Advertisement

ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸೀತಾಳೆ ಸಿಡುಬು ಭೀತಿ !

10:14 AM Mar 04, 2020 | mahesh |

ಉಡುಪಿ: ಕೊರೊನಾ ವೈರಸ್‌ ಭೀತಿಯ ನಡುವೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಸೀತಾಳೆ ಸಿಡುಬು ರೋಗ (ಚಿಕನ್‌ ಪಾಕ್ಸ್‌) ಕಾಣಿಸಿಕೊಂಡಿದ್ದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಇದರಿಂದ ಬೇಸಗೆಯಲ್ಲಿ ಇತರ ಸಾಂಕ್ರಾಮಿಕ ರೋಗ ಹರಡುವ ಭೀತಿ ಆವರಿಸಿದೆ. ಅವಳಿ ಜಿಲ್ಲೆಯಲ್ಲಿ ಈಗಾಗಲೇ 40ಕ್ಕೂ ಅಧಿಕ ಮಂದಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

Advertisement

ಈ ಸಾಂಕ್ರಾಮಿಕ ರೋಗ 3ರಿಂದ 18 ವರ್ಷ ವಯೋಮಾನದವರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. 19ರಿಂದ
60 ವರ್ಷ ಮತ್ತು ಅನಂತರದ ವಯೋಮಾನದವರಲ್ಲಿ ಸಮ ಪ್ರಮಾಣದಲ್ಲಿ ಕಂಡುಬರುತ್ತದೆ. ಆರೋಗ್ಯ
ಇಲಾಖೆ ಅಧಿಕಾರಿಗಳು ಇದು ಸಹಜಕಾಯಿಲೆ ಎನ್ನುತ್ತಾರದರೂ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಇದು ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ. ಒಂದೇ ಮನೆಯ ಇಬ್ಬರು ಮಕ್ಕಳು ಸೋಂಕಿನಿಂದ ಬಾಧಿತರಾಗಿ ಚಿಕಿತ್ಸೆ ಪಡೆದ ಪ್ರಕರಣ ಬ್ರಹ್ಮಾವರದಲ್ಲಿ ಪತ್ತೆಯಾಗಿದೆ.

ಚಿಕನ್‌ ಪಾಕ್ಸ್‌ ಸಹಜವಾಗಿ ಚಳಿಗಾಲದಲ್ಲಿ ಹರಡುತ್ತದೆ. ಸೋಂಕು ಕಾಣಿಸಿಕೊಂಡ 2ರಿಂದ 3 ದಿನಗಳಲ್ಲಿ ಅದು ಬಾಧಿತರ ಅರಿವಿಗೆ ಬರುತ್ತದೆ. ಹಸಿವಾಗದೆ ಇರುವುದು, ಜ್ವರ, ಸ್ನಾಯುಗಳ ನೋವು, ಚರ್ಮದ ಮೇಲೆ ದಡ್ಡು, ನವೆ, ತುರಿಕೆ, ಕಿರಿಕಿರಿ ಉಂಟುಮಾಡುತ್ತದೆ. ಎಲ್ಲೆಂದರಲ್ಲಿ ತುರಿಕೆ ಆರಂಭವಾಗಿ ಅದು ಕೆಂಪು ಬಣ್ಣದ ಗುಳ್ಳೆಗಳಾಗುತ್ತವೆ. ಬಳಿಕ ಅದರಲ್ಲಿ ದ್ರವರೂಪದ ಪದಾರ್ಥ ಸೇರಿ ಉಲ್ಬಣಗೊಳ್ಳುತ್ತದೆ. ಕನಿಷ್ಠ 7ರಿಂದ 21 ದಿನಗಳವರೆಗೆ ಸೋಂಕು ಮೈಮೇಲೆ ಇರುತ್ತದೆ. “ವರಿಸೆಲ್ಲ’ ಎಂಬ ವೈರಸ್‌ನಿಂದ ಈ ರೋಗ ಹರಡುತ್ತದೆ. ಸೀನು, ಕೆಮ್ಮಿನ ಮೂಲಕ ಹರಡುತ್ತಿದ್ದು, ಸೂಕ್ತ ಚಿಕಿತ್ಸೆಯಿಂದ ಗುಣಪಡಿಸಬಹುದು ಎನ್ನುತ್ತಾರೆ ವೈದ್ಯರು.

