ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ತೆರೆಕಂಡಿದ್ದ “ಛಿಛೋರೆ’ ಎಂಬ ಹಿಂದಿ ಚಿತ್ರವು ಪ್ರೇಕ್ಷಕರನ್ನು ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಈ ಸಿನೆಮಾವು ಸಾಮಾಜಿಕ ಸಮಸ್ಯೆಯೊಂದರ ಕೇಂದ್ರಿತವಾದ ಕಥಾ ಹಂದರ ಹೊಂದಿತ್ತು. ಆದರೆ ಇತ್ತೀಚೆಗೆ ಈ ಸಿನೆಮಾ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಸದ್ದು ಮಾಡಿ ಚರ್ಚೆಗೊಳಪಟ್ಟಿದೆ. ಕಾರಣ ಈ ಚಿತ್ರದ ನಾಯಕ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿರುವುದು.
ಪ್ರಸ್ತುತ ದಿನಗಳಲ್ಲಿ ಹದಿ- ಹರೆಯದ ವಯಸ್ಸಿನ ಮಕ್ಕಳಲ್ಲಿ ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆಗೆ ಪ್ರಯತ್ನ ನಡೆಯುವಂತಹ ಪ್ರಕರಣಗಳು ದೇಶದಲ್ಲಿ ಹೆಚ್ಚುತ್ತಲೇ ಇವೆ. ಇಂತಹ ಗಂಭೀರ ಪ್ರಕರಣವನ್ನು ಇಟ್ಟುಕೊಂಡು ನಿರ್ದೇಶಕ ನಿತೇಶ್ ತಿವಾರಿ ಅವರು “ಛಿಛೋರೆ’ ಚಿತ್ರದ ಕಥೆ ಹೆಣೆದಿದ್ದಾರೆ.
ಸೋಲುವ ಭಯದಿಂದ ಅಲ್ಲಿಯೇ ನಿಂತುಕೊಂಡರೆ ಅವರನ್ನು “ಲೂಸರ್’ ಎನ್ನುತ್ತಾರೆ. ಅದರೆ ಗೆಲುವು ನಮ್ಮದೇ ಆಗಬೇಕು ಎನ್ನುವ ಹೋರಾಟದಿಂದ ಹೋರಾಡಿದರೆ ಅವನನ್ನು “ಫೈಟರ್’ ಎನ್ನುತ್ತಾರೆ ಎನ್ನುವುದು ಈ ಸಿನೆಮಾದ ತಿರುಳು. ಅದರೆ ಈ ಸಿನೆಮಾದ ನಾಯಕ ನಟ(ಸುಶಾಂತ್ ಸಿಂಗ್ ರಜಪೂತ್) ನಿಜ ಜೀವನದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ದುರಂತದ ಸಂಗತಿ. ಈ ಸಿನೆಮಾದಲ್ಲಿ ತಂದೆ ಅನಿರುದ್ಧ್ (ಸುಶಾಂತ್ ಸಿಂಗ್ ರಜಪೂತ್), ತಾಯಿ ಮಾಯ (ಶ್ರದ್ಧಾ) ಇವರು ತಮ್ಮ ಮನಸ್ತಾಪಗಳಿಂದ ದೂರ ಆಗಿರುತ್ತಾರೆ. ಇವರಿಬ್ಬರ ಪ್ರೀತಿಯ ಮಗ ರಾಘವ(ಮಹಮದ್) ಇವರಿಬ್ಬರ ನಡುವೆ ಪ್ರೀತಿಯ ಸೇತುವೆಯಾಗಿರುತ್ತಾನೆ.
