Advertisement

ಪಿಯುಸಿಯಲ್ಲಿ ರಾಜ್ಯಕ್ಕೆ 12ನೇ, ಬಾಗಲಕೋಟೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ನೇಕಾರನ ಮಗ ಚೇತನ್

05:47 PM Jul 15, 2020 | keerthan |

ಬನಹಟ್ಟಿ: ಚಿಕ್ಕದಾದ ಮನೆ, ಅದರಲ್ಲೂ ಮಗ್ಗಗಳ ಸಪ್ಪಳದಲ್ಲಿ ಓದಲು ಸಾಧ್ಯವಾಗುತ್ತಿರಲಿಲ್ಲ. ಕಾಲೇಜಿನ ಒಂದು ಕೋಣೆಯಲ್ಲಿ ಸಂಜೆಯವರೆಗೆ ಓದುಲು ಉಪನ್ಯಾಸಕರು ನನಗೆ ಅನುಕೂಲ ಮಾಡಿಕೊಟ್ಟಿದ್ದರು. ಮತ್ತೆ ಮನೆಗೆ ಬಂದು ಮಧ್ಯ ರಾತ್ರಿಯವರೆಗೆ ಓದುತ್ತಿದ್ದೆ. ಸತತ ಓದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ರಾಜ್ಯಕ್ಕೆ ಹನ್ನೆರಡನೆ ಮತ್ತು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಚೇತನ ಕಾಡಪ್ಪ ಸಿದ್ದಾಪುರ ಹೇಳಿದರು.

Advertisement

ಮಂಗಳವಾರ ಪಿಯುಸಿ ಫಲಿತಾಂಶ ಪ್ರಕಟಗೊಂಡ ನಂತರ ಚೇತನ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಉದಯವಾಣಿ ಪತ್ರಿಕೆಯ ಜೊತೆಗೆ ಮಾತನಾಡಿದರು.

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಶಿಕ್ಷಣ ಸಂಘದ ಎಸ್‌ಆರ್‌ಎ ವಿಜ್ಞಾನ ವಿಭಾಗದ ವಿದ್ಯಾರ್ಥಿ ಚೇತನ ಸಿದ್ದಾಪುರ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ 600 ಕ್ಕೆ 585 ಅಂಕಗಳನ್ನು ಪಡೆದುಕೊಂಡಿದ್ದಾರೆ. ಕನ್ನಡ: 99, ಇಂಗ್ಲಿಷ್: 90, ಭೌತ ವಿಜ್ಞಾನ: 99, ರಸಾಯನ ವಿಜ್ಞಾನ: 89, ಗಣಿತ: 99 ಮತ್ತು ಜೀವ ವಿಜ್ಞಾನದಲ್ಲಿ 100 ಅಂಕಗಳನ್ನು ಪಡೆದುಕೊಂಡಿದ್ದಾರೆ.

ಚೇತನ್ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 608 ಅಂಕಗಳನ್ನು ಪಡೆದುಕೊಂಡು ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದರು. ಪಿಯುಸಿಯಲ್ಲೂ ಕೂಡಾ ಮತ್ತೆ ಪ್ರಥಮ ಸ್ಥಾನ ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಗಣಿತ ಉಪನ್ಯಾಸಕ ಪ್ರೊ.ಬಿ.ನಾಗರಾಜ ತಿಳಿಸಿದರು.

ಚೇತನರ ತಂದೆ ಕಾಡಪ್ಪ ಮನೆಯಲ್ಲಿ ಎರಡು ಸ್ವಂತ ಮಗ್ಗಗಳನ್ನು ನಡೆಸುತ್ತಿದ್ದಾರೆ. ಮನೆಯಲ್ಲಿ ಬಡತನ ಪರಿಸ್ಥಿತಿ. ಅದರಲ್ಲೂ ಕೋವಿಡ್-19 ಸಂದರ್ಭದಲ್ಲಿ ಮೂರು ತಿಂಗಳಿಂದ ಮಗ್ಗದ ಚಕ್ರಗಳು ತಿರುಗಿಲ್ಲ. ಆದರೂ ಕಾಲೇಜಿನವರು ಚೇತನಗೆ ಯಾವುದೆ ರೀತಿಯ ಫೀಯನ್ನು ತೆಗೆದುಕೊಳ್ಳದೆ, ಓದಲು ಸಾಕಷ್ಟು ಪ್ರಮಾಣದಲ್ಲಿ ಪುಸ್ತಕಗಳನ್ನು ಕೂಡಾ ನೀಡಿದ್ದರು.

