ಧಾರವಾಡ: ಸರಕಾರ ಬೆಂಬಲ ಬೆಲೆಯಡಿ ಕಡಲೆ ಬೆಳೆ ಖರೀದಿ ಮಾಡಿದ ರೈತರ ಖಾತೆಗಳಿಗೆ ಹಣ ಜಮೆ ಆಗದಿರುವುದು ಗಮನಕ್ಕೆ ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ತಾಂತ್ರಿಕ ಕಾರಣದಿಂದ ಹಣ ಜಮೆಯಾಗಿಲ್ಲ. ಆದಷ್ಟು ಬೇಗ ಕಡಲೆ ಮಾರಿದ ರೈತರ ಖಾತೆಗಳಿಗೆ ಹಣ ಜಮೆ ಆಗಲಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಜಿಲ್ಲೆಯಲ್ಲಿ ಮೆಕ್ಕೆಜೋಳ ಹೆಚ್ಚು ಬೆಳೆಯಲಾಗಿದೆ. ಕೆಎಂಎಫ್ ದೊಡ್ಡ ಪ್ರಮಾಣದಲ್ಲಿ ಮೆಕ್ಕೆ ಜೋಳ ಖರೀದಿ ಮಾಡಲಿಲ್ಲ. ಮಾರುಕಟ್ಟೆಯಲ್ಲಿ ಮೆಕ್ಕೆಜೋಳಕ್ಕೆ 1400 ರೂ. ಬೆಲೆ ಇದೆ. ಇಂದಿನ ಪರಿಸ್ಥಿತಿಯಲ್ಲಿ ಸರ್ಕಾರದಿಂದ ಮೆಕ್ಕೆಜೋಳ ಖರೀದಿ ಮಾಡಲು ಆಗುವುದಿಲ್ಲ. ಮೆಕ್ಕೆಜೋಳ ಬೆಳೆದ ರೈತರಿಗೆ 5 ಸಾವಿರ ಸಬ್ಸಿಡಿ ಕೊಡಲು ಸರ್ಕಾರ ನಿರ್ಧರಿಸಿದೆ. ಸರ್ಕಾರ ಖರೀದಿ ಕೇಂದ್ರದ ಮೂಲಕ ಮೆಕ್ಕೆಜೋಳ ಖರೀದಿ ಮಾಡಲಾಗುವುದಿಲ್ಲ. ರೈತರು ತಮಗೆ ಇಷ್ಟ ಬಂದವರಿಗೆ ಮಾರಾಟ ಮಾಡಬಹುದು ಎಂದರು.
ಜಿಲ್ಲೆಗೆ ಅಂತಾರಾಜ್ಯದಿಂದ ಈವರೆಗೆ 1,180 ವಲಸೆ ಕಾರ್ಮಿಕರು ಬಂದಿದ್ದು, ಜಿಲ್ಲೆಯಿಂದಲೂ ಬೇರೆ ರಾಜ್ಯಗಳಿಗೆ ಕಾರ್ಮಿಕರು ಹೋಗಿದ್ದಾರೆ. ಮಹಾರಾಷ್ಟ್ರ, ತಮಿಳುನಾಡು, ಕೇರಳ ರಾಜ್ಯದಿಂದ ಕಾರ್ಮಿಕರು ಬಂದಿದ್ದಾರೆ. ಇಲ್ಲಿಂದಲೂ ಬೇರೆ ಬೇರೆ ರಾಜ್ಯಗಳಿಗೆ ವಲಸೆ ಕಾರ್ಮಿಕರು ಹೋಗಿದ್ದಾರೆ. ನಾಳೆ, ನಾಡಿದ್ದು ಇನ್ನೂ ಸಾಕಷ್ಟು ಜನ ಹೋಗಲಿದ್ದಾರೆ. ಮುಂಬೈದಿಂದ ನಮ್ಮ ರಾಜ್ಯಕ್ಕೆ ಕಾರ್ಮಿಕರು ಬಂದಾಗ ಹೆಚ್ಚಿನ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಒಟ್ಟಿನಲ್ಲಿ ಕಾರ್ಮಿಕರ ಸ್ಥಳಾಂತರದಿಂದ ಹೆಚ್ಚಿನ ಪಾಸಿಟಿವ್ ಪ್ರಕರಣ ಪತ್ತೆಯಾಗುತ್ತಿವೆ ಎಂದು ಹೇಳಿದರು.
ಸರಕಾರ ಮಾರ್ಗಸೂಚಿ ಅನ್ವಯ ಮಂಗಳವಾರದಿಂದ ಬಸ್‌ಗಳು ಪ್ರಾರಂಭ ಆಗಲಿದ್ದು, ಟ್ಯಾಕ್ಸಿ ರಿಕ್ಷಾಗಳಿಗೂ ಪರವಾನಗಿ ನೀಡಲಾಗಿದೆ. ಸಿನಿಮಾ ಥಿಯೇಟರ್, ಮಾಲ್, ಪಬ್‌ಗಳು ಎಂದಿನಂತೆ ಬಂದ್ ಇರಲಿವೆ. ಪಾರ್ಕ್‌ಗಳಿಗೆ ಬೆಳಗ್ಗೆ ಹಾಗೂ ಸಂಜೆ ಹೊತ್ತು ಎರಡು ತಾಸು ತೆರೆಯಲು ಅವಕಾಶ ನೀಡಲಾಗಿದೆ. ಬಂದ್ ಆಗಿದ್ದ ಅಭಿವೃದ್ಧಿ ಕಾಮಗಾರಿಗಳನ್ನೂ ಪುನರಾರಂಭಿಸಿದ್ದೇವೆ ಎಂದು ತಿಳಿಸಿದರು.
ಕೆಸಿ ಪಾರ್ಕ್ ಬಳಿಯ ಸರಕಾರಿ ಪ್ರವಾಸಿ ಮಂದಿರದಲ್ಲಿ ಲಾಕಡೌನ್ ನಿಯಮ ಉಲ್ಲಂಘಿಸಿ ಪಾರ್ಟಿ ಮಾಡಿರುವ ಬಗ್ಗೆ ವಿಚಾರ ಮಾಡಿ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಹೊಸದಾಗಿ ವೈನ್‌ಶಾಪ್ ಹಾಗೂ ಬಾರ್‌ಗೆ ಸರಕಾರ ಪರವಾನಗಿ ನೀಡಿಲ್ಲ. ಕೇವಲ ಎಂಎಸ್‌ಐಎಲ್ ಮಳಿಗೆಗಳಿಗೆ ಮಾತ್ರವೇ ಪರವಾನಗಿ ನೀಡಿದೆ.
– ಜಗದೀಶ ಶೆಟ್ಟರ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