Advertisement

ಚಿಕನ್‌ ಪಾಕ್ಸ್ ‌ಸ್ವಚ್ಛತೆ ಪಾಲಿಸಿ, ಪಥ್ಯ ಅನುಸರಿಸಿ

03:43 PM Apr 15, 2021 | Team Udayavani |

ಚಿಕನ್‌ ಪಾಕ್ಸ್ ಸಾಮಾನ್ಯವಾಗಿ ಬಾಲ್ಯದಲ್ಲಿ ಕಂಡುಬರುವ ಒಂದು ವೈರಲ್‌ ಇನ್‌ಫೆಕ್ಷನ್‌. ಈ ಸೋಂಕು ಮೇಲ್ನೋಟದಲ್ಲಿ ಸಾಮಾನ್ಯವಾಗಿ ಕಂಡುಬಂದರೂ ನಾವು ಇದನ್ನು ನಿರ್ಲಕ್ಷಿಸುವಂತಿಲ್ಲ. ಇದು ಒಂದು ಸಾಂಕ್ರಾಮಿಕ ರೋಗವಾಗಿದ್ದು, ಸರಿಯಾದ ಪಥ್ಯ ಹಾಗೂ ಜೀವನ ಪದ್ಧತಿ ಅನುಸರಿಸದಿದ್ದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ.

Advertisement

ಕಾರಣಗಳು
ಚಿಕನ್‌ ಪಾಕ್ಸ್ ಸೋಂಕು ವಾರಿಸೆಲ್ಲಾ , ಜೋಸ್ಟರ್‌ ಎಂಬ ವೈರಸ್‌ನಿಂದ ಹರಡುತ್ತದೆ. ಉಸಿರಾಟದ ಮೂಲಕ, ಕಲುಷಿತ, ಅನಾರೋಗ್ಯಕರ ಆಹಾರ, ನೀರು ಸೇವನೆಯಿಂದ ಅಥವಾ ಚಿಕನ್‌ ಪಾಕ್ಸ್ ಇರುವ ವ್ಯಕ್ತಿಯ ನೇರಸಂಪರ್ಕದಿಂದ ಹರಡುತ್ತದೆ. ಮುಖ್ಯವಾಗಿ ಈ ಸೋಂಕು ವೈರಸ್‌ ಗಾಳಿಯ ಮೂಲಕ ಹರಡುವುದರಿಂದ ಬರುತ್ತದೆ. ಚಿಕನ್ ಪಾಕ್ಸ್ ರೋಗಿಯ ಕಫ‌ ಅಥವಾ ಸೀನುವಾಗ ಹೊರಬೀಳುವ ಹನಿಗಳಿಂದ ಹರಡುತ್ತದೆ. ರೋಗ- ನಿರೋಧಕ ಶಕ್ತಿ
ಕಡಿಮೆ ಇದ್ದವರಲ್ಲಿ ಹಾಗೂ ಮಕ್ಕಳಿಗೆ ಈ ರೋಗ ನಿರೋಧಕ ಚುಚ್ಚು ಮದ್ದು ಕೊಡಿಸದೇ ಇದ್ದಲ್ಲಿ ಚಿಕನ್‌ ಪಾಕ್ಸ್ ಬರುವ ಸಾಧ್ಯತೆ ಜಾಸ್ತಿ ಇರುತ್ತದೆ. ಈ ಕಾಯಿಲೆ ಇರುವ ವ್ಯಕ್ತಿಗೆ ಮುಖದ ಮೇಲೆ ಮತ್ತು ಶರೀರದ ಮೇಲೆ ಗುಳ್ಳೆಗಳು 5 ರಿಂದ 6 ದಿನಗಳವರೆಗೆ ಹರಡುವ ಸಾಧ್ಯತೆ ಇದೆ.

ಸೋಂಕು ಹರಡುವ ಕಾಲ
ಕೆಲವು ಕಾಯಿಲೆಗಳು ನಿರ್ದಿಷ್ಟ ಸಮಯ ಅಥವಾ ಋತುಗಳಲ್ಲಿ ಪ್ರಮುಖವಾಗಿ ಕಂಡುಬರುತ್ತದೆ. ಹವಾಮಾನ ಬದಲಾವಣೆಗಳ ಸಂದರ್ಭದಲ್ಲಿ ಅಂದರೆ ಚಳಿಗಾಲ ಮತ್ತು ವಸಂತಕಾಲದಲ್ಲಿ ಕಂಡುಬರುತ್ತದೆ. ಜ್ವರ, ಶೀತ, ತಲೆನೋವು, ಎಲ್ಲ ಚಿಕನ್‌ ಪಾಕ್ಸ್‌ನ ಮೊದಲು ಕಂಡುಬ ರುವ ಸೂಚನೆಗಳು. ಎರಡನೇ ದಿನ ಮುಖ ಮತ್ತು ಶರೀರದಲ್ಲಿ ಸಣ್ಣ ಸೆಕೆ ಬೊಕ್ಕೆಗಳಂತೆ ಕಂಡು ಬರುತ್ತದೆ. ಹೊಟ್ಟೆ, ಬೆನ್ನು, ಮುಖದ ಮೇಲೆ ಹೆಚ್ಚಿನ ಗುಳ್ಳೆಗಳು ಕಂಡುಬರುತ್ತವೆ. ಸಾಮಾನ್ಯವಾಗಿ ಮಕ್ಕಳು ಯಾವುದೇ ತೊಂದರೆಯಿಲ್ಲದೇ ಚಿಕನ್‌ ಪಾಕ್ಸ್ ಅನ್ನು ಸಹಿಸುತ್ತಾರೆ.

