ಹುಬ್ಬಳ್ಳಿ: ಅವಳಿನಗರದಲ್ಲಿ ಸಂಗ್ರಹವಾಗುವ ತಾಜ್ಯದಿಂದ ಗೊಬ್ಬರ ತಯಾರಿಸುವ ಮೂಲಕ ರೈತರ ಮೆಚ್ಚುಗೆಗೆ ಪಾತ್ರವಾಗಿರುವ ಹು-ಧಾ ಮಹಾನಗರ ಪಾಲಿಕೆ, ಇದೀಗ ಚಿಕನ್ ಅಂಗಡಿಗಳಿಂದ ಸಂಗ್ರಹವಾಗುವ ತಾಜ್ಯವನ್ನು ಸಾಕು ಪ್ರಾಣಿಗಳ ಆಹಾರವನ್ನಾಗಿ ಮಾರ್ಪಡಿಸಲು ಮುಂದಾಗಿದೆ. ಪಾಲಿಕೆಯು ಮಂಗಳೂರು ಮೂಲದ IITAZ ventures ಕಂಪೆನಿಯೊಂದಿಗೆ ಒಡಬಂಡಿಕೆ ಪತ್ರಕ್ಕೆ (ಎಂಒಯು) ಸಹಿ ಹಾಕಲಿದ್ದು, ಇದರಿಂದ ಅವಳಿನಗರದಲ್ಲಿ ಚಿಕನ್ ಸೆಂಟರ್‌ಗಳಿಂದ ಪ್ರತಿದಿನ ಸಂಗ್ರಹವಾಗುವ ಸುಮಾರು 12-15 ಟನ್ ಕೋಳಿ ತಾಜ್ಯವನ್ನು ನಿರ್ವಹಣೆ ಮಾಡಲು ಸಹಕಾರಿಯಾಗಲಿದೆ.
ಹುಬ್ಬಳ್ಳಿಯಲ್ಲಿ 500, ಧಾರವಾಡದಲ್ಲಿ 300 ಸೇರಿದಂತೆ ಅವಳಿನಗರದಲ್ಲಿ ಸುಮಾರು 800ಕ್ಕೂ ಹೆಚ್ಚು ಚಿಕನ್ ಅಂಗಡಿಗಳಿವೆ. ಅವುಗಳಿಂದ ಪ್ರತಿದಿನ ಸುಮಾರು 12- 15 ಟನ್ ಕೋಳಿ ತಾಜ್ಯ ಸಂಗ್ರಹವಾಗುತ್ತಿದೆ. ಅದನ್ನು ಸರಿಯಾಗಿ ನಿರ್ವಹಣೆ ಮಾಡುವ ಮೂಲಕ ಸಾಕುಪ್ರಾಣಿಗಳ ಆಹಾರವನ್ನಾಗಿ ತಯಾರಿಸಲು IITAZ ventures ಸಂಸ್ಥೆ ಮುಂದೆ ಬಂದಿದೆ. ಅದಕ್ಕಾಗಿ ಮಹಾನಗರ ಪಾಲಿಕೆ ಸಹ ಹಸಿರು ನಿಶಾನೆ ತೋರಿಸಿದೆ. ಈಗಾಗಲೇ ಧಾರವಾಡ ಬೇಲೂರ ಕೈಗಾರಿಕಾ ವಸಾಹತು ಪ್ರದೇಶದಲ್ಲಿ 1.3 ಎಕರೆ ಪ್ರದೇಶದಲ್ಲಿ ಕೋಳಿ ತ್ಯಾಜ್ಯವನ್ನು ಸಾಕುಪ್ರಾಣಿಗಳ ಆಹಾರವನ್ನಾಗಿ ಪರಿವರ್ತಿಸುವ ರೆಂಡರಿಂಗ್ ಘಟಕ ಸ್ಥಾಪನೆ ಮಾಡಲಾಗುತ್ತಿದ್ದು, ಇನ್ನೊಂದು ತಿಂಗಳಲ್ಲಿ ಘಟಕ ಕಾರ್ಯಾರಂಭ ಮಾಡಲಿದೆ.
ಹುಬ್ಬಳ್ಳಿ-ಧಾರವಾಡದಲ್ಲಿ ಸಂಗ್ರಹವಾಗುವ ತಾಜ್ಯವನ್ನು ರಸ್ತೆ ಬದಿ ಮತ್ತು ತೆರೆದ ಚರಂಡಿಗಳಲ್ಲಿ ಸುರಿಯುವುದನ್ನು ಕಡಿಮೆ ಮಾಡಲು ಈ ಘಟಕ ನಿರ್ಮಾಣಕ್ಕೆ ಮುಂದಾಗಿದ್ದು, ಇದರಿಂದ ಬೀದಿ ನಾಯಿಗಳು ಸೇರಿದಂತೆ ಇನ್ನಿತರ ಸಾಕು ಪ್ರಾಣಿಗಳ ಉಪಟಳವೂ ಹತೋಟಿಗೆ ಬರಲಿದೆ ಎನ್ನುವ ಭರವಸೆ ಹೊಂದಲಾಗಿದೆ. ಸದ್ಯ ನಗರದಲ್ಲಿ ಹೆಚ್ಚಿನ ಚಿಕನ್ ಅಂಗಡಿಗಳ ತ್ಯಾಜ್ಯವನ್ನು ಸಾಮಾನ್ಯ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದು, ಇದನ್ನು ಸರಿಯಾಗಿ ನಿರ್ವಹಣೆ ಮಾಡಿದಲ್ಲಿ ಸಾಕು ಪ್ರಾಣಿಗಳಿಗೆ ಪೌಷ್ಟಿಕ ಆಹಾರ ನೀಡಿದಂತಾಗುತ್ತದೆ.
