Advertisement

ಆಧುನಿಕ ವಿಧಾನದಿಂದ ಮೊಟ್ಟೆಯೊಡೆದು ಬರುವ ಕೋಳಿಮರಿ 

12:09 PM Oct 30, 2018 | |

ಮೂಡಬಿದಿರೆ: ಕನಿಷ್ಠ ವೆಚ್ಚದಲ್ಲಿ ಗರಿಷ್ಠ ಗಳಿಕೆ ಎಂಬ ಯಶಸ್ವಿ ಉದ್ಯಮದ ಸೂತ್ರದಂತೆ ಪುತ್ತಿಗೆಯ ನೆಲ್ಲಿ ಗುಡ್ಡೆಯ ಜನಾರ್ದನಗೌಡ ಎಂಬವರು ಸಾವಿರ ರೂ. ಬಂಡವಾಳ ಹೂಡಿ ಆಧುನಿಕ ಮಾದರಿಯಲ್ಲಿ ಕೋಳಿ ಮೊಟ್ಟೆಯಿಂದ ಮರಿ ಮಾಡುವ ಉದ್ಯಮ ಪ್ರಾರಂಭಿಸಿ ತಮ್ಮ ಆದಾಯವನ್ನು ಹೆಚ್ಚಿಸಿಕೊಂಡಿದ್ದಾರೆ. ಕೆಲವು ತಿಂಗಳ ಹಿಂದೆಯಷ್ಟೇ ಈ ಉದ್ಯಮ ಪ್ರಾರಂಭಿಸಿರುವ ಜನಾರ್ದನ ಗೌಡ ಅವರು, ಅಂತರ್ಜಾಲ ತಿಳಿದವರಿಂದ ಈ ಕುರಿತು ಮಾಹಿತಿ ಪಡೆದು ಪ್ರಾರಂಭಿಸಿ ಇದರಲ್ಲಿ ಯಶಸ್ವಿಯೂ ಆಗಿದ್ದಾರೆ.

Advertisement

ಕೋಳಿ ಮೊಟ್ಟೆಗೆ ನಿಯಂತ್ರಿತ ಉಷ್ಣತೆ ಒದಗಿಸಿ ಮರಿ ಮಾಡುವ ತಂತ್ರಜ್ಞಾನವನ್ನು ಅವರು ಅಳವಡಿಸಿಕೊಂಡಿರುವ ಜನಾರ್ದನ ಗೌಡ ಅವರು, ಇದಕ್ಕಾಗಿ ಸುಮಾರು 2 ಅಡಿ ಉದ್ದ, ಅಗಲ ಮತ್ತು ಎತ್ತರದ ಥರ್ಮೋಕೋಲ್‌ ಪೆಟ್ಟಿಗೆಯನ್ನು ನಿರ್ಮಿಸಿದ್ದಾರೆ. ಮೇಲ್ಭಾಗದಲ್ಲಿ ವಿದ್ಯುತ್‌ ಬಲ್ಬ್, ಒಳಗಡೆ ಸೆನ್ಸಾರ್‌ ಹಾಗೂ ಹೊರಗಡೆ ಉಷ್ಣತೆಯ ಮಾಪಕವನ್ನು ಅಳವಡಿಸಿದ್ದಾರೆ. ಪೆಟ್ಟಿಗೆಯೊಳಗೆ ಕಾಲು ಲೀ. ನೀರನ್ನು ಇರಿಸಲಾಗಿದ್ದು, ಅದಕ್ಕೆ ಉಷ್ಣತೆಯ ಪ್ರಮಾಣ 37.5 ಡಿ.ಸೆ. ಇರುವಂತೆ ರೂಪಿಸಲಾಗಿದೆ. ಉಷ್ಣತೆ ಹೆಚ್ಚಾದರೆ ವಿದ್ಯುತ್‌ ಸಂಪರ್ಕ ಸ್ವಯಂ ಕಡಿತಗೊಂಡು, 37.5 ಡಿ.ಸೆ. ಗೆ ಇಳಿಯುವಂತೆ ಮಾಡಲಾಗಿದೆ. ಪೆಟ್ಟಿಗೆಯಲ್ಲಿ 50 ಮೊಟ್ಟೆಗಳನ್ನಿರಿಸಲು ಸ್ಥಳಾವಕಾಶವಿದೆ.

