ದಾಂತೇವಾಡ: ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆಯಲ್ಲಿ ಕಳೆದ ತಿಂಗಳು ನಡೆದ ಅರನ್‌ಪುರ ಸ್ಫೋಟದಲ್ಲಿ 10 ಪೊಲೀಸ್ ಸಿಬ್ಬಂದಿ ಮತ್ತು ನಾಗರಿಕರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಬಾಲಕ ಸೇರಿದಂತೆ 8 ನಕ್ಸಲರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಪ್ರಕರಣದಲ್ಲಿ ಬಂಧಿತರಾಗಿರುವ ಒಟ್ಟು ನಕ್ಸಲೀಯರ ಸಂಖ್ಯೆ 17 ಕ್ಕೆ ಏರಿದೆ ಎಂದು ಅವರು ಹೇಳಿದರು.
ಈ ಎಂಟು ನಕ್ಸಲೀಯರ ಪೈಕಿ ಐವರನ್ನು ಬುಧವಾರ (ಮೇ 17) ಬಂಧಿಸಲಾಗಿದ್ದು, ಅಪ್ರಾಪ್ತ ಬಾಲಕ ಸೇರಿದಂತೆ ಇತರ ಮೂವರನ್ನು ಶುಕ್ರವಾರ ಅರನ್‌ಪುರ ಪೊಲೀಸ್ ಠಾಣಾ ಪ್ರದೇಶ ಮತ್ತು ಪಕ್ಕದ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ ಎಂದು ಶುಕ್ರವಾರ ಸಂಜೆ ಪೊಲೀಸರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಮಾಸಾ ಕವಾಸಿ, ಕೋಸ ಮಾಂಡವಿ, ಅರ್ಜುನ್ ಕುಂಜಮ್, ದೇವಾ ಮದ್ವಿ ಮತ್ತು ಗಂಗಾ ಮದ್ವಿ ಎಂಬ ಪೆಡ್ಕಾ ಗ್ರಾಮದ ಎಲ್ಲಾ ಸ್ಥಳೀಯರನ್ನು ಬುಧವಾರ ಬಂಧಿಸಿದ ನಂತರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಹೇಳಿದರು.
ಪೊಲೀಸ್ ಕಸ್ಟಡಿ ಮುಗಿದ ಬಳಿಕ ಏಳು ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಪ್ರಾಪ್ತನನ್ನು ಬಾಲಾಪರಾಧಿಗೃಹಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿ ಹೇಳಿದರು.
ಏಪ್ರಿಲ್ 26 ರಂದು ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಾಹನಗಳ ಬೆಂಗಾವಲು ಪಡೆಯ ಭಾಗವಾಗಿದ್ದ ಮಲ್ಟಿ ಯುಟಿಲಿಟಿ ವೆಹಿಕಲ್ (ಎಂಯುವಿ) ಅನ್ನು ನಕ್ಸಲರು ಸ್ಫೋಟಿಸಿದ್ದರು. ಘಟನೆಯಲ್ಲಿ ಹತ್ತು ಜಿಲ್ಲಾ ಮೀಸಲು ಗಾರ್ಡ್ (ಡಿಆರ್‌ಜಿ) ಸಿಬ್ಬಂದಿ ಮತ್ತು ಚಾಲಕ ಸಾವನ್ನಪ್ಪಿದರು.