ಸೈಕಲ್ ಶೋರೂಮಿನಲ್ಲಿ ಸೈಕಲ್‌ಗಳು ಮಾತ್ರವೇ ಸಿಗುತ್ತವೆ. ಅದು ಬಿಟ್ಟರೆ ಸೈಕಲ್ ಬಿಡಿಭಾಗಗಳು ದೊರೆಯಬಹುದೇನೋ. ಹಾಗೆಯೇ ರೆಸ್ಟೋರೆಂಟುಗಳಲ್ಲಿ ಆಹಾರ ಪದಾರ್ಥಗಳನ್ನು ಹೊರತುಪಡಿಸಿದರೆ ಮತ್ತೇನೂ ದೊರಕದು. ಹೌದೇ? ಈ ಪ್ರಶ್ನೆಯನ್ನು ಈಗ ಕೇಳಿಕೊಳ್ಳಬೇಕಾಗಿ ಬಂದಿದೆ. ಅದಕ್ಕೆ ಕಾರಣ ಚೀಕ್ಲೋ ಕೆಫೆ! ಇಲ್ಲಿಗೆ ಯಾರು ಬೇಕಾದರೂ ಭೇಟಿ ನೀಡಬಹುದಾದರೂ ಸೈಕಲ್‌ಪ್ರಿಯರಿಗೆಂದೇ ತೆರೆದಿರುವ ಆಹಾರತಾಣವಿದು. ಪುಟ್ಟದಾಗಿ ಚೀಕ್ಲೊ ಕೆಫೆಯ ಪರಿಚಯ ಮಾಡಿಕೊಡಬೇಕೆಂದರೆ, ಇದು ಅಂತಾರಾಷ್ಟ್ರೀಯ ಗುಣಮಟ್ಟದ ಖಾದ್ಯಗಳು ಒಂದೆಡೆ ಸಿಗುವ ತಾಣ.
ಇಂದಿರಾನಗರ ಎಂದ ಕೂಡಲೇ ಬೆಂಗಳೂರಿನ ಆಹಾರಪ್ರಿಯರಿಗೆ ಹಲವಾರು ರೆಸ್ಟೊರೆಂಟ್‌ಗಳು, ಕೆಫೆಗಳು ನೆನಪಾಗುತ್ತವೆ. ಇಲ್ಲಿರುವ ಈಟರಿಗಳ ಸಾಲಿಗೆ ಮತ್ತೂಂದು ಸೇರ್ಪಡೆ ಚೀಕ್ಲೋ ಕೆಫೆ. ಈ ಕೆಫೆ ಹಲವಾರು ವಿಶೇಷಣಗಳನ್ನು ಹೊಂದಿದೆ. ವಿಶೇಷವೆಂದರೆ, ಸೈಕಲ್ ಪ್ರಿಯರಿಗೋಸ್ಕರವೇ ರೂಪಿಸಿರುವ ಕೆಫೆ ಇದು. ಸೈಕಲಿಸ್ಟ್ ಆಶಿಶ್ ಟಂಡಾನಿ ಚೀಕ್ಲೊದ ರೂವಾರಿ.
ಸೈಕಲ್ ಪ್ರಿಯರು ಸೈಕಲ್‌ಗಳ ಬಗ್ಗೆ ಮಾಹಿತಿ ಪಡೆಯುವುದರ ಜೊತೆ ಅಂತಾರಾಷ್ಟ್ರೀಯ ಕ್ಯುಸಿನ್‌ಗಳನ್ನೂ ಟ್ರೈ ಮಾಡಬೇಕು ಎಂದಿದ್ದರೆ ಅವರಿಗೆ ಇದು ಒಳ್ಳೆಯ ಜಾಗ. ಇಲ್ಲಿ 7,000 ರೂ. ನಿಂದ 7 ಲಕ್ಷ ರೂ. ವರೆಗಿನ ಸೈಕಲ್‌ಗಳು ಖರೀದಿಗೆ ಸಿಗುತ್ತವೆ. ಜೊತೆಗೆ ಅಂತಾರಾಷ್ಟ್ರೀಯ ಗುಣ ಮಟ್ಟದ ಸೈಕಲ್ ಆ್ಯಕ್ಸಸರೀಸ್‌ಗಳೂ ಕೂಡ ಮಾರಾಟಕ್ಕೆ ಸಿಗುತ್ತವೆ. ಇಷ್ಟಲ್ಲದೆ ಬಾಡಿಗೆಗೆ ಕೂಡಾ ಸೈಕಲ್‌ಗಳು ಲಭ್ಯ.