ಪ್ರಕರಣಗಳಿಲ್ಲ: ಆರೋಗ್ಯ ಇಲಾಖೆ
ಚಿಕನ್‌ ಪಾಕ್ಸ್‌ ಸೋಂಕಿಗೆ ಮನೆಯಲ್ಲೆ ಚಿಕಿತ್ಸೆ ಪಡೆಯುವವರೇ ಹೆಚ್ಚು. ಹಳ್ಳಿಗಳ ಮಂದಿ ಆಸ್ಪತ್ರೆಗಳಿಗೆ
ತೆರಳದೆ ಈಗಲೂ ಮನೆ ಮದ್ದು ಮಾಡುತ್ತಾರೆ. ಖಾಸಗಿ ಕ್ಲಿನಿಕ್‌ಗಳಲ್ಲಿಯೂ ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಇದರ ಚಿಕಿತ್ಸೆಗೆಂದು ಸರಕಾರಿ ಆಸ್ಪತ್ರೆಗಳಿಗೆ ತೆರಳುವವರ ಸಂಖ್ಯೆ ಕಡಿಮೆ. ಜಿಲ್ಲೆಯ ಹಲವು ತಾಲೂಕುಗಳಲ್ಲಿ ಈ ಸೋಂಕು ತಗುಲಿದ ಬಗ್ಗೆ ಮಾಹಿತಿ ಇದೆ. ಆರೋಗ್ಯ ಇಲಾಖೆ ಮಾತ್ರ ಇಂತಹ ಪ್ರಕರಣಗಳು ಸಂಭವಿಸಿಯೇ ಇಲ್ಲ ಅನ್ನುವ ಮಾಹಿತಿ ನೀಡುತ್ತಿವೆ.

ಸೀತಾಳೆ ಸಿಡುಬು ರೋಗ
ಚಿಕನ್‌ ಪಾಕ್ಸ್‌ ತಾಯಿಯಿಂದ ಮಗುವಿಗೆ, ಕಾರ್ಮಿಕರು, ನೌಕರರು, ಒಟ್ಟಿಗೆ ಇರುವ ವ್ಯಕ್ತಿಗಳಿಂದ, ಮೈ ಕೈ ತಾಗಿಸಿ ಕೂರುವುದು, ಪರಸ್ಪರ ಹಸ್ತಲಾಘವ ಮಾಡುವುದು, ಸೋಂಕು ಬಾಧಿತರ ಚರ್ಮ ತಾಗುವಂತಹ ಕಾರಣಗಳಿಂದ ಹರಡುತ್ತದೆ.

Advertisement

ಚಿಕನ್‌ ಪಾಕ್ಸ್‌ ಸೋಂಕುವಿಗೆ ಸಂಬಂಧಿಸಿ ಪ್ರಕರಣಗಳು ಹರಡುತ್ತಿರುವ ಬಗ್ಗೆ ಮುನ್ನೆಚ್ಚರಿಕೆ ಅಗತ್ಯ. ಜನರು ಭಯ ಪಡಬೇಕಿಲ್ಲ. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತೆ ಜಿಲ್ಲೆಯ ಎಲ್ಲ ಆಸ್ಪತೆಗಳಿಗೆ ಸೂಚಿಸಲಾಗುವುದು.
-ಡಾ| ಪಾಶಾ, ಜಿಲ್ಲಾ ಆರೋಗ್ಯಾಧಿಕಾರಿ (ಪ್ರಭಾರ), ಮಂಗಳೂರು

ಉಡುಪಿ ಜಿಲ್ಲೆಯಲ್ಲಿ ಚಿಕನ್‌ ಪಾಕ್ಸ್‌ಗೆ ಸಂಬಂಧಿಸಿ ಇದುವರೆಗೆ ಪ್ರಕರಣ ಬೆಳಕಿಗೆ ಬಂದಿಲ್ಲ. ಸೋಂಕು ತಗುಲಿದ ಪ್ರಕರಣಗಳಿದ್ದಲ್ಲಿ ನಮ್ಮ ಆರೋಗ್ಯ ಇಲಾಖೆ ಕಾರ್ಯಕರ್ತರು ಮನೆಗಳಿಗೆ ಭೇಟಿ ನೀಡುವ ಸಂದರ್ಭ ಗಮನಕ್ಕೆ ಬರುತಿತ್ತು. ಈ ಬಗ್ಗೆ ಪ್ರಾಥಮಿಕ ಕೇಂದ್ರಗಳ ವೈದ್ಯರನ್ನು ವಿಚಾರಿಸಿದಾಗಲೂ ಇಲ್ಲ ಎನ್ನುವ ಉತ್ತರ ಬಂದಿದೆ.
-ಡಾ| ಸುಧೀರ್‌ಚಂದ್ರ ಸೂಡ ಜಿಲ್ಲಾ ಆರೋಗ್ಯಾಧಿಕಾರಿ, ಉಡುಪಿ

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next