Advertisement
ಎಲ್ಲರಿಗೂ ತಮ್ಮ ಜೀವನದ ಎಲ್ಲಾ ದಿನಗಳನ್ನು ನೆನಪಿನಲ್ಲಿಟ್ಟುಕೊಳ್ಳುವು ದಕ್ಕೆ ಸಾಧ್ಯವಿರುವುದಿಲ್ಲ. ಆದರೆ ಅಂಥ, ಎಂದಿಗೂ ಮರೆಯಲಾಗದ ಒಂದು ವಾರವನ್ನು ಮಂಗಳೂರಿನ ಇನ್ಫೋಸಿಸ್‌ಆವರಣದಲ್ಲಿ ಕಳೆದದ್ದು ಹೌದು. ಚೇತನಾ 2019 (ಕರ್ನಾಟಕ ಸರಕಾರ, ಐಐಆಖ ಇಲಾಖೆಯ ಸಹಯೋಗದೊಂದಿಗೆ) ಅದೊಂದು ಸುಂದರ ಕಾರ್ಯಕ್ರಮ. ಸರ್ಕಾರಿ ಶಾಲೆಯಲ್ಲಿ ಕಲಿತು ಎಸ್‌ಎಸ್‌ಎಲ್‌ಸಿಯಲ್ಲಿ ಸಾಧಿಸಿದ ವಿದ್ಯಾರ್ಥಿನಿಯರ ಮಾನಸಿಕ, ಬೌದ್ಧಿಕ ವಿಕಸನಕ್ಕೆ ಸುಂದರ ವೇದಿಕೆ. ತಾಂತ್ರಿಕತೆಯ ಬಳಕೆಯ ಬಗ್ಗೆ ಪ್ರತಿಯೊಬ್ಬ ಹೆಣ್ಣುಮಗುವಿನ ಲ್ಲಿಯೂ ಜಾಗೃತಿ ಮೂಡಿಸುವ ಧ್ಯೇಯದ ಚೇತನಾ 2019 ಪ್ರತಿಯೊಬ್ಬ ಶಿಬಿರಾರ್ಥಿಗೂ ಚೇತನವಾದದ್ದು ಸತ್ಯವೇ ಸರಿ.
Related Articles
Advertisement
ಅದರಲ್ಲಿಯೂ “ಇಂಡಸ್ಟ್ರಿಯಲ್ ಟೂರ್’ ನಮಗೊಂದು ಹೊಸ ಪರಿಚಯ. ದೊಡ್ಡದೇನೂ ಎಣಿಸಬೇಡಿ ಸ್ವಾಮೀ, ಅದು ಕಾರ್ಖಾನೆಗಳ ತೋರಿಸುವ, ಪರಿಚಯಿಸುವ ಒಂದು ಸಮಾರಂಭ. ಆ ಬಂದರು, ದೊಡ್ಡ ದೊಡ್ಡ ಹಡಗುಗಳು, ಮೆಶೀನ್‌ಗಳು… ಸಮುದ್ರವನ್ನೇ ಕಾಣದವರ ಕಣ್ಣಲ್ಲೊಂದು ಹೊಳಪಿತ್ತು! ರಾಶಿಬಿದ್ದ Limestones, Iron ore ದೊಡ್ಡ ದೊಡ್ಡ ಮಶೀನ್‌ಗಳು, ಅರ್ಥವಾಗದ್ದನ್ನು ಅರ್ಥೈಸುವ ಜನರು, ತಾರಾನೋಟ ತೋರಿದ ಮಾಯಾಲೋಕ! ಮೋಜಿನ ವಿಜ್ಞಾನ. ಒಟ್ಟಾರೆ ಕುಂದಾಪುರ ಭಾಷೆಯಲ್ಲಿ ಹೇಳುವುದಾದರೆ, “ಎಂಥಾ ಲಾಯ್ಕಿದಿತ್ ಗೊತಿತಾ!’
400 ಜನ ವಿದ್ಯಾರ್ಥಿಗಳು, ಹತ್ತಾರು ಜನ ಅಧ್ಯಾಪಕರು, ನಮಗಾಗಿ ಬಂದ ಸಹ್ಯಾದ್ರಿ ಕಾಲೇಜಿನ ಸ್ವಯಂಸೇವಕರು. ಬೆಳಗ್ಗೆ ಐದು ಗಂಟೆಗೆದ್ದು ಕರಾಟೆ ಕಲಿಯುವ ಉತ್ಸಾಹ. ಜೊತೆಗೆ ಮೈ-ಮನಗಳ ಉಲ್ಲಾಸಕ್ಕಾಗಿ ಯೋಗ. ವಿಧವಿಧವಾದ ತಿಂಡಿಗಳೊಂದಿಗೆ ತಟ್ಟೆಯಲ್ಲಿರುವ ಚೂರನ್ನೂ ಉಳಿಸದಂತೆ ಮಾಡುವ ಗಡಿ ಕಾವಲುಗಾರರು. ಆ ಪ್ರಶಾಂತ, ನಿಶ್ಶಬ್ದತೆಯ ಇನ್ಫೋಸಿಸ್ ಆವರಣ.