ಫುಡ್ ಹೇಗಿದೆ?: ಇದು ಇಂಟರ್‌ನ್ಯಾಷನಲ್ ಕ್ಯುಸಿನ್ ಸಿಗುವ ಸ್ಥಳ. ಕೆಫೆ ಎಂದ ಕೂಡಲೆ ಇಲ್ಲಿ ಕಾಫೀ, ಟೀ, ಡೆಸರ್ಟ್‌ಗಳು ಮಾತ್ರ ಸಿಗುತ್ತವೆ ಎಂದುಕೊಳ್ಳದಿರಿ. ಇಲ್ಲಿ ಸಾಫ್ಟ್ ಬೆವರೇಜಸ್, ಆ್ಯಪಟೈಸರ್ , ಸಲಾಡ್, ಸ್ಯಾಂಡ್ವಿಚಸ್, ಪಾಸ್ತ, ರಿಸೊಟೊ, ಪಿಝಾl, ಬರ್ಗರ್, ವೆಜ್ ಮತ್ತು ನಾನ್‌ವೆಜ್ ಮೇನ್ ಕೋರ್ಸ್ ಕೂಡಾ ಲಭ್ಯ. ವಿಶೇಷವೆಂದರೆ ಅಂತಾರಾಷ್ಟ್ರೀಯ ಖಾದ್ಯಗಳೇ ಆದರೂ ಅವಕ್ಕೆ ದಕ್ಷಿಣಭಾರತದ ಸ್ವಾದದ ಟಚ್ ನೀಡಿದ್ದಾರೆ. ಚೆಟ್ಟಿನಾಡ್ ಚಿಕನ್ ಕರ್ರಿ ಸ್ಟೀಮ್ಡ್ ರೈಸ್, ಚಿಪ್ಟೋಲ್ ಚಿಕನ್ ಇಲ್ಲಿಯ ಸ್ಪೆಷಲ್. ಹೀಗಾಗಿ ಇಲ್ಲಿಯ ಎಲ್ಲಾ ಆಹಾರವೂ ಭಾರತೀಯರಿಗೆ, ವಿಶೇಷವಾಗಿ ದಕ್ಷಿಣ ಭಾರತೀಯರಿಗೆ ಹಿಡಿಸುತ್ತವೆ.
ವಿಶೇಷ ತಿನಿಸುಗಳು: ಇಲ್ಲಿಯ ಸೋರ್ ಡೋ ಪಿಝಾಗೆ ಅದರದ್ದೇ ಆದ ವಿಶೇಷ ಸ್ವಾದವಿದೆ. ಐಸ್‌ಕ್ರೀಮ್, ಡೆಸರ್ಟ್‌ಗಳಲ್ಲಿ ಎಗ್‌ಲೆಸ್ ಸಾಲ್ಟೆಡ್ ಕ್ಯಾರಮೀಲ್ ಆ್ಯಂಡ್ ಚಾಕೊಲೆಟ್ ಟಾರ್ಟ್, ಫ್ಲೋರ್‌ಲೆಸ್ ಚಾಕೊಲೆಟ್ ಫಡ್ಜ್ ಇಲ್ಲಿ ಸವಿಯಲೇಬೇಕಾದ ತಿನಿಸುಗಳು. ದಕ್ಷಿಣ ಭಾರತೀಯ ಖಾದ್ಯಗಳಿಗೆ ಚೈನೀಸ್ ಸ್ಪರ್ಶ ನೀಡಲಾದ ಖಾದ್ಯಗಳೂ ಇಲ್ಲಿವೆ.
ಆಕರ್ಷಕ ಒಳಾಂಗಣ: ತುಂಬಾ ಆರಾಮ ಮತ್ತು ಐಷಾರಾಮ ಎನಿಸುವಂತಿದೆ ಕೆಫೆಯ ಒಳಾಂಗಣ. ಒಂದೆಡೆ ಸೈಕಲ್‌ನ ಬಿಡಿ ಭಾಗಗಳನ್ನು ಬಳಸಿ, ಕಲಾತ್ಮಕವಾಗಿ ಗೋಡೆಯನ್ನು ನಿರ್ಮಿಸಿದ್ದಾರೆ. ಸೈಕಲ್ ತಯಾರಿಕೆಯಲ್ಲಿ ಉಪಯೋಗವಾಗದೇ ಉಳಿಯುವ ಬೇಡದ ವಸ್ತುಗಳನ್ನು ಕಲಾತ್ಮಕವಾಗಿ ಬಳಸಿಕೊಂಡಿದ್ದಾರೆ. ಕೆಫೆ ಒಳಗೆ ಸೈಕಲ್‌ಗಳು, ಸೈಕಲ್ ಆ್ಯಕ್ಸಸರೀಸ್‌ಗಳು ಸಾಕಷ್ಟು ನೋಡಲು ಸಿಗುತ್ತವೆ. ಹೆಚ್ಚು ಪ್ರಕಾಶವೂ ಅಲ್ಲದ ಹೆಚ್ಚು ಮಂದವೂ ಅಲ್ಲದ ಬೆಳಕು ಮುದ ನೀಡುತ್ತದೆ. ಪ್ರೀತಿ ಪಾತ್ರರೊಡನೆ ಆಹಾರ ಸವಿಯಲು ಚೀಕ್ಲೊ ಕೆಫೆ ಪ್ರಶಸ್ತ ಸ್ಥಳ.
ಎಲ್ಲಿ?: ಚೀಕ್ಲೊ ಕೆಫೆ, ನಂ.948, ಎಚ್‌ಎಎಲ್ 2ನೇ ಹಂತ, ಅಪ್ಪಾರೆಡ್ಡಿ ಪಾಳ್ಯ, ಇಂದಿರಾನಗರ
* ಚೇತನ ಜೆ.ಕೆ.