Advertisement

ಈಗ ಚೇತನ್ ಎಸ್‌ಆರ್‌ಎ ವಿಜ್ಞಾನ ವಿಭಾಗದ ಉಪನ್ಯಾಸಕರ ಸಹಾಯದಿಂದ ಬೊಗಸೆ ತುಂಬ ಅಂಕಗಳನ್ನು ಪಡೆದುಕೊಂಡಿದ್ದಾರೆ. ಮುಂದೆ ಮೆಡಿಕಲ್ ಓದಲು ಇಷ್ಟ ಪಟ್ಟಿರುವ ಚೇತನ್ ಸದ್ಯ ಸಿಇಟಿ ಮತ್ತು ನೀಟ್ ಪರೀಕ್ಷೆಯತ್ತ ತಮ್ಮ ಗಮನ ನೀಡಿದ್ದಾರೆ.

ನಾವು ಓದಿದ್ದು ಕಡಿಮೆರಿ. ಚೇತನನ ಪ್ರಯತ್ನ ಬಹಳ ದೊಡ್ಡದರಿ. ಎಲ್ಲಕ್ಕಿಂತ ಮುಖ್ಯವಾಗಿ ಅವನ ಕಾಲೇಜಿನ ಉಪನ್ಯಾಸಕರ ಬಹಳ ಸಹಾಯ ಮಾಡಿದಿರಿ ಎಂದು ತಾಯಿ ವಿಜಯಲಕ್ಷ್ಮಿ ಸಂತಸದ ಕಣ್ಣೀರು ಹಾಕುತ್ತ ಉದಯವಾಣಿ ಪತ್ರಿಕೆಗೆ ತಿಳಿಸಿದರು.

ಫಲಿತಾಂಶ ತೃಪ್ತಿ ತಂದಿದೆ, ಮುಂದೆ ವೈದ್ಯಕೀಯ ಮಾಡುವ ಆಸೆ. ನಿತ್ಯ 5 ರಿಂದ 7 ಗಂಟೆಗಳ ಕಾಲ ಅಭ್ಯಾಸ, ಅಭ್ಯಾಸಕ್ಕಾಗಿ ರಾತ್ರಿ ಸಮಯ ಮೀಸಲಿಟ್ಟುಕೊಂಡಿದ್ದೆ ಸತತ ಹಾಗೂ ಕಠಿಣ ಅಭ್ಯಾಸದ ಪರಿಣಾಮ ಉತ್ತಮ ಅಂಕ ದೊರಕಿದೆ.  ಅಧ್ಯಯನಕ್ಕಾಗಿ ಪಠ್ಯಪುಸ್ತಕಕ್ಕೆ ಹೆಚ್ಚಿನ ಆಧ್ಯತೆ ನೀಡುತ್ತಿದ್ದೆ, ಸ್ನೇಹಿತರ ಜೊತೆ ವಿಷಯ ಚರ್ಚೆ ಮಾಡುವುದರ ಮೂಲಕ ಅಭ್ಯಾಸಕ್ಕೆ ನೆರವಾಯಿತು. ಬಿಡುವಿನ ಸಮಯದಲ್ಲಿ ಮನೆಯಲ್ಲಿ ನೇಕಾರಿಕೆಗೆ ಕೈ ಜೋಡಿಸುವ ಜೊತೆಗೆ ಪರಿಶ್ರಮ ಅಧ್ಯಯನ ನಡೆಸಿದ್ದೇನೆ. ಎಲ್ಲ ಉಪನ್ಯಾಸಕರ ಮತ್ತು ತಂದೆ ತಾಯಿ ಸಹೋದರಿ ಪ್ರೇರಣೆಯಿಂದ ಉತ್ತಮ ಅಂಕ ಗಳಿಸಲು ಸಹಕಾರವಾಯಿತು ಎನ್ನುತ್ತಾನೆ ವಿದ್ಯಾರ್ಥಿ ಚೇತನ ಕಾಡಪ್ಪ ಸಿದ್ದಾಪೂರ.

ಕಿರಣ ಶ್ರೀಶೈಲ ಆಳಗಿ, ಬನಹಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next