Advertisement

ಶಸ್ತ್ರಾಸ್ತ್ರ ಹೋರಾಟ ಭ್ರಮನಿರಸನ: ದಾಂತೇವಾಡದ 32 ಮಂದಿ ನಕ್ಸಲೀಯರು ಪೊಲೀಸರಿಗೆ ಶರಣು

12:43 PM Oct 26, 2020 | Nagendra Trasi |

ರಾಯ್ ಪುರ್:ಶಸ್ತ್ರಾಸ್ತ್ರ ತ್ಯಜಿಸಿರುವ 32 ಮಂದಿ ನಕ್ಸಲೀಯರು ಶರಣಾಗಿರುವ ಘಟನೆ ಚತ್ತೀಸ್ ಗಢದ ದಾಂತೇವಾಡಾ ಜಿಲ್ಲೆಯಲ್ಲಿ ಭಾನುವಾರ (ಅಕ್ಟೋಬರ್ 25,2020) ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement

32 ನಕ್ಸಲೀಯರಲ್ಲಿ ನಾಲ್ವರ ತಲೆಗೆ ನಾಲ್ಕು ಲಕ್ಷ ರೂಪಾಯಿ ಬಹುಮಾನವನ್ನು ಪೊಲೀಸ್ ಇಲಾಖೆ ಘೋಷಿಸಿತ್ತು. ಇದೀಗ ಶಸ್ತ್ರಸಜ್ಜಿತ ಹೋರಾಟದ ಹಾದಿ ಬಿಟ್ಟು ಮುಖ್ಯವಾಹಿನಿಗೆ ಬರಲು ಇಚ್ಚಿಸಿರುವ 32 ನಕ್ಸಲೀಯರು ಬಾರ್ಸೂರ್ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ. ಇದರಲ್ಲಿ ಹತ್ತು ಮಂದಿ ಮಹಿಳೆಯರು ಸೇರಿದ್ದಾರೆ ಎಂದು ವರದಿ ತಿಳಿಸಿದೆ.

ಪೊಲೀಸ್ ಇಲಾಖೆಯ ಪುನರ್ವಸತಿ ಅಭಿಯಾನದಿಂದ ಪ್ರಭಾವಿತರಾಗಿದ್ದು, ಮಾವೋವಾದಿ ಚಿಂತನೆಯಿಂದ ಭ್ರಮನಿರಸನಗೊಂಡಿರುವ ನಕ್ಸಲೀಯರು ಪೊಲೀಸರಿಗೆ ಶರಣಾಗಲು ಇಚ್ಚಿಸಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವಾ ಪಿಟಿಐಗೆ ತಿಳಿಸಿದ್ದಾರೆ.

32 ಮಂದಿ ನಕ್ಸಲೀಯರಲ್ಲಿ 19 ಕೇಡರ್ಸ್ ಬಾಕೇಲಿ ಗ್ರಾಮದವರು, ನಾಲ್ವರು ಕೋರ್ ಕೊಟ್ಟಿ ಹಾಗೂ ಉದೇನಾರ್, ತುಮರಿಗುಂಡಾ ಮತ್ತು ಮಟಾಸಿಯ ತಲಾ ಮೂವರು ಮಂದಿ ಸೇರಿದ್ದಾರೆ ಎಂದು ವರದಿ ವಿವರಿಸಿದೆ.

ಇದನ್ನೂ ಓದಿ:ಐಪಿಎಲ್ ನ ಪ್ಲೇಆಫ್ – ಫೈನಲ್ ವೇಳಾಪಟ್ಟಿ ಬಿಡುಗಡೆ ಮಾಡಿದ ಬಿಸಿಸಿಐ

Advertisement

ಭದ್ರತೆ ಹಾಗೂ ಅವರ ಜೀವಕ್ಕೆ ಅಪಾಯ ಇದ್ದಿರುವುದನ್ನು ಪರಿಗಣಿಸಿ 32 ಮಂದಿ ನಕ್ಸಲೀಯರ ಗುರುತನ್ನು ಬಹಿರಂಗಪಡಿಸಿಲ್ಲ ಎಂದು ಪೊಲೀಸ್ ಮೂಲಗಳು ಹೇಳಿವೆ. ಇವರೆಲ್ಲ ಪೊಲೀಸ್ ಪಡೆ ಮೇಲೆ ನಡೆಸಿದ ದಾಳಿಯಲ್ಲಿ ಶಾಮೀಲಾಗಿದ್ದಾರೆ. ಶರಣಾದ ನಕ್ಸಲೀಯರಿಗೆ ತಕ್ಷಣಕ್ಕೆ ಸರ್ಕಾರದ ವತಿಯಿಂದ ಹತ್ತು ಸಾವಿರ ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತದೆ ಎಂದು ಪಲ್ಲವಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next