Advertisement

ಚೇತನ್‌ ಹೊಸ ಚಿತ್ರ ಬ್ಯಾಟ್ರಾಯ

05:43 AM Jan 01, 2019 | |

ನಟ “ಆ ದಿನಗಳು’ ಚೇತನ್‌ ಅಂದಾಕ್ಷಣ, ಅವರ ಸಿನಿಮಾಗಳಿಗಿಂತ ಹೆಚ್ಚಾಗಿ ಅವರು ಹೋರಾಟದ ವಿಷಯಕ್ಕೆ ನೆನಪಾಗುತ್ತಾರೆ. ಅದರಲ್ಲೂ ಅವರೇ ಒಂದಷ್ಟು ಮಂದಿ ಜೊತೆ ಸೇರಿ ಹುಟ್ಟು ಹಾಕಿದ ಸಂಸ್ಥೆ ಮೂಲಕ “ಮಿ ಟೂ’ ಪ್ರಕರಣದಿಂದ ಮತ್ತಷ್ಟು ಸುದ್ದಿಯಾಗಿದ್ದು ಗೊತ್ತೇ ಇದೆ. ಇವೆಲ್ಲಾ ಕಾರಣಗಳಿಂದ ಚೇತನ್‌ ಹೆಚ್ಚು ಗಮನಸೆಳೆದಿದ್ದು ನಿಜ. ಅವರು ಹೋರಾಟಗಳಲ್ಲಿ ಭಾಗಿಯಾಗುವುದರಲ್ಲೇ ಹೆಚ್ಚು ಸುದ್ದಿಯಾಗಿದ್ದರಿಂದ ಮುಂದಿನ ದಿನಗಳಲ್ಲಿ ಅವರು ಸಿನಿಮಾದಿಂದ ದೂರವಾಗುತ್ತಾರೇನೋ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು.

Advertisement

ಆದರೆ, ಅವರೀಗ ಹೊಸ ವರ್ಷಕ್ಕೊಂದು ಹೊಸ ಸುದ್ದಿ ಕೊಟ್ಟಿದ್ದಾರೆ. ಹೌದು, ಚೇತನ್‌ ಹೊಸ ಚಿತ್ರವೊಂದರಲ್ಲಿ ನಟಿಸಲು ಒಪ್ಪಿದ್ದಾರೆ. ಆ ಚಿತ್ರಕ್ಕೆ “ಬ್ಯಾಟ್ರಾಯ’ ಎಂದು ಹೆಸರಿಡಲಾಗಿದೆ. ಆರ್‌.ಎಸ್‌. ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ಈ ಚಿತ್ರ ತಯಾರಾಗುತ್ತಿದ್ದು, ಕನಕಪುರ ಶ್ರೀನಿವಾಸ್‌ ನಿರ್ಮಾಣ ಮಾಡುತ್ತಿದ್ದಾರೆ. ಇವರೊಂದಿಗೆ ಕಲ್ಯಾಣ್‌ ದೂಳಿಪಾಳ್ಳ ಕೂಡ ನಿರ್ಮಾಣದಲ್ಲಿ ತೊಡಗಿದ್ದಾರೆ. ಇನ್ನು, “ಬ್ಯಾಟ್ರಾಯ’ ಚಿತ್ರಕ್ಕೆ ಮದನ್‌ ರಾಮಿಗಾಣಿ ನಿರ್ದೇಶಕರು. ಮೂಲತಃ ಆಂಧ್ರದವರಾದ ಮದನ್‌ ರಾಮಿಗಾಣಿ ಅವರಿಗೆ ಕನ್ನಡದಲ್ಲಿ ಇದು ಮೊದಲ ಚಿತ್ರ.