400 ಜನ ವಿದ್ಯಾರ್ಥಿಗಳಿಗೂ SAMSUNG TAB ನೀಡಿ, ತಾಂತ್ರಿಕತೆಯ ಉತ್ತಮ ಬಳಕೆಯ ಬಗ್ಗೆ ತರಬೇತಿ ನೀಡಿದ SAMSUNGನ ಸಾಮಾಜಿಕ ಕಳಕಳಿ ನಮಗೊಂದು ಆದರ್ಶ.
ಬೆಳಗ್ಗೆ ಆರು ಗಂಟೆಗೆ ಶುರುವಾಗುತ್ತಿದ್ದ ನಮ್ಮ ಅವಧಿಗಳು ಮುಗಿಯುತ್ತಿದ್ದುದು ರಾತ್ರಿ ಒಂಬತ್ತು ಗಂಟೆಗೆ. ಆದರೆ, ನಮ್ಮ ಪ್ರತಿಯೊಂದು ದಿನವನ್ನೂ ಸಂತಸದ ಹೊನಲಾಗಿಸಿದ್ದು ಕೊನೆಯ ಎರಡು ಗಂಟೆಗಳು. ಅದು ಮೋಜಿನ ಸಮಯ.
ತಮ್ಮ ತಮಾಷೆಯ ಮಾತು, ಸುಮಧುರ ಕಂಠದಿಂದ, ದಿನವೂ ನಮ್ಮೆಲ್ಲರನ್ನೂ ನಗಿಸುತ್ತಿದ್ದ ವಿದ್ಯಾಶಂಕರ್ ಸರ್, ಪ್ರತಿಷ್ಠಿತ ಕಾಲೇಜುಗಳ ಪ್ರಾಧ್ಯಾಪಕರಾಗಿದ್ದರೂ, ನಮ್ಮೊಂದಿಗೆ ಕುಣಿದು, ಕುಪ್ಪಳಿಸಿದ ಆ ಪ್ರತಿಯೊಬ್ಬರ ಸರಳತೆ, “ಹೆಣ್ಣು ಮಕ್ಕಳೆಲ್ಲ ನನ್ನ ಮಕ್ಕಳು’ ಎಂದು ಹೇಳುವ, ಮನೆಯಲ್ಲಿ ಪ್ರೋತ್ಸಾಹವಿಲ್ಲದ ಶೇ. 95 ಅಂಕ ಗಳಿಸಿದ ಚಿತ್ರದುರ್ಗದ ಚಂದನಾಳ ಓದಿನ ಸಂಪೂರ್ಣ ಖುರ್ಚವೆಚ್ಚವನ್ನು ಭರಿಸಿದ ಸಂಧ್ಯಾ ಅನ್ವೇಕರ್ ಮೇಡಮ್‌ನ ಪ್ರೀತಿಯನ್ನು ಮರೆಯಲು ಸಾಧ್ಯವೇ?
If anything we fail is the reflection of our thought..ಚೇತನದ ಹಿಂದೆ ದುಡಿದ ಪ್ರತಿಯೊಬ್ಬರಿಗೂ ನನ್ನ ನಮನ.
ಮರೆಯಲಾಗದ ಸವಿನೆನಪಿನ ಬುತ್ತಿ ಕಟ್ಟಿಕೊಟ್ಟಿದ್ದೀರಿ.
ದಾರಿಯುದ್ದಕ್ಕೂ ಸವಿಯುತ್ತೇವೆ, ಸಾಧಿಸುತ್ತೇವೆ.
ಚೇತನ ಆಗು ನೀ ಅನಿಕೇತನ. ಭ್ರಮರಾ ಕೆ. ಉಡುಪ
ದ್ವಿತೀಯ ಪಿಯುಸಿ- ಕಲಾ ವಿಭಾಗ
ಭಂಡಾರ್‌ಕಾರ್ ಪದವಿಪೂರ್ವ ಕಾಲೇಜು, ಕುಂದಾಪುರ.