21 ದಿನದಲ್ಲಿ ಹುಟ್ಟುವ ಕೋಳಿ ಮರಿಗಳು
ಸುಮಾರು 21 ದಿನ ಕಳೆದ ಬಳಿಕ ಮೊಟ್ಟೆಗಳು ಮರಿಗಳಾಗುತ್ತವೆ. ಈ ಮರಿಗಳನ್ನು ಮುಂದೆ ಸಾಧಾರಣ 20 ಡಿ.ಸೆ. ಉಷ್ಣತೆಯ ತಗಡಿನ ಪೆಟ್ಟಿಗೆಯೊಳಗೆ ಇರಿಸಿ, ಬಳಿ ಕ 10- 20 ದಿನಗಳ ಅನಂತರ ಇವು ಮಾರಾಟಕ್ಕೆ ಸಿದ್ಧವಾಗುತ್ತವೆ. ಸಾಮಾನ್ಯವಾಗಿ ಎಲ್ಲ ಮೊಟ್ಟೆಗಳೂ ಮರಿಗಳಾಗುವುದಿಲ್ಲ. ಕೆಲವು ಕಾವು ಕೊಡುವ ಹಂತದಲ್ಲಿ ವ್ಯತ್ಯಾಸಗಳಾಗಿ ‘ಕಲ್ಲಾಗಿ’ ಬಿಡುತ್ತವೆ. ಇಲ್ಲವೇ ಹಾಳಾಗುತ್ತವೆ. ಈ ಯಾಂತ್ರೀಕೃತ ವ್ಯವಸ್ಥೆಯಲ್ಲಿ ಬಹುತೇಕ ಎಲ್ಲ ಮೊಟ್ಟೆಗಳಿಂದಲೂ ಮರಿಗಳೂ ಹೊರಬರುತ್ತವೆ. ನಾಟಿಕೋಳಿ ಅಲ್ಲದೆ ಸ್ವರ್ಣರಾಜ, ಗಿರಿರಾಜ ಕೋಳಿ ಮರಿಗಳನ್ನೂ ಇದೇ ಪ್ರಕ್ರಿಯೆಯಲ್ಲಿ ಉತ್ಪಾದಿಸಬಹುದು ಎನ್ನುತ್ತಾರೆ ಜನಾರ್ದನ ಗೌಡ.

ಸಾವಯವ ಕೃಷಿಕ
ಜನಾರ್ದನ ಗೌಡ ಅವರು ಕೋಳಿ ಸಾಕಾಣಿಕೆಯ ಜತೆಗೆ ಕೃಷಿಯಲ್ಲೂ ತೊಡಗಿ ಕೊಂಡಿದ್ದಾರೆ. ತಮ್ಮ ಸ್ವಂತ ಭೂಮಿ ಇಲ್ಲವಾದರೂ, ಬೇರೆಯವರಿಂದ 11 ಎಕ್ರೆ ಭೂಮಿಯನ್ನು ಲೀಸ್‌ ಪಡೆದು ಭತ್ತ, ತೆಂಗು, ತರಕಾರಿಗಳಾದ ಬೆಂಡೆ, ಅಲಸಂಡೆ ಸಹಿತ ಬಸಳೆ ಗಿಡಗಳನ್ನು ಬೆಳೆದು ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.

ಉಪ ಸಂಪಾದನೆ ಸಾಧ್ಯ
ದೊಡ್ಡ ಉದ್ಯಮಿಗಳು ಸಂಪೂರ್ಣ ಸ್ವಯಂಚಾಲಿತ ಯಂತ್ರಗಳ ಮೂಲಕ ಕೋಳಿ ಮೊಟ್ಟೆಗಳಿಂದ ಮರಿಗಳನ್ನು ಹುಟ್ಟುಹಾಕುವ ಪ್ರಕ್ರಿಯೆ ನಡೆಸುತ್ತಾರೆ. ಇದೇ ಪ್ರಕ್ರಿಯೆಯನ್ನು ಕನಿಷ್ಠ ವೆಚ್ಚದಲ್ಲಿ ಕೋಳಿ ಸಾಕಾಣಿಕೆ ಮಾಡುವವರು ಬಳಸಿಕೊಂಡರೆ ಅವರಿಗೆ ಉತ್ತಮ ಉಪ ಸಂಪಾದನೆ ಸಾಧ್ಯ.
– ಜನಾರ್ದನ ಗೌಡ, ಕೋಳಿ ಸಾಕಾಣಿಕೆದಾರರು

Advertisement

ಪ್ರತಿ ಮರಿಗೆ 80 ರೂ. 
ಹೀಗೆ ತಯಾರಿಸಿದ ಪ್ರತಿ ಕೋಳಿ ಮರಿಗೆ 80 ರೂ. ನಷ್ಟು ಬೆಲೆ ಇದೆ. ಹಾಗಾಗಿ ಸಾಂಪ್ರದಾಯಿಕವಾಗಿ ಕೋಳಿ ಸಾಕುವವರು ಹೀಗೆ ಯಾಂತ್ರೀಕೃತವಾಗಿ ಮರಿ ಮಾಡುವುದಕ್ಕೆ ಒಂದಿಷ್ಟು ಆಸಕ್ತಿ, ಪರಿಶ್ರಮ ಮಾಡಿದರೆ ಉತ್ತಮ ಆದಾಯ ಪಡೆಯಲು ಸಾಧ್ಯವಿದೆ. ಎನ್ನುತ್ತಾರೆ ಜನಾರ್ದನ ಗೌಡರು. ಈ ಕುರಿತು ಮಾಹಿತಿ ಪಡೆಯಲಿಚ್ಛಿಸುವವರು ಅವರ ಮೊ.ಸಂ. 9901790809 ಅಥವಾ ನೇರವಾಗಿ ಸಂಪರ್ಕಿಸಬಹುದು. 

Advertisement

Udayavani is now on Telegram. Click here to join our channel and stay updated with the latest news.

Next