Advertisement

ಕರ್ನಾಟಕಕ್ಕೆ ಛತ್ತೀಸ್‌ಗಢ ಸವಾಲು

12:07 AM Oct 23, 2019 | Team Udayavani |

ಬೆಂಗಳೂರು: ವಿಜಯ್‌ ಹಜಾರೆ ಏಕದಿನ ಕ್ರಿಕೆಟ್‌ ಕೂಟದ ಮೊದಲ ಸೆಮಿಫೈನಲ್‌ನಲ್ಲಿ ಆತಿಥೇಯ ಕರ್ನಾಟಕ ತಂಡ ಬುಧವಾರ ಛತ್ತೀಸ್‌ಗಢವನ್ನು ಎದುರಿಸಲಿದೆ. ಇನ್ನೊಂದು ಸೆಮಿಫೈನಲ್‌ ಪಂದ್ಯವು ಗುಜರಾತ್‌ -ತಮಿಳು ನಾಡು ನಡುವೆ ಜೆಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ.

Advertisement

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಎರಡೂ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸಲಿವೆ. ತವರಿನಲ್ಲಿ ಕರ್ನಾಟಕ ಬಲಿಷ್ಠವಾಗಿದೆ. ಲೀಗ್‌ನಲ್ಲಿ ಕರ್ನಾಟಕ ಅಮೋಘ ಪ್ರದರ್ಶನ ನೀಡಿದೆ. ಕ್ವಾರ್ಟರ್‌ಫೈನಲ್‌ನಲ್ಲಿ ರಾಜ್ಯದವರೇ ಆದ ವಿನಯ್‌ ಕುಮಾರ್‌ ಒಳಗೊಂಡ ಪುದುಚೇರಿ ತಂಡವನ್ನು ಸೋಲಿಸಿತ್ತು. ಇದೀಗ ಸೆಮಿಫೈನಲ್‌ನಲ್ಲಿ ಛತ್ತೀಸ್‌ಗಢವನ್ನು ಹಿಮ್ಮೆಟ್ಟಿಸುವ ವಿಶ್ವಾಸವನ್ನು ರಾಜ್ಯ ಆಟಗಾರರು ಹೊಂದಿದ್ದಾರೆ.

ಅದೃಷ್ಟದ ಆಟದಿಂದ ಸೆಮಿಫೈನಲ್‌ಗೆ ತಲುಪಿರುವ ಛತ್ತೀಸ್‌ಗಢದ ಮುಂದೆ ಸುವರ್ಣಾವಕಾಶವಿದೆ. ಹೀಗಾಗಿ ಗೆಲುವಿಗಾಗಿ ಅದೂ ಶಕ್ತಿಮೀರಿ ಪ್ರಯತ್ನ ನಡೆಸಬಹುದು.

ಮಾಯಾಂಕ್‌ ಲಭ್ಯ, ರಾಜ್ಯಕ್ಕೆ ಆನೆಬಲ
ದಕ್ಷಿಣ ಆಫ್ರಿಕಾ ವಿರುದ್ಧ ಅದ್ಭುತ ನಿರ್ವಹಣೆ ನೀಡಿರುವ ಅಗರ್ವಾಲ್‌ ಸೆಮಿಫೈನಲ್‌ ವೇಳೆ ತಂಡವನ್ನು ಸೇರಿ ಕೊಳ್ಳುತ್ತಿರುವುದು ತಂಡಕ್ಕೆ ಆನೆಬಲ ಬಂದಿದೆ. ಅಭಿಷೇಕ್‌ ರೆಡ್ಡಿ ಬದಲಿಗೆ ಮಾಯಾಂಕ್‌ಗೆ ಸ್ಥಾನ ಕಲ್ಪಿಸಲಾಗಿದೆ. ದ. ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ದ್ವಿಶತಕ ಸಿಡಿಸಿದ್ದ ಮಾಯಾಂಕ್‌ 2ನೇ ಟೆಸ್ಟ್‌ನಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದರು.

ಮಾಯಾಂಕ್‌ ಅವರಿಲ್ಲದಿದ್ದರೂ ಕರ್ನಾಟಕ ಬಲಿಷ್ಠವಾಗಿದ್ದು ಲೀಗ್‌ನಿಂದ ಇಲ್ಲಿ ತನಕ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಸೋತಿದೆ. ಉಳಿದೆಲ್ಲ ಪಂದ್ಯಗಳಲ್ಲಿ ಅಪ್ರತಿಮ ಪ್ರದರ್ಶನ ನೀಡಿದೆ. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ರಾಜ್ಯದ ಪ್ರಬಲ ಶಕ್ತಿ. ದೇವದತ್‌ ಪಡಿಕ್ಕಲ್‌, ಕೆ.ಎಲ್‌.ರಾಹುಲ್‌ ಅಪ್ರತಿಮ ಪ್ರದರ್ಶನ ನೀಡುತ್ತಿದ್ದಾರೆ. ಆರಂಭಿಕ ವಿಭಾಗ ಬಲಿಷ್ಠವಾಗಿದೆ. ಆದರೆ ಅಗ್ರ ಬ್ಯಾಟ್ಸ್‌ ಮನ್‌ ಕರುಣ್‌ ನಾಯರ್‌ ಕಳಪೆ ಫಾರ್ಮ್ನಿಂದ ಚೇತರಿಸಿಕೊಂಡಿಲ್ಲ. ಇದು ತಂಡಕ್ಕೆ ಹೊಡೆತವಾಗಿದೆ.