ಮಗ ರಾಘವ ಎಂಜಿನಿಯರಿಂಗ್ ವ್ಯಾಸಂಗಕ್ಕಾಗಿ ಪ್ರವೇಶಕ್ಕೆ ಪರೀಕ್ಷೆ ಬರೆದಿರುತ್ತಾನೆ. ಫಲಿತಾಂಶದ ಭಯ ಅವನಿಗೆ ಆವರಿಸುತ್ತದೆ. ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವ ಸಂಗತಿ ತಿಳಿದು ಎಂದೆಗುಂದುತ್ತಾನೆ. ಅಮ್ಮ-ಅಪ್ಪನ ರ್‍ಯಾಂಕರ್ ಆದರೆ ನಾನು ಲೂಸರ್ ಎಂದು ಖನ್ನನಾಗಿ ಬಹುಮಹಡಿ ಅಂತಸ್ತಿನ ಕಟ್ಟಡದಿಂದ ಹಾರಿ ಆತ್ಮಹತ್ಯೆಗೆ ಮುಂದಾಗುತ್ತಾನೆ. ರಾಘವ ಬದುಕಿದರೂ ಕೋಮಾಕ್ಕೆ ಹೋಗಿರುತ್ತಾನೆ. ಆಗ ತಂದೆ-ತಾಯಿ ತಮ್ಮ ಮನಸ್ತಾಪಗಳನ್ನು ಬದಿಗಿಟ್ಟು ಮಗನನ್ನು ಉಳಿಸಲು ಮುಂದಾಗುವುದೇ ಈ ಸಿನೆಮಾದ ಕಥಾ ಹಂದರ. ಎರಡು ಹಾದಿಯಲ್ಲಿ ಕಥೆ ಸಾಗುತ್ತಿದ್ದ ಸಿನೆಮಾದಲ್ಲಿ ಕಥೆಗೆ ನೈಜ ರೂಪ ಸಿಗುವುದೇ ಮಗನ ಕೋಮಾಕ್ಕೆ ಹೋಗಿರುವಾಗ. ಆಗ ಸೋತವರ ಕಥೆಗಳು ಆರಂಭವಾಗುತ್ತವೆ. ಸಿನೆಮಾ ವೀಕ್ಷಕರನ್ನು ಇನ್ನಷ್ಟು ಕುತೂಹಲಕ್ಕೀಡು ಮಾಡುತ್ತದೆ. ವೈವಿಧ್ಯಮಯವಾದ ಪಾತ್ರಗಳು ತಮ್ಮ ಕಥೆಯನ್ನು ಹೇಳುತ್ತವೆ.
ಕಾಲೇಜಿನ ಹಾಸ್ಟೆಲ್‌ನಲ್ಲಿ ಎಚ್ 3 ಮತ್ತು ಎಚ್ 4 ಎನ್ನುವ ಎರಡು ಗುಂಪುಗಳಿರುತ್ತವೆ. ನಾಯಕನಿರುವ ಗುಂಪು ಎಚ್ 4. ಆದರೆ ಪ್ರತಿ ಸಾರಿನೂ ಎಚ್ 4 ಸೋಲಿನ ರುಚಿ ಕಂಡು “ಲೂಸರ್ ‘ ಎಂದೇ ಹಣೆಪಟ್ಟಿ ಕಟ್ಟಿಕೊಂಡಿರುತ್ತದೆ. ಈ ಮಧ್ಯೆ ಚಿತ್ರದಲ್ಲಿ ಕಾಲೇಜು ಜೀವನದ ದಿನಗಳನ್ನು ಚೆನ್ನಾಗಿ ಚಿತ್ರಿಸಲಾಗಿದೆ. ಸಿನೆಮಾದ ಪ್ರತಿಯೊಂದು ಪಾತ್ರಗಳಿಗೂ ನೆಗೆಟಿವ್ ಪಾತ್ರದ ಜತೆಗೆ ಕೊನೆಗೆ ಪಾಸಿಟಿವ್ ಸಂದೇಶ ತುಂಬಿರುವುದರಿಂದ ಚಿತ್ರ ಮಹತ್ವ ಎನಿಸುತ್ತದೆ. ಅಂತಿಮ ಕ್ಷಣಗಳಲ್ಲಿ ಮಗ ರಾಘವ ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವಾಗ ನಡೆಯುವ ಪಂದ್ಯಾಟ ಮಹತ್ವದ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಚಿತ್ರ ತಿಳಿಸುತ್ತದೆ.
ಕೊನೆಯ 10 ನಿಮಿಷಗಳಲ್ಲಿ ಪ್ರೇಕ್ಷರನ್ನು ಹಿಡಿದಿಟ್ಟುಕೊಳ್ಳುವಲ್ಲಿ ನಿರ್ದೇಶಕ ನಿತೇಶ್ ತಿವಾರಿ ಯಶಸ್ವಿಯಾಗಿದ್ದಾರೆ. ಚಿತ್ರದಲ್ಲಿ ಹಾಸ್ಯದ ಲೇಪನ ಇರುವುದರಿಂದ ಸಿನೆಮಾ ಬೋರ್ ಎನಿಸದು. ಪ್ರತಿ ಪಾತ್ರಗಳಿಗೆ ಜೀವ ತುಂಬಿದ್ದಾರೆ. ನಟ ಸುಶಾಂತ್ ಸಿಂಗ್ ರಜಪೂತ್ ನಟನೆ ಅಮೋಘವಾದುದು. ನಾಯಕಿ ಶ್ರದ್ಧಾ ಕಪೂರ್ ಪಾತ್ರಕ್ಕೆ ನ್ಯಾಯ ದೊರಕಿಸಿದ್ದಾರೆ.
ಬಾಬುಪ್ರಸಾದ್ ಎ. ಬಳ್ಳಾರಿ. ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯ ಬಳ್ಳಾರಿ.