ಶೀಘ್ರದಲ್ಲಿಯೇ ಸಹಿ: ಈಗಾಗಲೇ ಮಹಾನಗರ ಪಾಲಿಕೆ ಹಾಗೂ ಮಂಗಳೂರು ಮೂಲದ ಕಂಪೆನಿಯೊಂದಿಗೆ ಮಾತುಕತೆಯಾಗಿದ್ದು, ಒಡಂಬಡಿಕೆ ಪತ್ರಕ್ಕೆ ಸಹಿ ಹಾಕುವುದು ಬಾಕಿ ಉಳಿದಿದೆ. ಮಹಾನಗರ ಪಾಲಿಕೆ ಮಹಾಪೌರ ಹಾಗೂ ಉಪಮಹಾಪೌರ ಆಯ್ಕೆ ನಂತರ ಪತ್ರಕ್ಕೆ ಸಹಿ ಆಗುವ ನಿರೀಕ್ಷೆ ಹೊಂದಲಾಗಿದೆ.
ಚಿಕನ್ ಅಂಗಡಿಗಳ ತ್ಯಾಜ್ಯವನ್ನು ಸಾಕುಪ್ರಾಣಿಗಳ ಆಹಾರವನ್ನಾಗಿ ಪರಿವರ್ತಿಸುವ ರೆಂಡರಿಂಗ್ ಘಟಕ ಸ್ಥಾಪಿಸುವ ಬಗ್ಗೆ ಮಂಗಳೂರು ಮೂಲದ ಸಂಸ್ಥೆ ಸಂಪರ್ಕಿಸಲಾಗಿತ್ತು. ಕಂಪೆನಿ ಈಗಾಗಲೇ ಧಾರವಾಡ ಬಳಿಯ ಕೈಗಾರಿಕಾ ಪ್ರದೇಶದಲ್ಲಿ ರೆಂಡರಿಂಗ್ ಘಟಕ ಸ್ಥಾಪಿಸುವ ಕೆಲಸ ಪ್ರಾರಂಭಿಸಿದೆ. ಚಿಕನ್ ತ್ಯಾಜ್ಯ ಸಂಗ್ರಹಿಸಲು ಅವರಿಗೆ ಹು-ಧಾ ಮಹಾನಗರ ಪಾಲಿಕೆ ಅಗತ್ಯ ನೆರವು ನೀಡಲಿದೆ.
–ಡಾ| ರವಿ ಸಾಲಿಗೌಡರ, ಪಾಲಿಕೆ ಪಶು ವೈದ್ಯಕೀಯ ವಿಭಾಗದ ಮುಖ್ಯಸ್ಥ
ಅವಳಿನಗರದಲ್ಲಿ ಸಂಗ್ರಹವಾಗುವ ಚಿಕನ್ ತ್ಯಾಜ್ಯವನ್ನು ಕಂಪನಿಯಿಂದ ಸಂಗ್ರಹಿಸುವ ಮೂಲಕ ಸಾಕು ಪ್ರಾಣಿಗಳ ಆಹಾರವನ್ನಾಗಿ ತಯಾರಿಸುವ ರೆಂಡರಿಂಗ್ ಘಟಕವನ್ನು ಧಾರವಾಡದ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದೆ. ಈಗಾಗಲೇ ಮಹಾನಗರ ಪಾಲಿಕೆ ಜೊತೆ ಈ ಕುರಿತು ಚರ್ಚೆಗಳು ನಡೆದಿದ್ದು, ಒಡಂಬಡಿಕೆ ಪತ್ರಕ್ಕೆ ಸಹಿ ಹಾಕುವುದು ಬಾಕಿ ಇದೆ. ಈಗಾಗಲೇ ಕಂಪೆನಿಯಿಂದ ಕೇರಳದಲ್ಲಿ ಘಟಕ ಇದ್ದು, ಮಂಗಳೂರಿನಲ್ಲೂ ಆರಂಭಿಸಲಾಗಿದೆ. ಹು-ಧಾದಲ್ಲಿ ಆರಂಭಿಸಬೇಕಿದ್ದು, ಮುಂದಿನ ದಿನಗಳಲ್ಲಿ ಗೋವಾ, ಶಿವಮೊಗ್ಗ ಹಾಗೂ ಬೆಂಗಳೂರಲ್ಲಿ ಘಟಕ ಕಾರ್ಯಾರಂಭವಾಗಲಿದೆ. ಅವಳಿನಗರದಲ್ಲಿ ನಿರ್ಮಾಣವಾಗುತ್ತಿರುವ ಘಟಕ 20 ಟನ್ ಸಾಮರ್ಥ್ಯ ಹೊಂದಿರಲಿದೆ.
–ಆರಿಫ್ ಬಾವಾ, IITAZ ventures ಮುಖ್ಯಸ್ಥ
ಬಸವರಾಜ ಹೂಗಾರ