Advertisement

ಅದ್ಭುತ ಫಾರ್ಮ್ನಲ್ಲಿರುವ ಆರಂಭಿಕ ದೇವದತ್‌ ಪಡಿಕ್ಕಲ್‌ ಜತೆಗೆ ಕೆ.ಎಲ್‌.ರಾಹುಲ್‌ ಇನ್ನಿಂಗ್ಸ್‌ ಆರಂಭಿಸುತ್ತಿ ದ್ದಾರೆ. ಆದರೆ ಮಾಯಾಂಕ್‌ ತಂಡಕ್ಕೆ ಬಂದಿರುವುದರಿಂದ ಇನ್ನಿಂಗ್ಸ್‌ ಯಾರು ಆರಂಭಿಸುತ್ತಾರೆ ಎನ್ನುವುದು ಇನ್ನಷ್ಟೆ ಸ್ಪಷ್ಟವಾಗಬೇಕಿದೆ. ಬೌಲಿಂಗ್‌ನಲ್ಲಿ ಅಭಿಮನ್ಯು ಮಿಥುನ್‌, ಪ್ರವೀಣ್‌ ದುಬೆ, ಶ್ರೇಯಸ್‌ ಗೋಪಾಲ್‌ ಹಾಗೂ ಕೆ.ಗೌತಮ್‌ ಪ್ರಚಂಡ ಫಾರ್ಮ್ನಲ್ಲಿದ್ದಾರೆ.

ಮತ್ತೆ ಕೈಹಿಡಿಯುವುದೇ ಛತ್ತೀಸ್‌ಗಢಕ್ಕೆ ಅದೃಷ್ಟ: ಛತ್ತೀಸ್‌ಗಢ ತಂಡ ಕ್ವಾರ್ಟರ್‌ಫೈನಲ್‌ನಲ್ಲಿ ಮುಂಬಯಿ ತಂಡದ ವಿರುದ್ಧ ಸ್ಪರ್ಧೆ ಮಾಡಿತ್ತು. ಆದರೆ ಈ ಪಂದ್ಯ ಮಳೆಯಿಂದ ರದ್ದಾಗಿತ್ತು. ಲೀಗ್‌ನಲ್ಲಿ ಮುಂಬಯಿಗಿಂತ (4 ಜಯ) ಹೆಚ್ಚು ಗೆಲುವು ಸಾಧಿಸಿದ್ದ ಛತ್ತೀಸ್‌ಗಢ (5 ಜಯ) ಅದೃಷ್ಟದ ಬಲದಿಂದ ಸೆಮಿಫೈನಲ್‌ಗೇರಿತ್ತು. ಇಂತಹುದೇ ಮತ್ತೂಂದು ಅದೃಷ್ಟದ ನಿರೀಕ್ಷೆಯಲ್ಲಿದೆ ಛತ್ತೀಸ್‌ಗಢ ತಂಡ. ಹರ್‌ಪ್ರೀತ್‌ ಸಿಂಗ್‌, ಅಮನ್‌ದೀಪ್‌ ಖಾರೆ, ಜೀವನ್‌ಜ್ಯೋತ್‌ ಸಿಂಗ್‌ರಂತಹ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳು ತಂಡದಲ್ಲಿದ್ದಾರೆ.

ಸಂಭಾವ್ಯ ತಂಡ
ಕರ್ನಾಟಕ
ಮನೀಷ್‌ ಪಾಂಡೆ (ನಾಯಕ), ಕೆ.ಎಲ್‌.ರಾಹುಲ್‌, ದೇವದತ್‌ ಪಡಿಕ್ಕಲ್‌, ಕರುಣ್‌ ನಾಯರ್‌, ಪ್ರವೀಣ್‌ ದುಬೆ, ರೋಹನ್‌ ಕದಮ್‌, ಮಾಯಾಂಕ್‌ ಅಗರ್ವಾಲ್‌, ಕೆ.ಗೌತಮ್‌, ಜೆ.ಸುಚಿತ್‌, ಅಭಿಮನ್ಯು ಮಿಥುನ್‌, ಪ್ರತೀಕ್‌ ಜೈನ್‌, ರೋನಿತ್‌ ಮೋರೆ, ಬಿ.ಆರ್‌.ಶರತ್‌, ಶ್ರೇಯಸ್‌ ಗೋಪಾಲ್‌, ವಿ.ಕೌಶಿಕ್‌.

ಛತ್ತೀಸ್‌ಗಢ
ಜೀವನ್‌ಜ್ಯೋತ್‌ ಸಿಂಗ್‌, ಶಶಾಂಕ್‌ ಚಂದ್ರಾಕರ್‌, ಅಶುತೋಷ್‌ ಸಿಂಗ್‌, ಹರ್‌ಪ್ರೀತ್‌ ಸಿಂಗ್‌, ಅಮನ್‌ದೀಪ್‌ ಖಾರೆ, ಶಶಾಂಕ್‌ ಸಿಂಗ್‌, ಅಜಯ್‌, ಲವಿನ್‌ ಕೋಸ್ಟರ್‌. ಪಂಕಜ್‌ ರಾವ್‌, ಪುನಿತ್‌ ಡಾಟೆ.

Advertisement

Udayavani is now on Telegram. Click here to join our channel and stay updated with the latest news.

Next