ತೆಲುಗಿನಲ್ಲಿ ಈಗಾಗಲೇ ಆರು ಚಿತ್ರಗಳಿಗೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಮದನ್‌ ರಾಮಿಗಾಣಿ, “ಇದೊಂದು ಲವ್‌, ಆ್ಯಕ್ಷನ್‌, ಫ್ಯಾಮಿಲಿ ಡ್ರಾಮ ಕಥೆ ಹೊಂದಿದೆ. ಜಂತುಗಳಿಗೆ ಹದ್ದು ಬೇಟೆಯಾಡಿದರೆ, ಮನುಷ್ಯ ಆಸೆ, ದುರಾಸೆಗಳ ಹಿಂದೆ ಬಿದ್ದು ಓಡಾಡುತ್ತಾನೆ. ಇಲ್ಲಿ ದ್ವೇಷ, ಅಸೂಯೆ, ಪ್ರೀತಿ, ವಾತ್ಸಲ್ಯ ಸೇರಿದಂತೆ ಈಗಿನ ಟ್ರೆಂಡ್‌ಗೆ ಬೇಕಾದ ಎಲ್ಲಾ ಅಂಶಗಳೂ ಇಲ್ಲಿರಲಿವೆ. ಹೊಸ ವಿಷಯಗಳೊಂದಿಗೆ ಹೊಸತನ ಇಟ್ಟುಕೊಂಡು ಮಾಡುತ್ತಿರುವ ಹೈ ಬಜೆಟ್‌ ಚಿತ್ರ’ ಎಂಬುದು ನಿರ್ದೇಶಕರ ಮಾತು.

ಇನ್ನು, ಬಹುತೇಕ ಉತ್ತರ ಕರ್ನಾಟಕ ಭಾಗದಲ್ಲೇ ಚಿತ್ರೀಕರಣ ನಡೆಯುವುದರಿಂದ ಅಲ್ಲಿನ ಭಾಷೆಯೇ ಚಿತ್ರದಲ್ಲಿರಲಿದೆ. ಅಲ್ಲಿನ ಖಡಕ್‌ ಭಾಷೆ ಚಿತ್ರದ ಇನ್ನೊಂದು ಹೈಲೆಟ್‌. ಜನವರಿಯಲ್ಲಿ ಚಿತ್ರ ಆರಂಭವಾಗಲಿದ್ದು, ಸುಮಾರು 100 ದಿನಗಳ ಕಾಲ ಗಜೇಂದ್ರ ಗಡ, ಬಾಗಲಕೋಟೆ, ಇಳಕಲ್ಲು, ಗದಗ ಸೇರಿದಂತೆ ಉತ್ತರ ಕರ್ನಾಟಕದ ಅಪರೂಪದ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ. ಚಿತ್ರದ ಮತ್ತೂಂದು ವಿಶೇಷವೆಂದರೆ, ಸರ್ವೇಶ್‌ ಮುರಾರಿ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ.

ತೆಲುಗಿನ ಸ್ಟಾರ್‌ ಚಿತ್ರಗಳಿಗೆ ಕ್ಯಾಮೆರಾ ಹಿಡಿದಿದ್ದ ಸರ್ವೇಶ್‌ ಮುರಾರಿ ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಕೆಲಸ ಮಾಡುತ್ತಿದ್ದಾರೆ. ಅಂತೆಯೇ ತಾಂತ್ರಿಕವಾಗಿಯೂ ಚಿತ್ರ ಗಟ್ಟಿಯಾಗಿರಲಿದೆ ಎಂಬುದು ಚಿತ್ರತಂಡದ ಹೇಳಿಕೆ. ಇನ್ನು, ಈ ಚಿತ್ರ ಕನ್ನಡ ಮಾತ್ರವಲ್ಲದೆ, ತೆಲುಗು ಭಾಷೆಯಲ್ಲೂ ರೆಡಿಯಾಗಲಿದೆ ಎನ್ನಲಾಗಿದೆ. ಅದೇನೆ ಇರಲಿ, “ಆ ದಿನಗಳು’ ಖ್ಯಾತಿಯ ಚೇತನ್‌, ಹೊಸ ವರ್ಷದಲ್ಲೊಂದು ಹೊಸ ಸಿನಿಮಾಗೆ ಕೈ ಹಾಕಿದ್ದಾರೆ. “ಬ್ಯಾಟ್ರಾಯ’ ಅವರಿಗೆ ವಿಭಿನ್ನ ಸಿನಿಮಾ ಆಗಿದ್ದು, ಪಾತ್ರ ಕೂಡ ವಿಶೇಷವಾಗಿ ಕಟ್ಟಿಕೊಡಲಾಗಿದೆ ಎಂಬುದು ನಿರ್ದೇಶಕರ ಹೇಳಿಕೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next