ಬೆಂಗಳೂರು: ಆ ದಿನಗಳು ಖ್ಯಾತಿಯ ನಟ ಚೇತನ್ ತೆಲುಗಿಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನೂ ಹೆಸರಿಡದ ಸಿನಿಮಾದಲ್ಲಿ ಇವರು ಅಭಿನಯಿಸುತ್ತಿದ್ದು, ಇತ್ತೀಚೆಗಷ್ಟೆ ಹೈದರಾಬಾದ್ ನಲ್ಲಿ ಚಿತ್ರದ ಮುಹೂರ್ತ ಕಾರ್ಯಕ್ರಮವನ್ನು ಚಿತ್ರತಂಡ ನೆರವೇರಿಸಿದೆ. ಕನ್ನಡ ಭಾಷೆಯಲ್ಲಿಯೂ ಚಿತ್ರ ತೆರೆ ಕಾಣುವ ಸಾಧ್ಯತೆ ಇದೆ.
ಸಂಗೀತ ನಿರ್ದೇಶಕ ಸಾಯಿ ಕಾರ್ತಿಕ್ ಮತ್ತು ಶ್ರೀಕಾತ್ ಒಟ್ಟಾಗಿ ಮಾಡುತ್ತಿರುವ ಚಿತ್ರ ಇದಾಗಿದ್ದು ಖ್ಯಾತ ಚಿತ್ರಕಥೆ ರಚನಾಕಾರ ಚಕ್ರವರ್ತಿ ಈ ಸಿನಿಮಾದ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಚಿತ್ರದ ಶೀರ್ಷಿಕೆಯನ್ನು ಸದ್ಯದಲ್ಲಿಯೇ ತಿಳಿಸಲಾಗುವುದು ಎಂದು ಚಿತ್ರ ತಂಡ ತಿಳಿಸಿದೆ.
ಇದನ್ನೂ ಓದಿ:ರಾತ್ರಿ ಕರ್ಫ್ಯೂ ವಿಚಾರದಲ್ಲಿ ಸಿಎಂ ಜೊತೆ ಚರ್ಚಿಸಿ ಅಂತಿಮ ನಿರ್ಧಾರ: ಬೊಮ್ಮಾಯಿ
ನಟ ಚೇತನ್ ಹಾಸ್ಯ ಮಿಶ್ರಿತವಾದ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ತೆರೆ ಮೇಲೆ ಬರಲಿದ್ದಾರೆ. ಇನ್ನೂ ಹೆಸರಿಡದ ಈ ಹೊಸ ಸಿನಿಮಾದ ತಂಡದಲ್ಲಿ ಕನ್ನಡದವರಾಗಿ ಚೇತನ್ ಇರಲಿದ್ದು ಉಳಿದಂತೆ ಬೇರೆಲ್ಲಾ ನಟರು ತೆಲುಗಿನವರೇ ಇರುವ ಸಾಧ್ಯತೆ ಇದೆ.
ಈ ಸಿನಿಮಾದ ಕುರಿತು ಮಾತನಾಡಿರುವ ನಟ ಚೇತನ್ ಈ ಸಿನಿಮಾದಲ್ಲಿ ನನ್ನದು ವಿಭಿನ್ನವಾದ ಪಾತ್ರ. ಹಿಂದೆಂದೂ ನಾನು ಇಂತಹಾ ಪಾತ್ರದಲ್ಲಿ ನಟಿಸಿರಲಿಲ್ಲ. ಹಾಗಾಗಿ ಕಥೆ ಕೇಳಿದ ತಕ್ಷಣವೇ ನಟಿಸಲು ಒಪ್ಪಿಕೊಂಡೆ. ಈ ಚಿತ್ರದ ಮೂಲಕ ತೆಲುಗಿನಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ನನಗೆ ಬಹಳಾ ಖುಷಿ ತಂದಿದೆ ಎಂದಿದ್ದಾರೆ.
ಈ ನಡುವೆ ಚಿರಂಜೀವಿ ಸರ್ಜಾ, ವರಲಕ್ಷ್ಮಿ ಮುಂತಾದವರ ಜೊತೆಗೆ ಚೇತನ್ ನಟಿಸಿರುವ ರಣಂ ಸಿನಿಮಾ ಕೂಡಾ ತೆರೆಮೇಲೆ ಬರಲು ಸಿದ್ದತೆ ನಡೆಸಿದ್ದು, ಇನ್ನು ಕೆಲವೆ ದಿನಗಳಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.