ಮುಂಜಾಗ್ರತೆ ಕ್ರಮಗಳು
ಈ ರೋಗ ಬಾರದೇ ಇರುವ ಹಾಗೆ ಮಕ್ಕಳಿಗೆ ಎಂಎಂಆರ್ ವಾಕ್ಸಿನ್‌ ಕೊಡಿಸಬೇಕು. ಮಕ್ಕಳಿಗೆ ಬಂದಲ್ಲಿ ಶಾಲೆಗೆ ಹೋಗದೆ ವಿಶ್ರಾತಿ ತೆಗೆದುಕೊಂಡು ಇತರರಿಗೆ ಸೋಂಕು ಹರಡುವುದನ್ನು ತಡೆಗಟ್ಟಬಹುದು. ಚರ್ಮದ ನೈರ್ಮಲ್ಯ, ಉತ್ತಮ ಆರೈಕೆ ಮತ್ತು ವೈದ್ಯರ ಸಲಹೆಗಳನ್ನು ಪಡೆದು, ಆಂಟಿಸೆಪ್ಟಿಕ್‌ ಕ್ರಮಗಳನ್ನು ಅನುಸರಿಸಬೇಕು. ಆಳವಾದ ಕಲೆಗಳು ಉಳಿಯದ ಹಾಗೆ ಮಾಡಲು ಆದಷ್ಟು ಗುಳ್ಳೆಗಳನ್ನು ಉಗುರಿನಿಂದ ಮುಟ್ಟದೇ ಇರುವುದು ಒಳ್ಳೆಯದು. ಚರ್ಮದ ಗಾಯದಿಂದ ರೋಗ ಉಲ್ಬಣವಾಗದಂತೆ ಜಾಗೃತೆ ವಹಿಸಬೇಕು.

ಪಥ್ಯ ಅಗತ್ಯ
ಕರಿದ ಹಾಗೂ ಖಾರವಾದ ತಿಂಡಿ ಸಂಪೂರ್ಣವಾಗಿ ತ್ಯಜಿಸಬೇಕು. ಕಹಿಬೇವಿನ ಕಷಾಯದಲ್ಲಿ ಸ್ನಾನ ಮಾಡುವುದು, ಎಳನೀರು ಹಾಗೂ ನೀರನ್ನು ಧಾರಾಳವಾಗಿ ಕುಡಿಯುವುದು, ರೋಗವನ್ನು ಶೀಘ್ರವಾಗಿ ಗುಣಮುಖ ಮಾಡುವುದು. ಗರ್ಭಿಣಿಯರು, ವೃದ್ಧರಿಗೆ, ಚಿಕನ್‌ ಪಾಕ್ಸ್ ಬಂದಾಗ ವೈದ್ಯರ ಸಲಹೆ ಅಗತ್ಯ. ಆಗಾಗ ತುರಿಕೆಯಿಂದ ಇನ್‌ಫೆಕ್ಷನ್ ಆಗುವ ಸಾಧ್ಯತೆ ಇರುವುದರಿಂದ ಉಗುರುಗಳನ್ನು ಕತ್ತರಿಸುವುದು ಉತ್ತಮ. ಇನ್‌ಫೆಕ್ಷನ್‌ ಇದ್ದಲ್ಲಿ ಆ್ಯಂಟಿ ಬಯೋಟಿಕ್ಸ್ ಔಷಧಗಳ ಆವಶ್ಯಕತೆ ಇರುತ್ತದೆ. ಒಬ್ಬ ವ್ಯಕ್ತಿಗೆ ಒಮ್ಮೆ ಚಿಕನ್ ಪಾಕ್ಸ್ ಬಂದರೆ ಆ ವ್ಯಕ್ತಿಯು ರೋಗ ನಿರೋಧಕ ಶಕ್ತಿಯನ್ನು ಪಡೆಯುತ್ತಾನೆ. ಚಿಕನ್‌ ಪಾಕ್ಸ್ ಎರಡನೇ ಸಲ ಬಂದರೆ ವೈದ್ಯರನ್ನು ಭೇಟಿಯಾಗುವುದು ಉತ್ತಮ. ಚಿಕನ್‌ ಪಾಕ್ಸ್ ಬಂದ ಮೂರನೇ ದಿನ ಕಣ್ಣು ಕೆಂಪು ಆಗಿರಬಹುದು. ಯಾವುದೇ ತೊಂದರೆ ಇದ್ದಲ್ಲಿ ವೈದ್ಯರ ಸಂಪರ್ಕ ಅಗತ್ಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next