಡಿ ಅಶಿಕಾರಿಗಳಿಂದ ಬಂಧನದ ಭೀತಿ ಎದುರಿಸುತ್ತಿರುವ ಮಾಜೀ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ಸದ್ಯಕ್ಕೆ ಎಲ್ಲಿದ್ದಾರೆ ಎಂಬ ವಿಚಾರ ಬಹಿರಂಗವಾಗಿಲ್ಲ.
ಈ ನಡುವೆ ಮಂಗಳವಾರದಂದು ತನ್ನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ದೆಹಲಿ ಉಚ್ಛ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಚಿದಂಬರಂ ಅವರು ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ ಮತ್ತು ಈ ಅರ್ಜಿ ಇಂದು ಬೆಳಿಗ್ಗೆ 10.30ಕ್ಕೆ ವಿಚಾರಣೆಗೆ ಬರಲಿದೆ.
ಆದರೆ ಸಿಬಿಐ ಮತ್ತು ಇಡಿ ಅಧಿಕಾರಿಗಳ ತಂಡ ಮಂಗಳವಾರ ರಾತ್ರಿಯೇ ಚಿದಂಬರಂ ಅವರನ್ನು ವಶಕ್ಕೆ ಪಡೆದುಕೊಳ್ಳಲು ನವದೆಹಲಿಯಲ್ಲಿರುವ ಅವರ ನಿವಾಸಕ್ಕೆ ತೆರಳಿತ್ತು. ಆದರೆ ಮಾಜೀ ಕೆಂದ್ರ ಸಚಿವರು ತಮ್ಮ ಮನೆಯಲ್ಲಿ ಇಲ್ಲದೇ ಇದ್ದ ಕಾರಣ ಅಧಿಕಾರಿಗಳು ಬರೀ ಕೈಯಲ್ಲಿ ವಾಪಸಾಗಬೇಕಾಯ್ತು. ಒಟ್ಟಾರೆಯಾಗಿ ಇಲ್ಲಿಯವರೆಗೆ ಮೂರು ಅಧಿಕಾರಿಗಳ ತಂಡ ಚಿದಂಬರಂ ಅವರ ಮನೆಗೆ ಭೇಟಿ ನೀಡಿವೆ ಮತ್ತು ಅವರಿಗಾಗಿ ಶೋಧಕಾರ್ಯವನ್ನೂ ಪ್ರಾರಂಭಿಸಿದೆ.
ಸಿಬಿಐ ಅಧಿಕಾರಿಗಳ ತಂಡ ಚಿದಂಬರಂ ಅವರ ಮನೆ ಮುಂದೆ ಲುಕ್ ಔಟ್ ನೊಟೀಸು ಲಗತ್ತಿಸಿ ಬಂದ ಬಳಿಕ ಚಿದಂಬರಂ ಅವರ ವಕೀಲ ಅರ್ಶ್ ದೀಪ್ ಸಿಂಗ್ ಖುರಾನ ಅವರು ಸಿಬಿಐ ಅಧಿಕಾರಿಗೆ ಪತ್ರವೊಂದನ್ನು ಬರೆದಿದ್ದು ಇಂದು ಬೆಳಿಗ್ಗೆ 10.30ರವರೆಗೆ ಕಾಯುವಂತೆ ಅವರು ಈ ಪತ್ರದಲ್ಲಿ ಸಿಬಿಐ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
‘ಎರಡು ಗಂಟೆಗಳ ಒಳಗಾಗಿ ನನ್ನ ಕಕ್ಷಿದಾರರು ನಿಮ್ಮ ಮುಂದೆ ವಿಚಾರಣೆಗೆ ಹಾಜರಾಗಬೇಕು ಎಂದು ನೀವು ನೀಡಿರುವ ಸೂಚನಾ ಪತ್ರದಲ್ಲಿ ಯಾವ ಕಾನೂನಿನ ಅಡಿಯಲ್ಲಿ ಈ ಪ್ರಕಟನೆಯನ್ನು ಮಾಡಲಾಗಿದೆ ಎಂಬುದನ್ನು ತಿಳಿಸುವಲ್ಲಿ ವಿಫಲವಾಗಿದೆ ಎಂದು ನಾನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಇದಕ್ಕೂ ಮಿಗಿಲಾಗಿ, ನನ್ನ ಕಕ್ಷಿದಾರರು ಈ ನೆಲದ ಕಾನೂನಿನಂತೆ ಅವರಿಗೆ ದತ್ತವಾಗಿರುವ ಹಕ್ಕನ್ನು ಬಳಸಿಕೊಂಡು ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಿರುವ ಆದೇಶದ ವಿರುದ್ಧ ಸುಪ್ರೀ ಕೋರ್ಟ್ ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ ಮತ್ತು ಅದು ಬುಧವಾರ ಬೆಳಿಗ್ಗೆ 10.30ಕ್ಕೆ ವಿಚಾರಣೆಗೆ ಬರಲಿದೆ. ಇವರ ಮೇಲ್ಮನವಿಯ ತುರ್ತು ವಿಚಾರಣೆಗೂ ಉಚ್ಛನ್ಯಾಯಾಲಯ ಸಮ್ಮತಿಸಿರುವುದರಿಂದ ಬುಧವಾರ ಬೆಳಿಗ್ಗೆ 10.30ರವರೆಗೆ ನನ್ನ ಕಕ್ಷಿದಾರರ ವಿರುದ್ಧ ಯಾವುದೇ ರೀತಿಯ ಬಲವಂತದ ಕ್ರಮಗಳನ್ನು ಕೈಗೊಳ್ಳಬಾರದೆಂದು ತಮ್ಮನ್ನು ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇನೆ’ ಎಂದು ತಮ್ಮ ಪತ್ರದಲ್ಲಿ ಸಿಬಿಐಗೆ ಮನವಿ ಮಾಡಿಕೊಂಡಿದ್ದಾರೆ.
ಇದೀಗ ಉನ್ನತ ವಕೀಲರ ತಂಡವೇ ಚಿದಂಬರಂ ಅವರ ರಕ್ಷಣೆಗಾಗಿ ಟೊಂಕ ಕಟ್ಟಿ ನಿಂತಿವೆ. ಕಾಂಗ್ರೆಸ್ ನಾಯಕರಾಗಿರುವ ಕಪಿಲ್ ಸಿಬಲ್, ಅಭಿಷೇಕ್ ಮನು ಸಿಂಘ್ವಿ ತಮ್ಮ ರಾಜಕೀಯ ಸಹವರ್ತಿಯ ಪರವಾಗಿ ಸುಪ್ರೀಂಕೋರ್ಟ್ ನಲ್ಲಿ ವಾದಿಸಲು ಸಜ್ಜಾಗಿದ್ದಾರೆ.