ಉಳ್ಳಾಲ: ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿ ಜಾಮೀನಿನ ಮೇಲೆ ಬಿಡುಗಡೆಗೊಂಡು ವಿಚಾರಣೆಗೆ ಹಾಜರಾಗದೆ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿ, ಚೋಟಾ ರಾಜನ್ ಸಹಚರ ವಿನೇಶ್ ಶೆಟ್ಟಿ (44) ಯನ್ನು ಕೊಣಾಜೆ ಪೊಲೀಸರು ಮುಂಬಯಿಯಲ್ಲಿ ಬಂಧಿಸಿದ್ದಾರೆ.
ಉಡುಪಿ ಯ ಶಿರ್ವ ನಿವಾಸಿಯಾಗಿದ್ದ ವಿನೇಶ್ ಶೆಟ್ಟಿ 2003 ರಲ್ಲಿ ಕಪ್ಪು ಕಲ್ಲು ಕೋರೆ ಮಾಲೀಕ ವೇಣುಗೋಪಾಲ ನಾಯಕ್ ಮತ್ತು ಅವರ ಚಾಲಕ ಸಂತೋಷ್ ಎಂಬವರನ್ನು ಮುಡಿಪು ಇರಾ ಕ್ರಾಸ್ ಸಮೀಪ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ಸೇರಿದಂತೆ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಇದರಲ್ಲಿ ಜಾಮೀನು ಪಡೆದಿದ್ದ ಆರೋಪಿ ವಿನೇಶ್ 2015 ರವರೆಗೂ ವಿಚಾರಣೆಗೆ ಹಾಜರಾಗುತ್ತಿದ್ದ. ಬಳಿಕ ತಲೆಮರೆಸಿಕೊಂಡಿದ್ದ ವಿನೇಶ್ ವಿರುದ್ದ ವಾರಂಟ್ ಜಾರಿ ಮಾಡಲಾಗಿತ್ತು.
ವಿನೇಶ್ ವಿರುದ್ಧ ಮುಂಬೈ, ದಾವಣೆಗೆರೆ, ಪುಣೆ, ಹೈದರಬಾದ್, ಮಂಗಳೂರಿನಲ್ಲಿ ಕೊಲೆ, ಅಕ್ರಮ ಶಸ್ತ್ರಾಸ್ತ್ರ , ಕೊಲೆ, ಕೊಲೆಯತ್ನ ಸಹಿತ ಹಲವು ಪ್ರಕರಣಗಳು ದಾಖಲಾಗಿವೆ. ನಟೋರಿಯಸ್ ಕ್ರಿಮಿನಲ್ ಆಗಿದ್ದ ವಿನೇಶ್ ಮುಂಬೈನಲ್ಲಿ ಛೋಟಾ ಶಕೀಲ್ ಸಹಚರನಾಗಿ ಕಾರ್ಯನಿರ್ವಹಿಸುತ್ತಿದ್ದ.
ಕೊಣಾಜೆ ಠಾಣೆಯ ಇನ್ಸ್ ಪೆಕ್ಟರ್ ಅಶೋಕ್ ಮತ್ತು ಎಸ್. ಐ ಸುಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ.
ಮುಂಬೈನಲ್ಲಿ ನಾಲ್ಕು ಕೊಲೆ ಪ್ರಕರಣ, ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಪ್ರಕರಣ, ಮಂಗಳೂರಿನಲ್ಲಿ ಎರಡು ಕೊಲೆ, ದಾವಣಗೆರೆ ಡಕಾಯಿತಿ ಪ್ರಕರಣ, ಪುಣೆಯ ಅಹಮದ್ ನಗರದಲ್ಲಿ 3 ಕೋಟಿ ಹವಾಲಾ ಹಣ ಲೂಟಿ ಗೈದ ಪ್ರಕರಣದಲ್ಲಿ ಈತ ಪ್ರಮುಖ ಆರೋಪಿಯಾಗಿದ್ದ.
ಛೋಟಾ ರಾಜನ್ ಸಹಚರನಾಗಿದ್ದ ಈತ ಬಳಿಕ ಹೇಮಂತ್ ಪೂಜಾರಿ ಜತೆಗೆ ಕುಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ.